ವಿದ್ವತ್ತು, ಪ್ರೀತಿ, ಶ್ರದ್ಧೆ ಮುಪ್ಪುರಿಗೊಂಡ ಆಜನ್ಮ ಸಾಹಿತ್ಯ ಪ್ರಸಾರದ ಕಿಂಕರ…

ಪ್ರೊ| ಸಿ.ಎನ್. ರಾಮಚಂದ್ರನ್! ಆತ್ಮೀಯ ವಲಯಗಳಲ್ಲಿ ಸಿಎನ್ನಾರ್ ಎಂದೇ ಖ್ಯಾತರಾದ ಇವರ ಕಿರು ಕಾದಂಬರಿ – ಶೋಧವನ್ನು ನಾನು ಮಾರಿದವನೇ ಆದರೂ ಕನ್ನಡದ ವಿಮರ್ಶಕರಲ್ಲಿ ಇವರು ಗಣ್ಯರೆಂದು ತಿಳಿದವನೇ ಆದರೂ ಅವರು ಮಂಗಳೂರು ವಿವಿನಿಲಯಕ್ಕೆ (ಸ್ನಾತಕೋತ್ತರ ಕೇಂದ್ರದ) ಇಂಗ್ಲಿಶ್ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ಬರುವವರೆಗೆ ನನಗೆ ವೈಯಕ್ತಿಕ ಪರಿಚಯಕ್ಕೆ ದಕ್ಕಿರಲಿಲ್ಲ. ಅವರು ಮಂಗಳೂರಿಗೆ ಬಂದ ಹೊಸತರಲ್ಲೇ ಒಮ್ಮೆ ನನ್ನಲ್ಲಿಗೆ ಬಂದಾಗ ಮನವಿ ಮಾಡಿಕೊಂಡರು, “ದಯವಿಟ್ಟು ಇಂಗ್ಲಿಶ್ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬಝಾರ್ ಗೈಡ್‌ಗಳನ್ನು ತರಿಸಬೇಡಿ.” ಗಮನಿಸಿ – ಇದು ಇಂಗ್ಲಿಶ್ ವಿಭಾಗ ಮುಖ್ಯಸ್ಥನ ಆಜ್ಞೆ ಅಲ್ಲ. ವ್ಯಾಪಾರಿಯೊಬ್ಬನ ಬೇಕು ಬೇಡಗಳನ್ನು ನಿರ್ದೇಶಿಸುವ, ಸ್ವಯಂ ಆರೋಪಿತ ಧರ್ಮದರ್ಶಿತ್ವದ ಗರ್ವವೂ ಅಲ್ಲ. ‘ಮಾಸ್ಟರ್’ಗಳಾಗಬೇಕಾದ ಅವರ ವಿದ್ಯಾರ್ಥಿಗಳು ಮೂಲ ಪಠ್ಯಗಳನ್ನು ಅರ್ಥೈಸಿಕೊಳ್ಳಲು ಒಳದಾರಿ ಹಿಡಿಯಬಾರದೆಂಬ ಕಾಳಜಿ. ನನ್ನಲ್ಲಿ ‘ಇಂಗ್ಲಿಶ್ ಎಮ್ಮೆ’ (ಗೊಡ್ಡು) ಗುರುತಿಸಿದ್ದರು ಮತ್ತು ತಮ್ಮ ಆಜನ್ಮ ಸಾಹಿತ್ಯ ಪ್ರಸಾರದ ಕೈಂಕರ್ಯದಲ್ಲಿ ನನಗೂ ಒಂದು ಗೌರವದ ಸ್ಥಾನ ಕಲ್ಪಿಸಿದ್ದರು, ಕಿರಿಯ ಗೆಳೆಯನಾಗಿ ವಿಶ್ವಾಸಕ್ಕೂ ತೆಗೆದುಕೊಂಡಿದ್ದರು! (ನಾನು ಮತ್ತೆ ಗೈಡ್‌ಗಳನ್ನು ತರಿಸಲಿಲ್ಲ ಎಂದು ಬೇರೆ ಹೇಳಬೇಕೇ?)

ಸಿಎನ್ನಾರ್ ತಮ್ಮ ವೈಯಕ್ತಿಕ ಪುಸ್ತಕ ಖರೀದಿಗೂ ಸಾಂಸ್ಥಿಕ ಪುಸ್ತಕ ಶಿಫಾರಸಿಗೂ ಸ್ವತಃ ಅಂಗಡಿಯ ಕಪಾಟುಗಳನ್ನು ನೋಡಿಯೇ ಮುಂದುವರಿಯುತ್ತಿದ್ದರು. ನಾನವರಿಗೆ ಭಾರೀ ಪುಸ್ತಕಗಳೇನೂ ಕೊಟ್ಟವನಲ್ಲ. ಆದರೆ ಇಂದು ಯೋಚಿಸುವಾಗ ಆ ಭೇಟಿಗಳು ಅವರಿಗೆ ಒಟ್ಟಾರೆ ಪುಸ್ತಕ ಮಾರುಕಟ್ಟೆಯ ಮನಸ್ಸನ್ನು ತಿಳಿದುಕೊಳ್ಳುವುದಕ್ಕೂ ಅನುಕೂಲವಾಗುತ್ತಿದ್ದಿರಬೇಕು ಅನಿಸುತ್ತದೆ. ಅದಕ್ಕೂ ಮಿಗಿಲಾಗಿ ಅವರು ಹಾಗೆ ಬಂದಾಗೆಲ್ಲಾ ನನ್ನ ಪುಸ್ತಕ ಮಾರಾಟದ್ದೂ ಇತರತ್ರವೂ (ಪರಿಸರ, ಬಳಕೆದಾರ, ಯಕ್ಷಗಾನ ಇತ್ಯಾದಿ) ಒದಗಿದ ಹೋರಾಟದ ಕಡತಗಳ (‘ಜಗಳಗಂಟ’ ಫೈಲ್ ಎಂದೇ ತಮಾಷೆಗೆ ಹೆಸರಿಸಿದ್ದೆ) ಎಷ್ಟು ಚಿಲ್ಲರೆ ಪ್ರಸಂಗವಾದರೂ ಕೇಳಿ ಪಡೆದು, ವಿವರವಾಗಿ ಓದಿ, ಚರ್ಚಿಸುತ್ತಿದ್ದರು. ಇದು ನನಗೂ ಹೆಚ್ಚಿನ ನೈತಿಕ ಬಲ ಕೊಡುತ್ತಿತ್ತು. ಅದಕ್ಕೂ ಮಿಗಿಲಾಗಿ ಈ ಮಥನದ ಒಳ್ಳೆಯ ಅಂಶಗಳನ್ನು ಸಿಎನ್ನಾರ್ ತಮ್ಮ ವ್ಯಾಪ್ತಿಯ ಕಾರ್ಯರಂಗದಲ್ಲಿ ಅಳವಡಿಸಿಕೊಂಡು, ಪುಸ್ತಕೋದ್ಯಮವನ್ನು ಹೆಚ್ಚು ಹಸನಾಗುವಂತೆ ಮಾಡಿದ್ದಕ್ಕೆ ನಾನೆರಡು ಉದಾಹರಣೆಗಳನ್ನು ಇಲ್ಲಿ ಹೇಳಲೇ ಬೇಕು.

 1. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ತನ್ನ ವರ್ಷಾವಧಿ ಪುರಸ್ಕಾರಕ್ಕೆ ಲೇಖಕ, ಪ್ರಕಾಶಕರಿಂದ ಅರ್ಜಿ ಕರೆಯುತ್ತಿದ್ದದ್ದನ್ನು (ಜೊತೆಗೆ ಆರೇಳು ಪ್ರತಿ ಪುಸ್ತಕ ಉಚಿತವಾಗಿ ಹೋಗಲೇಬೇಕಿತ್ತು) ಒಂದೋ ಎರಡೋ ವರ್ಷದ ಮಟ್ಟಿಗೆ ಪರಿಷ್ಕರಿಸಿಕೊಂಡದ್ದು ಸೀಯೆನ್ನಾರ್ ಪ್ರವೇಶದಿಂದಲೇ ಎಂದು ನಾನು ತಿಳಿದಿದ್ದೇನೆ. ಆಗ ಅಕಾಡೆಮಿಯ ಆಯ್ಕಾ ಸದಸ್ಯರಾದವರು ಪರಿಚಿತ ವಲಯಗಳಲ್ಲೂ ಸಮೀಪದ ಪುಸ್ತಕ ಮಳಿಗೆಗಳಲ್ಲೂ ಖುದ್ದು ಪುಸ್ತಕಗಳನ್ನು ನೋಡಿ, ಕೊಂಡು, ಶಿಫಾರಸು ಮಾಡಿದ್ದರು.
 2. ನೇರ ನಾನನುಭವಿಸಿದ ಇನ್ನೊಂದು ಪರಿಣಾಮ – ಮಂ.ವಿ.ವಿ ನಿಲಯದ ಗ್ರಂಥಾಲಯಕ್ಕೆ ಸಂಬಂಧ ಪಟ್ಟದ್ದು, ನಭೂತೋ ಎನ್ನುವಂತದ್ದು! ಗ್ರಂಥಾಲಯಕ್ಕೆ (ಸಾಮಾನ್ಯವಾಗಿ ಎಲ್ಲಾ ಸರಕಾರೀ ಅನುದಾನಿತ ಸಂಸ್ಥೆಗಳಿಗೂ ಇದು ಬಿಟ್ಟದ್ದಲ್ಲ!) ಸದಾ ದಾನಿ-ನಾನುತನದ ಶ್ರೇಷ್ಠಸ್ತಿಕೆ (superiority complex), ಪುಸ್ತಕ ಒದಗಣೆದಾರರಿಗೆ ದೀನ-ನಾನುತನವೇ (inferiority complex) ರೂಢಿಸಿಹೋಗಿದೆ! ಆದರೆ ನನ್ನ ಧೋರಣೆ – ಸ್ಪಷ್ಟ ಸೂಚನೆಯಿಲ್ಲದೆ ಎಂದೂ ಯಾವುದೇ ಸಂಸ್ಥೆಯನ್ನು, ಇಲಾಖಾ ಅಧ್ಯಾಪಕ ಅಥವಾ ಅಧಿಕಾರಿಯನ್ನು ನನ್ನಿಂದ ಪುಸ್ತಕ ಕೊಳ್ಳಲು ಕೇಳಿಕೊಂಡದ್ದಿಲ್ಲ, ವ್ಯಾಪಾರಕ್ಕಾಗಿ ಸ್ನೇಹ ಬೆಳೆಸಿದ್ದೂ ಇಲ್ಲ. ಆದರೂ ನನ್ನ ಪುಸ್ತಕ ವ್ಯಾಪಾರೀತನದ ಮೊದಲ ದಿನಗಳಲ್ಲಿ, ಯಾವುದೇ ಗುಣಪಕ್ಷಪಾತಿಯಾದ ವಿವಿ ಅಧ್ಯಾಪಕನೊಬ್ಬ ತಾನಾಗಿಯೇ ಒಂದಷ್ಟು ಪುಸ್ತಕಗಳು ಬೇಕೆಂದು ಆರಿಸಿದರೆ ನಾನು ಸಹಕರಿಸುತ್ತಿದ್ದೆ. ವಿವಿನಿಲಯದ ನಿಯಮಾನುಸಾರ ಅದನ್ನು ದ್ವಿಪ್ರತಿಗಳಲ್ಲಿ ‘ಆಯ್ಕಾಪಟ್ಟಿ’ (Approval Note) ಮಾಡಿ ನನ್ನ ಪ್ರತಿನಿಧಿಯ ಮೂಲಕ ಕೊಣಾಜೆಗೆ ಕಳಿಸಿಕೊಡುತ್ತಿದ್ದೆ. ನನ್ನ ಪ್ರತಿನಿಧಿ ಗ್ರಂಥಾಲಯದ ರಿಜಿಸ್ಟರಿನಲ್ಲಿ ಒಪ್ಪಿಸಲು ಒಯ್ದ ಅಷ್ಟೂ ಪುಸ್ತಕಗಳನ್ನು ನಮೂದಿಸಿ, ನಮ್ಮ ಪಟ್ಟಿಯೊಂದರ ಮೇಲೆ ‘ಆಯ್ಕೆಗೆ ಬಂದಿದೆ’ ಮುದ್ರೆ ಒತ್ತಿಸಿಕೊಂಡು ಬರಬೇಕು. ಅನಂತರ ಅವರ ಅನುಕೂಲದಲ್ಲಿ ಗ್ರಂಥಾಲಯ ‘ಇದು ಇಲ್ಲ’ ಎಂದೋ ಅಕಸ್ಮಾತ್ ಇದ್ದರೆ ‘ಹೆಚ್ಚುವರಿ ಪ್ರತಿ ಬೇಕೋ’ ಎಂದು ಷರಾ ಹಾಕಿ ವಿಷಯಕ್ಕೆ ಸಂಬಂಧಿಸಿದ ಇಲಾಖೆಗೆ ಕಳಿಸುತ್ತಿತ್ತು. ಅಲ್ಲಿನ ‘ಬೇಕು/ಬೇಡ’ಗಳನ್ನು ತರಿಸಿಕೊಂಡು ನನಗೆ ಬಿಲ್ ಮಾಡಲು ಆದೇಶ ಹೊರಡುತ್ತಿತ್ತು. ಬಿಲ್ ತ್ರಿಪ್ರತಿಗಳಲ್ಲಿ ಕೊಟ್ಟು, ಹೆಚ್ಚುವರಿ ಪ್ರತಿಗಳನ್ನು ಕೊಡುವುದೋ ತಿರಸ್ಕೃತ ಪುಸ್ತಕಗಳನ್ನು ವಾಪಾಸು ತರುವುದೋ ಮತ್ತೆ ನನ್ನ ಪ್ರತಿನಿಧಿಯೇ ಕೊಣಾಜೆಗೆ ಹೋಗಿ ಮಾಡಬೇಕಾಗುತ್ತಿತ್ತು. ಗಮನಿಸಿ, ಪ್ರತಿ ಓಡಾಟಕ್ಕೂ (ಖರ್ಚಂತೂ ಉಂಟೇ) ನಾನು ಪ್ರತಿನಿಧಿಯನ್ನು ಅರ್ಧ ದಿನದ ಮಟ್ಟಿಗೆ ನಿತ್ಯದ ಕೆಲಸದಿಂದ ಕಳೆದುಕೊಳ್ಳಬೇಕಾಗುತ್ತಿತ್ತು. ಇಷ್ಟೆಲ್ಲಾ ಆದ ಮೇಲೂ ಬಿಲ್ಲು ಅಲ್ಲೇ ಸುಮಾರು ಅವಸ್ಥಾಂತರಗಳನ್ನು ದಾಟಿ ನನಗೆ ಪಾವತಿ ಬರುವಾಗ ತಿಂಗಳು ಎರಡು ಮೂರು ಬಿಡಿ, ಎಷ್ಟೋ ಬಾರಿ ಆರ್ಥಿಕ ವರ್ಷವೇ ಕಳೆದು ಹೋದದ್ದೂ ಇತ್ತು. ವಿವಿನಿಲಯದೊಡನೆ ಅಂಥಾ ಅನುಭವಗಳು ಹೆಚ್ಚಿದ ಮೇಲೆ, ಅಂದರೆ ಸಿಎನ್ನಾರ್ ಬರುವ ಕಾಲಕ್ಕೆ, ನಾನು ‘ವಿವಿನಿಲಯಕ್ಕೆ ಪುಸ್ತಕ ಮುಟ್ಟಿಸಲು ಅನುಕೂಲವಿಲ್ಲ’ ಎಂದು ಹೇಳಲು ಕಲಿತಿದ್ದೆ. ಆಯ್ಕಾಪಟ್ಟಿಯ ಅವಕಾಶ ಹಾಗಿರಲಿ, ಪಾವತಿ ಕೊಡದೇ ಪುಸ್ತಕವನ್ನೇ ಕೊಡುವುದಿಲ್ಲ ಎನ್ನುವ ‘ದೊಡ್ಡಸ್ತಿಕೆ’ ಬೆಳೆಸಿಕೊಂಡಿದ್ದೆ! ಸಿಎನ್ನಾರ್ ವಸ್ತುಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡರು. ದಿನಕ್ಕೆ ಹತ್ತೆಂಟು ಸಲ ಯಾವ್ಯಾವುದೋ ಕೆಲಸಕ್ಕೆ ಮಂಗಳೂರಿಗೆ ಓಡಾಡುವ ವಿವಿನಿಲಯದ ವ್ಯಾನ್ ಮೂಲಕ ಪುಸ್ತಕದ ಕಟ್ಟು ತರಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ಪೂರ್ಣ ಮುಂಪಾವತಿ ಕೊಟ್ಟು, ಇಲ್ಲವಾದರೆ ವೈಯಕ್ತಿಕ ಜವಾಬ್ದಾರಿಯ ಮೇಲೆ (ನನ್ನ ಒಪ್ಪಿಗೆಯೊಡನೆ) ಹದಿನೈದೇ ದಿನಗಳಲ್ಲಿ ಪಾವತಿ ಒದಗಿಸುವ ವ್ಯವಸ್ಥೆಯನ್ನು ಯಾವುದೇ ಪಕ್ಷಪಾತದ ಸೋಂಕಿಲ್ಲದಂತೆ ನಡೆಸಿಕೊಟ್ಟಿದ್ದರು. (ಈ ವಿಚಾರದಲ್ಲಿ ವಿವಿನಿಲಯದ ಕನ್ನಡ ವಿಭಾಗದ ಹಲವು ಅಧ್ಯಾಪಕ ಗೆಳೆಯರೂ ಸ್ಮರಣಾರ್ಹರೇ) ಅಂಥಲ್ಲೂ ಒಮ್ಮೆ ಯಾವುದೋ ಪ್ರಾಮಾಣಿಕ ಕಾರಣಕ್ಕೆ ವಿವಿನಿಲಯ ಪಾವತಿ ವಿಳಂಬಿಸಿದಾಗ ಸಿಎನ್ನಾರ್ ನನಗೆ ವೈಯಕ್ತಿಕ ಚೆಕ್ ಕೊಟ್ಟು “ವಿವಿನಿಲಯದಿಂದ ನಿಮಗೆ ಚೆಕ್ ಬಂದಾಗ ನನ್ನ ಹಣ ಮರಳಿಸಿದರೆ ಸಾಕು” ಎಂದದ್ದು ನನ್ನ ಲೆಕ್ಕಕ್ಕೆ ನಭೂತೋ ಎನ್ನುವ ನೆನಪು!

ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಕನ್ನಡ ಕಾದಂಬರಿಯ ನೂರು ವರ್ಷದ ಕುರಿತೊಂದು ವಿಶೇಷ ಗೋಷ್ಠಿ ನಡೆಸಿದಾಗ ಸಿಎನ್ನಾರ್ ಒಂದು ಅವಧಿಯ ಅಧ್ಯಕ್ಷ, ನಾನು ಓರ್ವ ಪ್ರಬಂಧ(ಕೋ)ಕಾರ. ಬಸ್ಸಿನಲ್ಲಿ ಹೋಗಿ ಬರುವ ದಾರಿಯುದ್ದಕ್ಕೂ ಪುಸ್ತಕೋದ್ಯಮದ ಕುರಿತು ಅವರು ನನ್ನೊಡನೆ ನಡೆಸಿದ ವೈಚಾರಿಕ ಚರ್ಚೆ ತುಂಬಾ ಅರ್ಥಪೂರ್ಣವಾಗಿತ್ತು ಎಂದಷ್ಟೇ ಇಂದು ನೆನಪಿಸಿಕೊಳ್ಳಬಲ್ಲೆ. ನನ್ನ ಐತಿಹಾಸಿಕ ಪ್ರಜ್ಞೆಯ ಕೊರತೆಯಿಂದ ಅದನ್ನಂದು ದಾಖಲಿಸಿಕೊಳ್ಳಲಿಲ್ಲ ಮತ್ತು ಇಂದು ನೆನಪಿಸಿಕೊಳ್ಳಲಾರೆ ಎನ್ನುವುದಕ್ಕೆ ವಿಷಾದವಿದೆ.

ಸಿಎನ್ನಾರ್ ತನ್ನನುಭವಕ್ಕೆ ಹೊರಗಿನದ್ದೇ ಆದರೂ ತಾತ್ವಿಕ ಚರ್ಚೆಗಳಿಗೆ ಅವಕಾಶ ಸಿಕ್ಕಲ್ಲೆಲ್ಲಾ ಭಾಗಿಯಾಗುವ ಉತ್ಸಾಹ ಉಳಿಸಿಕೊಂಡಿದ್ದಾರೆ. ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರಯೋಗದ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದ ದಿನಗಳಲ್ಲಿ ನಾನೊಂದು ಅನೌಪಚಾರಿಕ ಚರ್ಚಾಕೂಟ (ಸಾರ್ವಜನಿಕಕ್ಕೆ ತಿಳಿಸಿ ಅಲ್ಲ) ನನ್ನ ಮನೆಯಲ್ಲೇ ನಡೆಸಿದ್ದೆ. ಒಟ್ಟಾರೆ ಪರಿಕಲ್ಪನೆಯ ಮಿದುಳು – ಶತಾವಧಾನಿ ಗಣೇಶ್ ಮತ್ತು ಪ್ರಯೋಗ ಪಟು ಉಪಾಧ್ಯ ಅವರ ಹಿಮ್ಮೇಳದ ಕಲಾವಿದರೂ ಅಂದು ಬಂದಿದ್ದರು. ಆ ಪ್ರಯೋಗಗಳ ಬಗ್ಗೆ ದೊಡ್ಡ ಅಪಸ್ವರ ತೆಗೆದ ದೇವು ಹನೆಹಳ್ಳಿಯೂ ಇದ್ದರು. ನನ್ನ ಒತ್ತಾಯಕ್ಕೆ ಪ್ರಭಾಕರ ಜೋಶಿ ಮತ್ತು ಸ್ಥಳೀಯರೇ ಆದ ಕುಂಬಳೆ ಸುಂದರರಾವ್, ಮುರಳೀಧರ ಪ್ರಭು, ಮನೋಹರ ಉಪಾಧ್ಯ ಮುಂತಾದವರೂ ಉಡುಪಿಯಿಂದ ಮುರಳಿ ಕಡೆಕಾರ್ ವಿಶೇಷ ಕಾರು ಮಾಡಿ ಸೇರಿಸಿಕೊಂಡು ಬಂದಿದ್ದ ರಾಘವ ನಂಬಿಯಾರ್, ಬನ್ನಂಜೆ ಸಂಜೀವ ಸುವರ್ಣ, ಉದ್ಯಾವರ ಮಾಧವಾಚಾರ್ ಕೂಡಾ ಭಾಗವಹಿಸಿದ್ದರು. ಮುಂದಾಗಿಯೇ ಈ ಕಲಾಪದ ಸುಳಿವು ಸಿಕ್ಕಿದ ಸಿಎನ್ನಾರ್, ತನಗೆ ಭಾರೀ ಯಕ್ಷಗಾನವಾಗಲೀ ಸದ್ಯ ಚರ್ಚೆಯಲ್ಲಿರುವ ಏಕವ್ಯಕ್ತಿ ಪ್ರಯೋಗದ್ದೇ ಆದರೂ ವೀಕ್ಷಣಾನುಭವ ಇಲ್ಲ. ಆದರೆ ನಡೆಯುವ ಚರ್ಚೆಯನ್ನು ಮುಖ್ಯವಾಗಿ ಕೇಳುವ ಕುತೂಹಲವಿದೆ. ಭಾಗವಹಿಸಬಹುದೇ ಎಂದು ಕೇಳಿ, ಬಂದು ತೊಡಗಿಕೊಂಡಿದ್ದರು. ಅದಕ್ಕೆ ಅವರ ಮೌಲಿಕ ಅಭಿಪ್ರಾಯಗಳನ್ನೂ ಕೊಟ್ಟದ್ದನ್ನು ಇಲ್ಲೇ ಹಿಂದಿನ ನನ್ನ ಲೇಖನಗಳಲ್ಲಿ ನೀವು ಗಮನಿಸಬಹುದು.

ಸಿಎನ್ನಾರ್ ನನ್ನದೇ ವ್ಯವಸ್ಥೆಯ ಮೂರು ಔಪಚಾರಿಕ ಕಾರ್ಯಕ್ರಮಗಳಲ್ಲಿ ತುಂಬಾ ಪ್ರೀತಿಯಿಂದ, ಶ್ರದ್ಧೆಯಿಂದ (ಇವೆರಡೂ ಅವರು ವಹಿಸಿಕೊಂಡ ಯಾವುದೇ ಹೊಣೆಯಲ್ಲೂ ಎದ್ದು ಕಾಣುವ ಗುಣಗಳೇ ಆಗಿವೆ) ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಭಯಾರಣ್ಯದಲ್ಲಿ ನಡೆದ ಶಿಬಿರದಲ್ಲಿ ಅವರ ಪಾತ್ರ ನೀವೀಗಾಗಲೇ ಓದಿದ್ದೀರಿ, ನಾನು ಮರುಜಪಿಸುವುದಿಲ್ಲ. ಮತ್ತೊಂದು ಕನ್ನಡದ ಖ್ಯಾತ ಕತೆಗಾರ ಬಾಗಲೋಡಿ ದೇವರಾಯರ (೧೯೨೭-೮೫) ಕುರಿತು ನಾನು ಪ್ರಕಟಿಸಿದ ಸಂಸ್ಮರಣ ಗ್ರಂಥ – ‘ದೇವಸ್ಮರಣೆ’ಯ (೨೦೦೩, ಸಂಪಾದಕ: ಜಿ.ಟಿ. ನಾರಾಯಣ ರಾವ್, ಸದ್ಯ ಪ್ರತಿಗಳು ಮುಗಿದಿವೆ) ಲೋಕಾರ್ಪಣೆ. ಅದರ ಕುರಿತ ವಿವರಗಳನ್ನು ಮುಂದೆಂದಾದರೂ ನಾನು ವಿಸ್ತರಿಸುತ್ತೇನೆ.

ಮೂರನೆಯದೂ ಹೀಗೇ ನನ್ನ ಇನ್ನೊಂದು ಪ್ರಕಟಣೆ – ದುಃಖಾರ್ತರು (೨೦೦೨, ವಿಕ್ಟರ್ ಹ್ಯೂಗೋನ ಕಾದಂಬರಿಯ ಕನ್ನಡ ಅವತರಣಿಗೆ – ಎ.ಪಿ.ಸುಬ್ಬಯ್ಯ. ಪರಿಷ್ಕೃತ ಎರಡನೇ ಮುದ್ರಣ ಬೆಲೆ ರೂ ಎಪ್ಪತ್ತು ಮಾತ್ರ) ಲೋಕಾರ್ಪಣದ್ದೇ ವೃತ್ತಾಂತ. ಆದರೆ ಇಲ್ಲಿನೊಂದು ಸಿಎನ್ನಾರ್ ವೈಶಿಷ್ಟ್ಯವನ್ನು ನಾನು ಎತ್ತಿ ಆಡಲೇಬೇಕು.

ದುಃಖಾರ್ತರು ಅನುವಾದಕ ಎ.ಪಿ.ಸುಬ್ಬಯ್ಯನವರ (೧೯೦೧-೭೭, ನನ್ನ ಅಜ್ಜ) ಕಾರ್ಯಕ್ಷೇತ್ರ ಪುತ್ತೂರು. ಸಹಜವಾಗಿ ನಾನು ಲೋಕಾರ್ಪಣ ಸಮಾರಂಭವನ್ನು ಪುತ್ತೂರಿನ ಸಭಾಭವನವೊಂದರಲ್ಲಿ, ಅದೊಂದು ಆದಿತ್ಯವಾರ ಸಂಜೆ, ಸುಪ್ರಸಿದ್ಧ ಸಾಹಿತ್ಯ ಪರಿಚಾರಕ ಬೋಳಂತಕೋಡಿ ಈಶ್ವರ ಭಟ್ಟರ ಸಹಯೋಗದಲ್ಲಿ ಆಯೋಜಿಸಿದ್ದೆ. ಅದರ ಖಾಸಾ ಸಂಭ್ರಮವನ್ನು ನನ್ನೆಲ್ಲಾ ಸೋದರ ಮಾವಂದಿರು, ಚಿಕ್ಕಮ್ಮಂದಿರೂ ಬೆಳಿಗ್ಗೆಯೇ ಒಟ್ಟಾಗಿ ಮೂಲ ಮನೆಯಲ್ಲಿ ನಡೆಸಲಿದ್ದರು. ಅದರಲ್ಲೂ ಭಾಗವಹಿಸಲು ನನ್ನೆಲ್ಲಾ ಒತ್ತಾಯವನ್ನು ಸಿಎನ್ನಾರ್ ಸವಿನಯ ನಿರಾಕರಿಸಿದರು. ಮತ್ತು ತಾನು ಸ್ವತಂತ್ರವಾಗಿ ಸಭಾಭವನಕ್ಕೆ ಸಕಾಲದಲ್ಲಿ ಬರುವ ಭರವಸೆಯನ್ನೂ ಕೊಟ್ಟುಬಿಟ್ಟರು. ಹೇಳಿದಂತೆ ಅರ್ಧ ಗಂಟೆ ಮುಂಚಿತವಾಗಿಯೇ ಬಂದರು, ಆದರೆ ಒಳಗೆ ಬರಲಿಲ್ಲ. ಎದುರುಗೊಂಡ ಈಶ್ವರ ಭಟ್ಟರು ಅವರಿಗೆ ಆತ್ಮೀಯರೇ ಇದ್ದರು. ಆದರೂ ಸಿಎನ್ನಾರ್, “ಮೊದಲು ಅಶೋಕವರ್ಧನ್ ಅವರನ್ನು ಕರೀರಿ. ಆಮೇಲೆ ನಾನು ಒಳಗ್ ಬರ್ತೀನಿ” ಎಂದರು. ಭವನದೊಳಗೇನೋ ವ್ಯವಸ್ಥೆಯಲ್ಲಿದ್ದ ನಾನು ಸ್ವಲ್ಪ ಆತಂಕದಲ್ಲೇ ದೌಡಾಯಿಸಿದೆ. ಇಲ್ಲ, ಅವರ ಮುಖಭಾವದಲ್ಲಿ ಏನೂ ಅಸಮಾಧಾನ ಕಾಣಲಿಲ್ಲ. ಆತ್ಮೀಯತೆಯಲ್ಲೇ ನನ್ನ ಭುಜಕ್ಕೆ ಕೈಹಾಕಿ ಪಕ್ಕಕ್ಕೆ ಕರೆದೊಯ್ದು ಮೆಲು ಧ್ವನಿಯಲ್ಲಿ ಹೇಳಿದರು, “ನೋಡಿ, ಮೊದಲೇ ಹೇಳಿದಂತೆ ನನ್ನದೇ ವ್ಯವಸ್ಥೆಯಲ್ಲಿ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದೀನಿ. ನೀವೇನಾದರೂ ಬಾಡ್ಗೇ ಗೀಡ್ಗೇ ಕೊಡೋದಿದ್ರೆ ಈಗ್ಲೇ ಹೇಳಿ. ನಾನು ಕಲಾಪ ನಿರಾಕರಿಸಿ ವಾಪಾಸ್ ಹೋಗ್ತೀನಿ.” ಮೊದಲು ತಮ್ಮನ್ನು ಹೇರಿಕೊಳ್ಳುವ, ಮತ್ತೆ ಕೊಡಲಿಲ್ಲ ಅಥವಾ ಕೊಟ್ಟದ್ದು ಕಡಿಮೆಯಾಯ್ತು ಅಥವಾ ಕಂಡುಕೊಂಡದ್ದು ಸಾಕಾಗಲಿಲ್ಲ ಎಂದು ಗೊಣಗುವ ಅಥವಾ ಆಟೋಪವನ್ನು ಪ್ರದರ್ಶಿಸುವ, ಮತ್ತೇನಲ್ಲದಿದ್ದರೂ ಕಲಾಪದಲ್ಲಿ ಔದಾಸೀನ್ಯ ತೋರುವ ಅಸಂಖ್ಯ ‘ಮುಖ್ಯ ಅತಿಥಿ’ಗಳ ಕಥೆ ಕೇಳಿದ್ದ ನನಗೆ ಇದು ಪೂರ್ತಿ ಹೊಸಪರಿ. ಸ್ಮರಿಸಿಕೊಂಡಾಗ ಇಂದಿಗೂ ಹೃದಯ ತುಂಬಿದ ಭಾವ ಉಕ್ಕಿಸುವ ಸಿಎನ್ನಾರ್ ವೈಖರಿ!

೧೭-೭-೨೦೧೧ರಂದು ನನ್ನ ಮಿಂಚಂಚೆ ಡಬ್ಬಿಯಲ್ಲಿ ಒಂದು ಪತ್ರ:

“ನಿಮ್ಮ ವಿಶಿಷ್ಟ ಶಿಬಿರವನ್ನು ಕುರಿತ ಐದನೆಯ ಕಂತನ್ನು ಓದಿ, ಮತ್ತೆ ಮೊದಲಿನಿಂದ ಇಡೀ ಲೇಖನಮಾಲೆಯ ಮೇಲೆ ಕಣ್ಣಾಡಿಸಿ… ನಿಮ್ಮ ತಂದೆಯವರ ಬಗ್ಗೆ ಬರೆದದ್ದು ಓದಿ, ಜಿಟಿಎನ್ ಅವರನ್ನು ಕುರಿತ ನನ್ನ ನೆನಪು-ಅನುಭವಗಳನ್ನು ದಾಖಲಿಸಬೇಕೆಂದು ಒಂದು ಬಗೆಯ ತೀವ್ರ ಕಾಂಕ್ಷೆಯಾಗುತ್ತಿದೆ. ದಾಖಲೆಯೇಕೆ? ಗೊತ್ತಿಲ್ಲ. ಹಾಗೆಯೇ, ಒಬ್ಬರ ಬ್ಲಾಗ್‌ನಲ್ಲಿ ಮತ್ತೊಬ್ಬರು ಬರೆಯಬಹುದೋ ಇಲ್ಲವೋ ಗೊತ್ತಿಲ್ಲ. ನನ್ನದು ಇಂಗ್ಲೀಷ್ ಬ್ಲಾಗ್ ಆದುದರಿಂದ ಅದರಲ್ಲಿ ಈ ಲೇಖನವನ್ನು ಸೇರಿಸಲಾಗುವುದಿಲ್ಲ. ಆದುದರಿಂದ – ಜಿಟಿಎನ್ ಕುರಿತು ನನ್ನ ಅನುಭವಗಳನ್ನು ಕಥನದ ರೂಪದಲ್ಲಿ ಬರೆದರೆ, ನಿಮ್ಮ ಬ್ಲಾಗ್‌ನಲ್ಲಿ ಸೇರಿಸಲು ಸಾಧ್ಯವೆ? ಸಾಧುವೆ? ಇವೆರಡು ಪ್ರಶ್ನೆಗಳಿಗೂ ನೀವು ‘ಅಹುದು’ ಎಂದು ಹೇಳಿದರೆ, ಇನ್ನೊಂದು ೮-೧೦ದಿನಗಳಲ್ಲಿ ಒಂದು ಲೇಖನವನ್ನು ಬರೆದು ಕಳಿಸುತ್ತೇನೆ – ಎಷ್ಟು ದೀರ್ಘವಾಗುತ್ತದೋ ಗೊತ್ತಿಲ್ಲ. ನೀವು ‘ಇದು ಬೇಡ’ ಎಂದು ಹೇಳಿದರೂ ನನಗೇನೂ ಬೇಜಾರಾಗುವುದಿಲ್ಲ. ನಿಮ್ಮ ನಿರ್ಧಾರವನ್ನು ತಿಳಿಸಿ. ನಿಮ್ಮ ರಾಮಚಂದ್ರನ್”

ಇದನ್ನೋದಿದ ಮರುಕ್ಷಣದಲ್ಲಿ ಬರೆದೆ, “ನೀವಾಗಿಯೇ ಬರೆಯುತ್ತೇನೆಂದದ್ದು ನನ್ನ ಮತ್ತು ಬ್ಲಾಗ್ ಓದುಗರ ಭಾಗ್ಯ. ಶಬ್ದ, ಕಾಲಮಿತಿಗಳಿಲ್ಲದೆ ಧಾರಾಳ ಬರೆದು ಕಳಿಸಿ – ಮೊದಲ ಓದುಗ ನಾನೇ ಆಗಿ ಪ್ರಕಟಿಸುತ್ತೇನೆ. ನಾನು ಈ ಬ್ಲಾಗನ್ನು ಸದಾ ಅರೆ -ಖಾಸಗಿ ಸಾರ್ವಜನಿಕ ಮಾಧ್ಯಮ ಎಂದೇ ಗ್ರಹಿಸಿಕೊಂಡು ನಡೆಸಿಕೊಂಡು ಬಂದವನು. ಹಲವು ಹಿರಿಯರ, ಮಿತ್ರರ ಉದ್ದುದ್ದ ಲೇಖನಗಳನ್ನು ನಾನು ಈಗಾಗಲೇ ಹಾಕಿದ್ದೇನೆ. ಮತ್ತೆ ನನ್ನ ಓದುಗರಲ್ಲಿ ಸದಾ ನನ್ನ ಮನವಿಯೂ ಒಂದೇ – ಬರಿದೇ ಔಪಚಾರಿಕ ಮಾತುಗಳನ್ನು ಪ್ರತಿಕ್ರಿಯೆ ರೂಪದಲ್ಲಿ ತುಂಬಬೇಡಿ. ನಿಮ್ಮ ಸಮ-ಅನುಭವಗಳನ್ನು ವಿಷಯಾಂತರದ ಭಯ ಮತ್ತು ಸ್ಥಳಾವಕಾಶದ ಸಂಕೋಚ ಇಟ್ಟುಕೊಳ್ಳದೆ ಬರೆದು ಬ್ಲಾಗ್ ಒಂದು ಸಾರ್ವಜನಿಕ ಉಪಯುಕ್ತ ವೇದಿಕೆಯಾಗುವಂತೆ ಸಹಕರಿಸಿ.”

***********
ಮುಂದಿನವಾರ ಪ್ರೊ| ಸಿ.ಎನ್. ರಾಮಚಂದ್ರನ್ ಅವರ ಭಾವಲಹರಿ

Advertisements

14 responses to “ವಿದ್ವತ್ತು, ಪ್ರೀತಿ, ಶ್ರದ್ಧೆ ಮುಪ್ಪುರಿಗೊಂಡ ಆಜನ್ಮ ಸಾಹಿತ್ಯ ಪ್ರಸಾರದ ಕಿಂಕರ…

 1. ಚಿಲ್ಕುಂದದ ರಾಮಚಂದ್ರನ್ ನಾನು ಮಂಗಳ ಗಂಗೋತ್ರಿಯನ್ನು ಬಿಟ್ಟ ಮೇಲೆ ಅಲ್ಲಿಗೆ ಬಂದವರು. ಆದರೆ ನಮ್ಮ ಭೇಟಿಯಾದಾಗಲೆಲ್ಲ ಅವರು ನನ್ನನ್ನು ತಮ್ಮ ಸಹೋದ್ಯೋಗಿಯಂತೆಯೇ ಕಂಡಿರುವುದು ನನಗೆ ತುಂಬ ಸಂತೋಷವನ್ನುಂಟು ಮಾಡಿದೆ. ಅವರು ಎಲ್ಲಿ ಸಿಕ್ಕಾಗಲೂ ಮಂಗಳ ಗಂಗೋತ್ರಿಯ ಹಿತವಾದ ಆತ್ಮೀಯ ತಂಗಾಳಿ ಬೀಸಿದ ಅನುಭವವಾಗುತ್ತದೆ.

 2. damodara shetty

  cnr jotege naanuu odadiddene. avara jote aarogyapuurna charchegalannuu maadiddene. jotege uutakkendu hotelige hoodaaga maatra avaru aneka kaaranagalige bhinna vyakthiyaagi kaanisuttaare. heege bhinna antha naanu helaluu illa, niivu kelaluu illa.

 3. ನಾನು ಕೊಣಾಜೆ ಸೇರಿದ್ದು ೧೯೮೫ರಲ್ಲಿ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ. ಪ್ರೊ.ಸಿಎನ್ಆರ್ ಅವರನ್ನು ಅಲ್ಲಿ ಕಂಡಿದ್ದೆ. ಇಳಿ ಬಿಟ್ಟ ಕೂದಲು, ತುಸು ಬಾಗಿದ ನಡೆ, ತುಟಿಯಲ್ಲಿ ಪೈಪ್. ಐನ್ ಸ್ಟೈನ್ ಅವರನ್ನು ನಾವು ನೋಡದಿದ್ದರೂ “ಇವರಲ್ಲಿ ಅವರನ್ನು” ಕಾಣುವುದಕ್ಕೆ ಸಾಧ್ಯವಾಗಿತ್ತು! ಕೊಣಾಜೆಯ ಹರಕು ಕ್ಯಾಂಟೀನನಲ್ಲಿ ಸಿಎನ್ ಸುತ್ತ ಇತರ ಪ್ರಾಧ್ಯಾಪಕರು. ಅವರ ಸಂಭಾಷಣೆಗೆ ಕಳೆ ಏರುತ್ತಿದ್ದಂತೆ ನಾವು ಮುದಗೊಳ್ಳುತ್ತಿದ್ದೆವು. ಸಿಎನ್ಆರ್ ಮಾತುಗಳಲ್ಲಿ ಅದೇನೋ ಮೋಡಿ. ಅವರ ಉಪನ್ಯಾಸಗಳಲ್ಲಿ ಸದಾ ಹೊಸತನ. ಅವರಿಗೆ ನನ್ನ ಪರಿಚಯವಿರದು. ಏಕೆಂದರೆ ನಾವು ಅವರನ್ನು ದೂರದಿಂದ ಕಂಡು ಬೆರಗಾಗಿತ್ತಿದ್ದುದು ಬಿಟ್ಟರೆ ಮಾತನಾಡಿದ್ದೇ ಇಲ್ಲ. ಈಗ ಅನಿಸುತಿದೆ – ಎಷ್ಟು ಕಳೆದುಕೊಂಡೆವು ನಾವೆಲ್ಲ.
  ಪುತ್ತೂರಲ್ಲಿ ಅಜ್ಜ ಅನುವಾದಿಸಿದ ದು:ಖಾರ್ತರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಕ್ಟರ್ ಹ್ಯೂಗೋ ಬಗ್ಗೆ ಅದ್ಭುತ ಪರಿಚಯ ಮಾಡಿಕೊಟ್ಟದ್ದು ಇನ್ನೂ ಹಸಿರಾಗಿದೆ. ಒಬ್ಬ ಆದರ್ಶ ಪ್ರಾಧ್ಯಾಪಕರನ್ನು ಸಿಎನ್ಆರ್ ಅವರಲ್ಲಿ ಕಾಣಬಹುದು.
  ಜಿಟಿಎನ್ ಬಗ್ಗೆ ಸಿಎನ್ಆರ್ ಬರಹ. ಆ ರಸಗವಳಕ್ಕೆ ಕಾತರದಿಂದ ಕಾಯುತ್ತಿದ್ದೇವೆ.

 4. I just like hi, I always enjoyed his company

 5. `ಮತ್ತೊಂದು ಕನ್ನಡದ ಖ್ಯಾತ ಕತೆಗಾರ ಬಾಗಲೋಡಿ ದೇವರಾಯರ’ ಈ ವಾಕ್ಯವನ್ನು ಸರಿಪಡಿಸಿ.

 6. ಅಶೋಕವರ್ಧನ

  ಓಟ ತಪ್ಪಿಸ್ಕೊಂಡ ರುಕ್ಮಿಣಿಗೆ: ಒಂದು ಶಿಬಿರ, ಮತ್ತೊಂದು ಬಾಗಲೋಡಿ, ಮೂರನೆಯದು ದುಃಖಾರ್ತರು 🙂
  ಅಶೋಕವರ್ಧನ

 7. N A Madhyastha

  Great teacher and cent percent humane. Simple and friendly.

 8. ಚೆನ್ನಾಗಿದೆ ಅಶೋಕ ಮಾವ
  ವಸಂತ್ ಕಜೆ.

 9. S Raghavendra Bhatta

  Look at the difference between these sentences — One :” I kno(e)w him personally”. Will it not make us feel proud since we want to be in the reflected glory as GTN used to caution us to burst our inflated ego !?
  Two:” I know him through his writings” Majority of our assertions are thus objective in nature and make them look — yes, look – as harmless as possible. Value judgements and worshipful psalms are totally absent in such situations.
  Even though I have neither listened to nor met Prof CNRamachandran so far, what I have heard or read about him aaaand read his criticisms in Kannada, is sufficient to make me eager to read his analysis of GTN’s personality which is our common treasured memory.
  S Raghavendra Bhatta

 10. ಜಗದೀಶ ಕೊಪ್ಪ - ಅವಧಿಯಲ್ಲಿ

  ಪ್ರಿಯ ಅಶೋಕ್ ರವರೇ, ಸಿ.ಎನ್.ಆರ್. ಬಗ್ಗೆ ತುಂಬಾ ಕಾಳಜಿಯಿಂದ ಬರೆದಿದ್ದೀರಾ. ವಂದನೆಗಳು. ಭಯ ಮತ್ತು ಭಕ್ತಿಯಿಂದ ಅವರಿಂದ ದೂರವೇ ಉಳಿದಿದ್ದ ನನ್ನಮ್ಮು ಮೂರು ವರ್ಷದ ಹಿಂದೆ ಮ್ಯಸೂರು ವಿ.ವಿ.ಯ ಸೆಮಿನಾರ್ ನಲ್ಲಿ ನನ್ನಗೆಳೆಯ ಪರಿಚಯಿಸಿ ಇವರು ಉಮರ್ ಖಾಯಾಮ್ ಹಾಗು ಗಾಲಿಬ್ ನನ್ನು ಕನ್ನಡಕ್ಕೆ ತಂದಿದ್ದಾರೆ ಎಂದರು. ಆ ಕ್ಷಣ ಅವರು ತೋರಿದ ಆಸಕ್ತಿ ಇಂದಿಗೂ ಮರೆಯಾಲಾರೆ. ನಂತರ ಅವರಿಗೆ ನನ್ನ ಪುಸ್ತಕಗಳನ್ನು ಕಳಿಸಿದಾಗ ಕಿರಿಯ ಎಂಬ ಭೇಧ ಭಾವವಿಲ್ಲದೆ ಅವರು ಬರೆದು ಕಳಿಸಿದ ಪ್ರತಿಕ್ರಿಯೆಯನ್ನು ಇಂದಿಗೂ ಜೋಪಾನವಾಗಿರಿಸಿದ್ದೇನೆ.

 11. ಸುಬ್ಬಣ್ಣ ಮತ್ತೀಹಳ್ಳಿ - ಅವಧಿಯಲ್ಲಿ

  sundaravaada mattu arthapoornavaada leekhana. c.n.r bagege chennaagi barediddeeri. DUKHAARTA kaadambari
  maru mudranada samaachaara oodi khushi
  yaayitu.

 12. ಲಕ್ಷ್ಮಿನಾರಾಯಣ ಭಟ್

  ಆತ್ಮೀಯ ಅಶೋಕವರ್ಧನರಿಗೆ ನಮಸ್ಕಾರಗಳು.

  ನನ್ನ ಪ್ರೀತಿಯ ಗುರುಗಳ ಬಗ್ಗೆ ನೀವು ಆತ್ಮೀಯವಾಗಿ ಬರೆದದ್ದನ್ನು ಓದಿ ತುಂಬಾ ಖುಷಿ ಆಯಿತು. ಎಳ್ಳಷ್ಟೂ ಉತ್ಪ್ರೇಕ್ಷೆ ಇಲ್ಲದ ವಸ್ತುನಿಷ್ಠ ಬರೆಹ ನಿಮ್ಮದು. ಧನ್ಯವಾದಗಳು ಹಾಗೂ ಹಾರ್ದಿಕ ಶುಭಾಶಯಗಳು.

  ಸಿ.ಎನ್.ಆರ್. ಅವರ ಮಾತು, ಕೃತಿಗಳೆರಡರಲ್ಲೂ ಕಂಡುಬರುವ ಒಂದು ಸಾಮಾನ್ಯ ಅಂಶವೆಂದರೆ ನಿಖರತೆ ಮತ್ತು ಖಚಿತತೆ. ಅವರು ತಮ್ಮ ವಾದವನ್ನು ಮಂಡಿಸುವ ರೀತಿ ಒಂದು ಅನುಸರಣೀಯ ಮಾದರಿ. ಅದಕ್ಕೆ ಅವರು ಮಾಡಿಕೊಳ್ಳುವ ಪೂರ್ವ ತಯಾರಿ, ಟಿಪ್ಪಣಿಗಳು ವಿದ್ವತ್ಪೂರ್ಣವಾಗಿರುವುದರಿಂದಲೇ ಅವರ ಭಾಷಣಗಳು ಅನೇಕ ಹೊಸ ಒಳನೋಟಗಳನ್ನು ಕೇಳುಗರ / ಓದುಗರ ಮುಂದೆ ತೆರೆದಿಡುತ್ತವೆ. ಉದಾ: ಅಭಿಜ್ಞಾನ ಶಾಕುಂತಲಂ ನ ಆಂತರಿಕ ರಚನೆಯನ್ನು ಸಿ.ಎನ್.ಆರ್. ಗ್ರಹಿಸಿದ ರೀತಿ ನಿಜಕ್ಕೂ ಬೆರಗುಗೊಳಿಸುವಂತದ್ದು. ಬೇಟೆಯಾಡಲು ಬಂದ ದುಷ್ಯಂತ ತಾನೇ ಬೇಟೆಯಾಡಲ್ಪಡುವ ಚೋದ್ಯ – The hunter becomes the hunted – ಒಂದು ಹೊಸಬಗೆಯ ಪ್ರಬುದ್ಧ ಓದುವಿಕೆಯ ಫಲಶೃತಿ. ದುಷ್ಯಂತನನ್ನು ನಾವು ಪ್ರಥಮವಾಗಿ ಕಾಣುವುದೇ ಜಿಂಕೆಯನ್ನು ಬೆನ್ನಟ್ಟಿ ಬರುವ ಬೇಟೆಗಾರನ ರೂಪದಲ್ಲಿ – ತತಃ ಪ್ರವಿಶತಿ ಮೃಗಾನುಸಾರೀ ಸಶರಚಾಪಹಸ್ತೋ ರಾಜಾ – ನಾಟಕವು ಮುಂದುವರಿದಂತೆ ನಮಗೆ ಈ ಜಿಂಕೆ ಶಕುಂತಳೆಯ ಸಂಕೇತವಾಗುವುದು ಕಾಣಬರುತ್ತದೆ. [ಹೆಚ್ಚಿನ ವಿವರಗಳಿಗೆ ನೋಡಿ: ಆಶಯ-ಆಕೃತಿ, ಸಿ.ಎನ್. ರಾಮಚಂದ್ರನ್, ಅಭಿನವ, ಬೆಂಗಳೂರು, ೧೯೯೫ ಪು.೨೪೩] ಇದನ್ನು ಓದಿದಾಗ ಥಟ್ಟನೆ ಅವರನ್ನು ಕೇಳಬೇಕೆನಿಸಿದ್ದು: ಈ ರೀತಿಯ ಓದು ನಿಮಗೆ ಸಾಧ್ಯವಾಗುವುದು ಹೇಗೆ? ಅಥವಾ ನಿಮ್ಮ ದೃಷ್ಟಿಗೆ ಹೊಳೆಯುವ ಅಂಶಗಳು ನಮಗೇಕೆ ಹೊಳೆಯುವುದಿಲ್ಲ? ಒಂದೇ ಓದಿಗೆ ಇದು ನಿಮಗೆ ಸಾಧ್ಯವಾಗುತ್ತದೆಯೋ? ಅಥವಾ ಮತ್ತೆ ಮತ್ತೆ ಮೂಲಕ್ಕೆ ಬರುತ್ತೀರೋ? ಈ ಪ್ರಶ್ನೆಗಳು ಬಾಲಿಶ ಅನಿಸಿದರೂ ಅವುಗಳ ಹಿಂದಿನ ವಿಸ್ಮಯದ ಭಾವ ಸದಾ ನನ್ನನ್ನು ಕಾಡುತ್ತದೆ.

  ಹಾಗೆಯೇ ಸಿ.ಎನ್.ಆರ್. ಅವರ ಈ ಮಾತುಗಳನ್ನು ಗಮನಿಸಿ: ಒಂದು ಕೃತಿಯಲ್ಲಿ ನಾವು ಎರಡು ವಿಧದ ರಚನೆಗಳನ್ನು, ವಿನ್ಯಾಸಗಳನ್ನು ಗುರುತಿಸಬಹುದು – ಆಂತರಿಕ ರಚನೆ ಹಾಗೂ ಬಾಹ್ಯ ರಚನೆ. ಬಾಹ್ಯರಚನೆ ಲೇಖಕನ ಜಾಗೃತ ಪ್ರಜ್ಞೆಗೆ ಸಂಬಂಧಿಸಿದ್ದು, ಅವನ ನಿಲುವನ್ನು, ಸಿದ್ಧಾಂತವನ್ನು, ವಿಚಾರವನ್ನು ಘೋಷಿಸಬಹುದು. ಆದರೆ ಇದಕ್ಕೆ ವಿರುದ್ಧವಾಗಿ, ಆ ಕೃತಿಯ ಆಂತರಿಕ ರಚನೆ – ಘಟನೆಗಳ ವಿಶಿಷ್ಟ ಜೋಡನೆ, ವಿವರಗಳ ಧ್ವನಿ, ಪಾತ್ರವಿನ್ಯಾಸ, ಕಾಲ-ದೇಶಗಳ ವಿಶಿಷ್ಟ ಉಪಯೋಗ, ಇತ್ಯಾದಿ ಮತ್ತೊಂದೇ ನಿಲುವನ್ನು, ವಿಚಾರವನ್ನು ಮೂಡಿಸಬಹುದು. ಎಲ್ಲಾ ಶ್ರೇಷ್ಟ ಕೃತಿಗಳಲ್ಲೂ ಇಂತಹ ಆಂತರಿಕ, ಬಾಹ್ಯರಚನೆಗಳು ಪರಸ್ಪರ ಘರ್ಷಿಸುತ್ತವೆ ಮತ್ತು ಇಂತಹ ಘರ್ಷಣೆಯ ಮೂಲಕ ಒಂದು ಅಪೂರ್ವ ಅನುಭವವನ್ನು, ಅರಿವನ್ನು ಓದುಗರಿಗೆ, ಪ್ರೇಕ್ಷಕರಿಗೆ ಕೊಡುತ್ತವೆ [ಪು.೯೫]. ಇದಕ್ಕೆ ಉದಾಹರಣೆಯಾಗಿ ಅವರು ಪಂಪ ತನ್ನ ರಾಜ ಅರಿಕೇಸರಿಯನ್ನು ಅರ್ಜುನನೊಡನೆ ಸಮೀಕರಿಸುವ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಅಯಾಚಿತವಾಗಿ ಚಲದೋಳ್ ಧುರ್ಯೋಧನಂ ನನ್ನಿಯೊಳಿನತನಯಂ ಇತ್ಯಾದಿ ಪಾಂಡವರಿಗಿಂತ ಹೆಚ್ಚಾಗಿ ಕೌರವ-ಕರ್ಣರನ್ನು ಸ್ಮರಿಸುವ ಅಂಶವನ್ನು ಉದ್ಧರಿಸುತ್ತಾರೆ [ಪು.೯೬].
  ಇದರೊಂದಿಗೆ ಸಿ.ಎನ್.ಆರ್. ಅವರ ಸಣ್ಣ ಕಥೆಗಳ ಸಂಕಲನ ಕಸಾಂದ್ರದ ಕುರಿತು ನಾನು ಬರೆದ ವಿಮರ್ಶಾಲೇಖನವನ್ನು ಇಲ್ಲಿ ಸೇರಿಸಿದರೆ ಅಪ್ರಸ್ತುತವಾಗಲಾರದು ಎಂದು ಭಾವಿಸುತ್ತೇನೆ.

  ಕಸಾಂದ್ರ: ಒಂದು ಕಿರು ವಿಮರ್ಶೆ
  [ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು, ೨೦೧೧ ಪು.೧೨೦ ಬೆಲೆ: ರೂ.೮೦/-]

  ಬಹುಭಾಷಾ ವಿದ್ವಾಂಸರಾದ ಡಾ| ಸಿ.ಎನ್. ರಾಮಚಂದ್ರನ್ ಖಚಿತ ನಿಲುವುಗಳುಳ್ಳ, ಗುಣಗ್ರಾಹೀ ವಿಮರ್ಶಕರೆಂದೇ ಖ್ಯಾತನಾಮರು. ಅವರ ಸಂವೇದನಾಶೀಲ ವ್ಯಕ್ತಿತ್ವದ ಇನ್ನೊಂದು ಮುಖದ ಪರಿಚಯವಾಗಬೇಕಿದ್ದರೆ ಇತ್ತೀಚೆಗೆ ಬಿಡುಗಡೆಗೊಂಡ ಅವರ ಸಣ್ಣ ಕಥೆಗಳ ಸಂಕಲನ ಕಸಾಂದ್ರವನ್ನು ಓದಬೇಕು.

  ಬದುಕಿನ ಅನೂಹ್ಯ, ಅನಿರೀಕ್ಷಿತ ತಿರುವುಗಳನ್ನು ಒಂದು ಬಗೆಯ ದಿಗ್ಭ್ರಮೆ, ವಿಸ್ಮಯ, ಕುತೂಹಲಗಳಿಂದ ನೋಡುವುದರ ಹೊರತು ಅನ್ಯದಾರಿ ಇಲ್ಲ [ನಾನ್ಯಪಂಥ: ಅಯನಾಯ ವಿದ್ಯತೇ!] ಎಂಬುದನ್ನು ಕಸಾಂದ್ರ ಬಹಳ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಕಾರ್ಯ-ಕಾರಣ ಸಂಬಂಧಗಳು ನಮ್ಮ ಅರಿವಿನ ಪರಿಧಿಗೆ ಬಹುತೇಕ ಹಿನ್ನೋಟದ ರೂಪದಲ್ಲಿ ಮಾತ್ರ ದಕ್ಕಲು ಸಾಧ್ಯ ಎಂಬುದನ್ನೂ ಕಸಾಂದ್ರ ಸರಿಯಾಗಿಯೇ ಗ್ರಹಿಸಿದೆ. ನಮ್ಮ ವ್ಯಕ್ತಿತ್ವವನ್ನೇ ರೂಪಿಸುವ ಅಥವಾ ಛಿದ್ರಗೊಳಿಸುವ ಪ್ರಭಾವೀ ಘಟನೆಗಳಿಗೆ ನಾವು ಪ್ರತಿಕ್ರಿಯಿಸುವ ರೀತಿ ನಾವು ಬದುಕನ್ನು ಹೇಗೆ ಪರಿಭಾವಿಸುತ್ತೇವೆ ಎನ್ನುವುದನ್ನು ಸೂಚಿಸುತ್ತದೆ. ನಮ್ಮ ಅಸಹಾಯಕತೆ ಮತ್ತು ನಮ್ಮ ಗ್ರಹಿಕೆಗೂ ಮೀರಿದ ಯಾವುದೋ ಒಂದು ಶಕ್ತಿ ನಮ್ಮ ಬದುಕನ್ನು ನಿಯಂತ್ರಿಸುತ್ತದೆಯಲ್ಲವೇ ಎಂಬ ಗುಮಾನಿ ಹಾಗೂ ಸಮಾಧಾನ ಒಟ್ಟೊಟ್ಟಿಗೇ ಆದಾಗ ಅದು ಉಂಟುಮಾಡುವ ಹಪಹಪಿಕೆಯೂ ಒಂದು ಚೋದ್ಯವಾಗಿ ಬೇತಾಳ ಪ್ರಶ್ನೆಯಂತೆ ನಮ್ಮನ್ನು ಕಾಡುತ್ತದೆ. ಬದುಕಿನ ಸಂಕೀರ್ಣತೆಗೆ ಕಸಾಂದ್ರ ಒಂದು ಸಮರ್ಥ ರೂಪಕವಾಗಿ ಮೂಡಿಬಂದಿದೆ. ಬದುಕಿನಲ್ಲಿ ಬಹುತೇಕ ಉತ್ತರಗಳಿಗಿಂತಲೂ ಪ್ರಶ್ನೆಗಳೇ ಹೆಚ್ಚು ಭಯಾನಕವಾಗಿರುತ್ತವೆ ಮತ್ತು ನಮ್ಮ ತೊಳಲಾಟಗಳಿಗೆ, ಸಂಕಟಗಳಿಗೆ ಮೂಲದ್ರವ್ಯ ಈ ಪ್ರಶ್ನೆಗಳೇ ಎನ್ನುವ ಕಟು ವಾಸ್ತವ ಕೊನೆಗೂ ಆ ಮದುವೆ ಆಯಿತಾ ಸಾರ್? ಸರೋಜಾಳ ಗಂಡನಿಗೆ ಏನಾಯ್ತು? ಎಂಬ ಪ್ರಶ್ನೆಯಲ್ಲಿ ಪರ್ಯಾವಸಾನವಾಗುತ್ತದೆ. ಇಲ್ಲಿ ಪ್ರಶ್ನೆಯೇ ಉತ್ತರವಾಗುವ ಭೀತಿ ಹಾಗೂ ಅನಿಶ್ಚಿತತೆ ಬದುಕಿನ ನಿರಂಕುಶ ಗತಿಗೆ ಹಿಡಿದ ಕನ್ನಡಿಯಾಗುತ್ತದೆ.

  ಅಂಟು ಕಥೆ ಜೀವನದಲ್ಲಿ ನಂಬಿಕೆ – ವಾಸ್ತವಗಳ ನಡುವಿನ ಕಂದರವನ್ನು ಶೋಧಿಸುತ್ತದೆ. ರೂಢಮೂಲ ನಂಬಿಕೆಗಳು ಬದುಕಿನ ಅಸ್ತಿವಾರಗಳೇ. ಆ ನಂಬಿಕೆಗಳು ಅಲುಗಾಡಿದಾಗ, ಅದರ ಮೇಲೆ ಕಟ್ಟಿದ ಬಾಳಸೌಧವೂ ಡೋಲಾಯಮಾನವಾಗುತ್ತದೆ. ಸತ್ಯ ಎಂಬುದೊಂದಿದೆಯೇ? ಇದ್ದರೆ ಅದರ ಸ್ವರೂಪವೇನು? ಮತ್ತೆ ಸತ್ಯಸ್ಯ ಮುಖಾನಿ ಭಿನ್ನಾನಿ ಎಂಬ ವಾಕ್ಯಕ್ಕೆ ಏನು ಅರ್ಥ, ಇತ್ಯಾದಿ, ಇತ್ಯಾದಿ ಗೊಂದಲಗಳನ್ನು ಅಂಟು ಉತ್ತರಿಸಲು ಪ್ರಯತ್ನಿಸುತ್ತದೆ. ನಂಬಿಕೆಯೇ ಬದುಕಿನ ತಳಹದಿ ಎಂಬುದು ಒಂದು ಸ್ಥೂಲ ಪ್ರಮೇಯವಾದರೂ ಅದರ ಸತ್ಯಾಸತ್ಯತೆಯ ವಿಮರ್ಶೆ ಆಘಾತಕಾರಿ ಪರಿಣಾಮವನ್ನುಂಟುಮಾಡುವ ಬಗೆ ತಲ್ಲಣ ಹುಟ್ಟಿಸುವಂತದ್ದು. ಭೈರಪ್ಪನವರ ವಂಶವೃಕ್ಷದ ಶ್ರೀನಿವಾಸ ಶೋತ್ರಿಯವರಿಗೆ ತಾನು ಹಾದರದ ಕೂಸು ಎನ್ನುವ ಸತ್ಯ ಗೊತ್ತಾಗುತ್ತಲೇ ಅವರ ಬಾಳು ಒಳಗೂ, ಹೊರಗೂ ಕುಸಿಯುವಂತೆ, ಅಂಟು ಕಥೆಯೂ ಈ ಕುಸಿತವನ್ನು ಇನ್ನಿಲ್ಲದಂತೆ ಚಿತ್ರಿಸುತ್ತದೆ. ಜಾತಿ, ಧರ್ಮದ ಪ್ರಶ್ನೆಗಳು ಸದಾ ಜೀವಂತವಾಗಿರುತ್ತವೆ ಮತ್ತು ಅವುಗಳಿಂದ ನಮಗೆ ಬಿಡುಗಡೆಯೇ ಇಲ್ಲ ಎನ್ನುವ ಕಹಿಸತ್ಯವನ್ನು ಈ ಕಥೆ ಚಿತ್ರಿಸುತ್ತದೆ. ಜಾತಿ ಮತ್ತು ಧರ್ಮ ಎಂಬ ಈ ಅವಳಿ ಶಕ್ತಿಗಳು ನಮ್ಮ ಜೀವನವನ್ನು ಪ್ರಭಾವಿಸುವ ರೀತಿ ಮತ್ತದರ ಕ್ರೌರ್ಯ ಅತ್ಯಂತ ನಿರ್ಣಾಯಕವಾಗಿರುತ್ತದೆ! ಸ್ವಧರ್ಮೇ ನಿಧನಂ ಶ್ರೇಯಃ – ಒಂದು ಎಚ್ಚರಿಕೆಯೋ, ಹುನ್ನಾರವೋ, ವ್ಯಾವಹಾರಿಕ ಜಾಣ್ಮೆಯೋ, ಅಪರಿಹಾರ್ಯ ಪ್ರಶ್ನೆಯೋ [ಅಪರಿಹಾರ್ಯಾರ್ಥೇ ಕಾರ್ಯೇ ನ ತ್ವಂ ಶೋಚಿತುಮರ್ಹಸಿ |] ಒಂದೂ ಅರಿಯದ ಸ್ಥಿತಿಯೇ ಇದರ ಕಥಾ ಹಂದರ. ಅಂಟು ಕಥೆ ಈ ನೆಲೆಯಲ್ಲಿ ಒಂದು ಸಾರ್ಥಕ ಬರೆಹ.

  ಗಂಡು-ಹೆಣ್ಣಿನ ಸಂಬಂಧದ ನಿಜವಾದ ಅಸ್ತಿವಾರ ಯಾವುದು? ಅವರಿಬ್ಬರನ್ನು ಬೆಸೆಯುವ / ಬೇರ್ಪಡಿಸುವ ಶಕ್ತಿಗಳು ಸರಳೀಕೃತ ಸೂತ್ರರೂಪದಲ್ಲಿರಲು ಸಾಧ್ಯವೇ? ಮುಖ್ಯವಾಗಿ, ಅಸುರಕ್ಷತೆಯ ಭಾವನೆ ಯಾವಾಗ ಮತ್ತು ಹೇಗೆ ನಮ್ಮನ್ನು ಅತಂತ್ರಗೊಳಿಸುತ್ತಾ ಹೋಗುತ್ತದೆ ಮತ್ತು ನಮ್ಮೊಳಗಿನ ಮಾನವೀಯತೆಯನ್ನು ನುಂಗಿ ನೊಣೆಯುತ್ತದೆ ಎಂಬ ಪ್ರಶ್ನೆಗೆ ಉತ್ತರದಂತಿದೆ ಈ ಸಂಕಲನದ ಇನ್ನೊಂದು ಕಥೆ ಬರೆಯಲಾಗದ ಲೇಖನ.

  ವಿಧಿ ಮತ್ತು ಮನುಷ್ಯ ಪ್ರಯತ್ನ ಇವುಗಳ ನಡುವೆ ಏನಾದರೂ ಸಂಬಂಧ ಇದೆಯೇ? ಇದ್ದರೆ ಅದರ ಸ್ವರೂಪ ಏನು ಎಂಬುದನ್ನು ವಿಶ್ಲೇಷಿಸುವ / ಅರ್ಥೈಸಿಕೊಳ್ಳುವ ಒಂದು ಪ್ರಯತ್ನ ಪ್ಲಾನ್ಷೆಟ್ ಕಥೆಯ ವಿನ್ಯಾಸವನ್ನು ರೂಪಿಸಿದೆ. ಬದುಕಿಗೆ ಸಂದಿಗ್ಧತೆ ಒದಗುವುದೇ ಅದರ ಅನಿಶ್ಚಿತತೆಯಿಂದ – ಯಾವುದನ್ನೂ ಇದಮಿತ್ಥಂ ಎಂದು ಹೇಳಲಾಗದಿರುವುದರಿಂದ. ವಿಧಿ ಮತ್ತು ಮನುಷ್ಯ ಪ್ರಯತ್ನಗಳ ನಡುವಿನ ತಾಕಲಾಟ / ಹೊಯ್ದಾಟ ಯುಗಯುಗಾಂತರಗಳಿಂದ ನಡೆದು ಬಂದದ್ದೇ! ಅತ್ಯಂತ ಶ್ರೇಷ್ಠವೆನಿಸುವ ಎಲ್ಲಾ ಕಾಲದ ಎಲ್ಲಾ ಬರೆಹಗಳೂ ಈ ಪ್ರಶ್ನೆಯನ್ನು ತಾತ್ವಿಕ ನೆಲೆಯಲ್ಲಿ ಒಳಗೊಂಡಿರುತ್ತವೆ. ಯಾವುದು ಯಾವುದನ್ನು ನಿಯಂತ್ರಿಸುತ್ತದೆ ಎಂದು ತಿಳಿಯಲಾಗದ ಚಡಪಡಿಕೆ ಬದುಕಿನ ಗತಿಗೆ ಒಂದು ವೇಗೋತ್ಕರ್ಷವನ್ನು ಒದಗಿಸುತ್ತದೆ ಎಂಬ ಅಭಿಪ್ರಾಯ ಬಹುಶಃ ಸತ್ಯಕ್ಕೆ ಅತೀ ಸಮೀಪವಾದುದು ಎಂದು ಗ್ರಹಿಸಬಹುದಲ್ಲವೇ? ಅಥವಾ ನಮ್ಮ ಆಡುಭಾಷೆಯಲ್ಲಿ ಹೀಗೂ ಹೇಳಬಹುದೇನೋ: ಹಲ್ಲಿದ್ದಾಗ ಕಡಲೆ ಇಲ್ಲ; ಕಡಲೆ ಇದ್ದಾಗ ಹಲ್ಲಿಲ್ಲ – ಒಂದೊಮ್ಮೆ ಎರಡೂ ದಕ್ಕಿದಾಗ ಅನುಭವಿಸುವ ವಯಸ್ಸೋ, ಮನಸ್ಸೋ ಇರುವುದಿಲ್ಲ!! ನಮ್ಮ ಗತಕಾಲದ ಸ್ಮರಣೆಯಿಂದ ತಪ್ಪಿಸಿಕೊಳ್ಳಲೂ ಆಗದೆ, ಅದನ್ನು ಒಪ್ಪಿ, ಅಪ್ಪಿಕೊಳ್ಳಲೂ ಆಗದೆ ತೊಳಲಾಡುವ ಅತಂತ್ರಸ್ಥಿತಿ ಬದುಕಿನುದ್ದಕ್ಕೂ ನಮ್ಮನ್ನು ಕಾಡುವ ಪರಿಯನ್ನು ಪರಿಣಾಮಕಾರಿಯಾಗಿ ಅಖಂಡ ತೃಪ್ತ್ಯರ್ಥಂ ಕಥೆ ಬಿಂಬಿಸುತ್ತದೆ. ಕಳಕೊಂಡ ಬಾಲ್ಯ, ಬಡತನ ಕೊಡುವ ಸೂಕ್ಷ್ಮ ರೂಕ್ಷತೆ, ಅಲ್ಲೂ ಸಲ್ಲದ, ಇಲ್ಲೂ ಸಲ್ಲದ ಅನಾಥ ಪ್ರಜ್ಞೆ, ನಿರಂತರವಾಗಿ ಕಾಡುವ ಅಪರಾಧೀ ಮನೋಭಾವ ಇವೆಲ್ಲವನ್ನೂ ಸಂವಹಿಸಲು ಈ ಕಥಾಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಅಂತೆಯೇ, ಕಳ್ಳರಿದ್ದಾರೆ, ಎಚ್ಚರಿಕೆ – ನಮ್ಮೊಳಗಿನ ಅವ್ಯಕ್ತ ಹೆದರಿಕೆಗೆ ಒಂದು ವ್ಯಾಖ್ಯಾನ ಎನ್ನಬಹುದು. ಭಯದ ನೆರಳಲ್ಲೇ ಸಾಗುವ ಬದುಕನ್ನು ಸಹ್ಯವಾಗಿಸುವುದು ಹೇಗೆ ಎನ್ನುವ ಜಿಜ್ಞಾಸೆ ಇಲ್ಲಿದೆ.

  ಅನಿರೀಕ್ಷಿತ ತಿರುವುಗಳೇ ಬದುಕಿನ ಜೀವಾಳ. ಈ ತಿರುವುಗಳು ಕೊಡುವ ಹೆಗ್ಗಳಿಕೆಯೋ, ಮೂದಲಿಕೆಯೋ ನಮ್ಮ ಸ್ಥಾನವನ್ನು ನಿಷ್ಕರ್ಷಿಸಿ ಅದರ ಮೌಲ್ಯಮಾಪನ ಮಾಡಿ, ಹಣೆಪಟ್ಟಿ ಅಂಟಿಸಿ ಬದುಕಿನ ರಂಗಸ್ಥಳದಲ್ಲಿ ಧುತ್ತೆಂದು ನಿಲ್ಲಿಸುತ್ತವೆ. ಇದರಲ್ಲಿ ನಮ್ಮ ಪಾಲೆಷ್ಟು, ಇತರ ಶಕ್ತಿಗಳ ಪಾಲೆಷ್ಟು – ತಿಳಿಯುವ ಬಗೆ ಹೇಗೆ? ಈ ದ್ವಂದ್ವವನ್ನು ನಮ್ಮೆಲ್ಲರ ಪ್ರತಿನಿಧಿಯಾದ ಗಾಯಾಳು ಸಾಕ್ರೆಟೀಸ್ನ ವೃತ್ತಾಂತ ಅತ್ಯಂತ ಸಮರ್ಥವಾಗಿ ಚಿತ್ರಿಸುತ್ತದೆ. ನೈತಿಕ ಧೈರ್ಯವನ್ನು ಮೈಗೂಡಿಸಿಕೊಳ್ಳುವುದು ದೈಹಿಕ ಧೈರ್ಯಕ್ಕಿಂತ ಹೆಚ್ಚು ದುಸ್ತರ ಎನ್ನುವುದನ್ನು ಈ ಕಥೆಯ ಮೂಲ ಲೇಖಕ, ಬ್ರೆಕ್ಟ್ ಗಾಯಾಳು ಸಾಕ್ರೆಟೀಸ್‌ನ ಪಾತ್ರದ ಮೂಲಕ ನಾಟಕೀಯವಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಡಾ| ಸಿ.ಎನ್.ಆರ್. ಅವರ ಅನುವಾದ ಈ ಆಶಯವನ್ನು ಓದುಗರಿಗೆ ಮುಟ್ಟಿಸುವುದರಲ್ಲಿಯೂ ಅತ್ಯಂತ ಯಶಸ್ವಿಯಾಗಿದೆ.

  ಅಂತರಂಗದ ವಿಮರ್ಶಕನ ಎಚ್ಚರ ಡಾ| ಸಿ.ಎನ್.ಆರ್. ಅವರ ಬರೆಹದ ಹದವನ್ನು ಬಲು ಜತನದಿಂದ ಯಾದೃಛ್ಛಿಕವಾಗಿ ನಿಯಂತ್ರಿಸುತ್ತದೆ ಎಂಬುದಕ್ಕೆ ಈ ಸಂಕಲನದ ಕಥೆಗಳೇ ಸಾಕ್ಷಿ.

  ಲಕ್ಷ್ಮೀನಾರಾಯಣ ಭಟ್ ಪಿ.
  ಗುರುವಾರ, ಮಾರ್ಚ್ ೧೦, ೨೦೧೧

 13. ಸಿ ಎನ್ ಆರ್ ಎಂದರೆ ಚಿಂತನಶೀಲ ವಿಮರ್ಶೆ ಮಾಡುವವರು, ಹದವರಿತು ಜವಾಬ್ದಾರಿ ನಿರ್ವಹಿಸುವವರು ಎನ್ನುವುದು ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಎಲ್ಲರಿಗೂ ತಿಳಿದ ಸತ್ಯ. ಅವರ ಜೊತೆಗಿನ ಒಡನಾಟದ ವಿವರಗಳೊಡನೆ ಅವರ ವ್ಯಕ್ತಿತ್ವ ಪರಿಚಯಿಸಿದ್ದೀರಿ, ವಂದನೆಗಳು-ಲೀಲಾಅಪ್ಪಾಜಿ

 14. srinivasrao.a

  Thank you sir for giving another dimension about prof.CNR.He has a greet skill of making complex and complicated things as a simple one.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s