ರಣಘೋಷ – ಹೀಗೊಂದು ಯಕ್ಷಗಾನ!

ಶಿವರಾಮಕಾರಂತ ಪೀಠ, ಮಂವಿವಿನಿಲಯ ಈಚೆಗೆ ‘ಕಾರಂತರು ಮತ್ತು ಯಕ್ಷಗಾನ’ ಎಂಬೊಂದು ದಿನದುದ್ದದ ವಿಚಾರ ವಿಚಾರಗೋಷ್ಠಿ ಹಮ್ಮಿಕೊಳ್ಳಲಿದ್ದ ಸುದ್ಧಿ ನನಗೆ ಸಿಕ್ಕಿತು. ಸಹಜವಾಗಿ ನಾನು ವಿಚಾರಿಸಿದೆ, “ಕಾರಂತ ಪ್ರಯೋಗದ ಸಮರ್ಥ ಪ್ರದರ್ಶನ ಅಥವಾ ಪ್ರಾತ್ಯಕ್ಷಿಕೆಯನ್ನು ಕೊಡಬಹುದಾದ ಏಕೈಕ ತಂಡ ಉಡುಪಿಯ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರ. ಸಹಜವಾಗಿ ದಿನಪೂರ್ತಿ ಪ್ರಬಂಧ, ಚರ್ಚೆಗಳಿಗೆ ಕಲಶಪ್ರಾಯವಾಗಿ ಅವರ ಪ್ರದರ್ಶನ ಇರಲೇಬೇಕು. ಪ್ರಸಂಗ ಯಾವುದು?” ನನ್ನದು ಉದ್ದೇಶವಿಲ್ಲದ ಅಧಿಕ ಪ್ರಸಂಗವಾಗಿತ್ತು! ಕಾರಂತ ಪ್ರಯೋಗಗಳ ಉತ್ತರಾಧಿಕಾರದ ಕಾನೂನು ಹೋರಾಟ ಅತ್ಯುಚ್ಛ ನ್ಯಾಯಾಲಯದವರೆಗೂ ಏರಿದ್ದು, ಯಕ್ಷಗಾನ ಕೇಂದ್ರಕ್ಕೆ ಆಂಶಿಕ ಸೋಲಾದದ್ದು ನನಗೆ ತಿಳಿಯದ್ದೇನೂ ಅಲ್ಲ. (ಆ ಪ್ರಸಂಗದಲ್ಲಿ ಯಕ್ಷಗಾನ ಕೇಂದ್ರ ನನಗೆ ಹತ್ತಿರವಿದ್ದಷ್ಟೇ ಎದುರು ಪಕ್ಷದ ವಕೀಲ, ಎ.ಪಿ. ಗೌರೀಶಂಕರ – ನನ್ನ ಸೋದರಮಾವ, ಆತ್ಮೀಯರು!) ನ್ಯಾಯಾಲಯವೇ ಒಪ್ಪಿಗೆ ಕೊಟ್ಟ ಮಿತಿಗಳ ಒಳಗೆ ಆ ಗೋಷ್ಠಿಗೆ ಏನಾದರೂ ದಕ್ಕೀತು ಎಂಬ ನಿರೀಕ್ಷೆ ನಾನು ಇಟ್ಟುಕೊಂಡದ್ದು ತಪ್ಪಾಗಿತ್ತು. ಕಾರಂತ ಪೀಠ ಅವಶ್ಯ ಕೇಳಿದ್ದರು ಕೂಡಾ. ಆದರೆ ಉಡುಪಿಯ ಯಕ್ಷಗಾನ ಕೇಂದ್ರ ಕಾನೂನಿನ ಹೊಸ ‘ರಣಘೋಷ’ ಕೇಳಿಸಿಕೊಳ್ಳಲಿಚ್ಛಿಸದೆ, ವಿವಿನಿಲಯದ ಕರೆಯನ್ನು ಒಪ್ಪಿಕೊಂಡಿರಲಿಲ್ಲ. ಕಾರಂತ ಯಕ್ಷಗಾನ ಗೋಷ್ಠಿ ಶುಷ್ಕ ಗದ್ಯವೇ ಆಗಿ ನಡೆದುಹೋಯಿತು.

ಸಾಂಪ್ರದಾಯಿಕ ಕಲೆ ಮತ್ತು ವಸ್ತುನಿಷ್ಠ ವಿಮರ್ಶೆಯನ್ನು ಸಮನ್ವಯ ಮಾಡುವಂತೆ (ಬಡಗು ತಿಟ್ಟಿನ) ಕಲಾವಿದರನ್ನೇ ಗುಡ್ಡೆ ಹಾಕಿಕೊಂಡು, ೧೯೬೯ರಷ್ಟು ಹಿಂದೆ ಶಿವರಾಮ ಕಾರಂತರು ಮೂರೋ ಐದೋ ದಿನದುದ್ದಕ್ಕೆ ಉಡುಪಿಯಲ್ಲಿ ನಡೆಸಿದ ಒಂದು ಬಹುವ್ಯಾಪೀ ಕಮ್ಮಟವನ್ನು ನಾನು ಕಂಡಿದ್ದೆ. (ಕ್ಷಮಿಸಿ, ಅದರ ವಿವರಗಳು ನನ್ನ ನೆನಪಿನಿಂದ ಹಾರಿವೆ) ಅಲ್ಲಿ ವೃತ್ತಿಪರ ಕಲಾವಿದರ ಬಲು ದೊಡ್ಡ ಸಂದೋಹವೇ ಸಕ್ರಿಯವಾಗಿ ಪಾಲುಗೊಂಡದ್ದು, ಮತ್ತದು ಒಟ್ಟು ಯಕ್ಷಪರಿಸರವನ್ನು ಗಾಢವಾಗಿ ಪ್ರಭಾವಿಸಿದ್ದು ತಿಳಿಯದವರಿಲ್ಲ. ಜೊತೆಗೆ ಅಂಥ ಕಮ್ಮಟಗಳ ಫಲವಾಗಿ ಕಾರಂತರು ತಮ್ಮ ಯಕ್ಷಗಾನ ಬ್ಯಾಲೆಯನ್ನು ರೂಪಿಸಿಕೊಂಡದ್ದು ಮತ್ತು ಯಕ್ಷಗಾನ ಶಿಕ್ಷಣವನ್ನು ಸಾಂಸ್ಥಿಕವಾಗಿ ವ್ಯವಸ್ಥೆ ಮಾಡಿದ್ದು ಸಾರ್ವಕಾಲಿಕ ಸ್ಮರಣೀಯ ಸಂಗತಿಗಳು. ಆದರೆ ಇದೆಲ್ಲಾ ನಡೆದದ್ದು ಬಡಗುತಿಟ್ಟಿನಲ್ಲಿ.

ತೆಂಕು ತಿಟ್ಟಿಗೂ ಹಾಗೇ ಸಂಸ್ಕಾರ ಕೊಡಲು ಮುಳಿಯ ಮಹಾಬಲ ಭಟ್ಟ, ಅಮೃತ ಸೋಮೇಶ್ವರ, ಚಂದ್ರಶೇಖರ ದಾಮ್ಲೆಯವರ ಮಿತ್ರ ಬಳಗ, ರಾಘವ ನಂಬಿಯಾರ್‌ರಂಥ ಹಲವು ಸಮರ್ಥರು ಅಲ್ಲೊಂದು ಇಲ್ಲೊಂದು ಸಂಘ, ಸಂಸ್ಥೆ ಪ್ರಯತ್ನವನ್ನೇನೋ ಮಾಡಿದ್ದು ತಿಳಿದು ಬರುತ್ತದೆ. ಆದರೆ ಅವರಿಗೆಲ್ಲಾ ಕಾರಂತ ಮಟ್ಟದ ಪ್ರಭಾವಳಿ ಇಲ್ಲದೆ, ಅವರ ಕಲಾಪಗಳು ಅರ್ಥಪೂರ್ಣ ಗೊಣಗಾಟದಂತೆ ಉಳಿದದ್ದೇ ಹೆಚ್ಚು. ಅದನ್ನು ನೀಗುವಂತೆ ಈಚೆಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬಜ್ಪೆಯಲ್ಲೊಂದು ಕಮ್ಮಟ ನಡೆಸಿದ್ದು ನಿಜಕ್ಕೂ ಉಲ್ಲೇಖನಾರ್ಹ.

ಯಕ್ಷ-ಪ್ರಸಂಗಗಳಲ್ಲಿ ಸಾರ್ವಕಾಲಿಕವಾಗಿ ಅತಿ ಹೆಚ್ಚಿನ ಪ್ರದರ್ಶನ ಭಾಗ್ಯವನ್ನೇ ಪಡೆಯುತ್ತಿರುವುದು ಶ್ರೀದೇವಿ ಮಹಾತ್ಮ್ಯೆ. ಹಾಗೇ ಇದರ ಪ್ರದರ್ಶನದಲ್ಲಾಗುವ ಅಧ್ವಾನಗಳನ್ನು ಎಲ್ಲ ಯಕ್ಷ-ಪ್ರಿಯರೂ ಸಾಕಷ್ಟು ಕಂಡವರೇ. ಆ ಕುರಿತು ಅಲ್ಲಿ ಇಲ್ಲಿ ಲೇಖನಗಳಲ್ಲಿ, ಪತ್ರಿಕೆಗಳ ಓದುಗರ ಓಲೆಗಳಲ್ಲಿ ಮತ್ತು ಸಾಕಷ್ಟು ಭಾಷಣಗಳಲ್ಲೂ ಚದುರಿದಂತೆ, ಎಷ್ಟೋ ಬಾರಿ ವೈಯಕ್ತಿಕ ಖಯಾಲಿಗಳಂತೆ ಅಭಿಪ್ರಾಯಗಳು ಸಾರ್ವಜನಿಕವಾದದ್ದೂ ಇವೆ. ಆದರೆ ಇದರ ಕುರಿತೇ ಕೋಟೆಕಾರಿನ ಕಲಾಗಂಗೋತ್ರಿಯ ಸಂಯೋಜನೆಯಲ್ಲಿ, ಅಮೃತ ಸೋಮೇಶ್ವರರ ಅಧ್ಯಕ್ಷತೆಯಲ್ಲಿ ನಡೆದ ಒಂದು ಗೋಷ್ಠಿ ಬಹುಶಃ ಪ್ರಥಮ ಬಾರಿಗೆ ಎಂಬಂತೆ ಒಂದು ಸಮಗ್ರ ನೀತಿಸಂಹಿತೆಯನ್ನೇ ರೂಪಿಸಿ, ಮೇಳಗಳಿಗೂ ಕಲಾವಿದರಿಗೂ ಮುಟ್ಟಿಸುವ ಕೆಲಸ ಮಾಡಿತು. ಅದರಲ್ಲಿ ಪಾಲ್ಗೊಳ್ಳಲು ಸಾರ್ವಜನಿಕ ಕರೆ ಮತ್ತು ಚರ್ಚೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶಗಳನ್ನು ಕಲಾಗಂಗೋತ್ರಿ ಕೊಟ್ಟಿತ್ತಾದರೂ ಭಾಗವಹಿಸಿದ ಮೇಳದ ಸಂಚಾಲಕ ಮತ್ತು ಕಲಾವಿದರು ಗಣನೀಯವಾಗಿ ಕಡಿಮೆಯೇ. ಇಂಥ ಪ್ರಯತ್ನಗಳ ಒಟ್ಟು ಸೋಲನ್ನು ಧ್ವನಿಸುವಂತೆಯೇ ಪ್ರಭಾಕರ ಜೋಶಿಯವರು ತಮ್ಮ ಯಕ್ಷ-ಸಂಶೋಧನಾ ಮತ್ತು ವಿಮರ್ಶಾ ಪುಸ್ತಕಗಳ ಕುರಿತು ತಮ್ಮ ಎಂದಿನ ಹಾಸ್ಯದಲ್ಲೂ ಅರೆ ವಿಷಾದದಲ್ಲೂ ಆಡುವ ಮಾತು ನೆನಪಿಗೆ ಬರುತ್ತದೆ. “ಸಾಮಾನ್ಯರು ‘ಓ ಇದು ಮೇಳದವರಿಗೆ’ ಎಂದೂ ಯಕ್ಷ-ಕಲಾವಿದರು ‘ನಮ್ಮದನ್ನೇ ನಾವೆಂತ ಓದುವುದು, ಅದು ಪ್ರೇಕ್ಷಕರಿಗೆ!”

ಮೂರು ದಿನಗಳ ಬಜ್ಪೆ ಕಮ್ಮಟ ಸ್ಪಷ್ಟವಾಗಿ ದೇವೀ ಮಹಾತ್ಮ್ಯೆ ಪ್ರದರ್ಶನದ ಪ್ರಾಯೋಗಿಕ ವಿಮರ್ಶೆ ಮತ್ತು ಪರಿಷ್ಕರಣಕ್ಕೇ ಮೀಸಲಾಗಿ ನಡೆಯಿತು. ಇಲ್ಲಿ ಯಕ್ಷ-ವ್ಯವಸಾಯಿಗಳು ಮತ್ತು ವಿಮರ್ಶಕ ವಿದ್ವಾಂಸರು ತೆಂಕು ತಿಟ್ಟಿನಲ್ಲಿ ಪ್ರಥಮ ಬಾರಿಗೆ ಎನ್ನುವಂತೆ ಬಹು ದೊಡ್ಡ ಸಂಖ್ಯೆಯಲ್ಲಿ ಹೇಳುವ, ಕೇಳುವ ಕೆಲಸ ನಡೆಸಿದರು. ದೇವಿಮಹತ್ಮ್ಯೆ ಪ್ರಸಂಗದ ಬಹುದೊಡ್ಡ ಪ್ರದರ್ಶಕ ತಂಡಗಳಾದ ಕಟೀಲಿನ ಐದೂ ಮೇಳಗಳ ಯಜಮಾನರುಗಳ (ಕಟೀಲಿನ ಆಸ್ರಣ್ಣರ ಮತ್ತು ಗುತ್ತಿಗೆದಾರ ಶೆಟ್ಟರ) ಪೂರ್ಣ ಬೆಂಬಲ ಕಮ್ಮಟಕ್ಕಿತ್ತು. ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ ಅಷ್ಟೂ ಮೇಳದ ಎಲ್ಲಾ ಕಲಾವಿದರು ಮೂರೂ ದಿನ ಸಕ್ರಿಯವಾಗಿ ಭಾಗವಹಿಸಿದರು. ಹರಕೆ ಮೇಳಗಳೆಂದೇ ಖ್ಯಾತವಾದ ಇವಕ್ಕೆ ಕನಿಷ್ಠ ಹದಿನಾಲ್ಕು ತಿರುಗಾಟದ ವರ್ಷಗಳಿಗೆ ಸಾಕಾಗುವಷ್ಟು (ಹರಕೆ) ವೀಳ್ಯ ಬಾಕಿಯಿದೆಯಂತೆ. ಹೀಗೆ ಸಾಮಾನ್ಯ ವ್ಯಾವಸಾಯಿಕ ಮೇಳಗಳ ‘ಗಂಜಿ ಸಮಸ್ಯೆ’ ಇವರಿಕ್ಕಿಲ್ಲ. ಇವರಾದರೂ ಯಕ್ಷಗಾನೀಯತೆಯನ್ನು ಉಳಿಸಿ ಬೆಳೆಸುವಂತಾಗಲಿ ಎಂಬ ಆಶಯಕ್ಕೆ ತಕ್ಕಂತೆ ಬಜ್ಪೆ ಕಮ್ಮಟ ವಿಕಸಿಸಿತು. ಚಾಲ್ತಿಯಲ್ಲಿರುವ ಪ್ರದರ್ಶನದ ಪ್ರಾತಿನಿಧಿಕ ಒಂದು ಮಾದರಿಯನ್ನು ಮೂರು ದಿನಗಳಿಗೆ ಹಂಚಿ ಹಾಕಿಕೊಂಡು, ಸಾಧ್ಯವಾದಷ್ಟು ಇತರ ಹಿರಿಯ ಕಲಾವಿದರೂ ವಿದ್ವಾಂಸರೂ ವಿಮರ್ಷೆಯಲ್ಲಿ ಪೂರ್ಣ ಭಾಗಿಗಳಾಗುವಂತೆ ಮಾಡಿತು. ಕೊನೆಯಲ್ಲಿ ಪೂರ್ವರಂಗದ ಒಂದು ತುಣುಕಿನೊಡನೆ, ಕಮ್ಮಟದಲ್ಲಿ ಪರಿಷ್ಕೃತಗೊಂಡಂತೇ ಸಂಪೂರ್ಣ ದೇವಿಮಹಾತ್ಮ್ಯೆಯನ್ನು ಪ್ರದರ್ಶಿಸಿ ಸಾರ್ವಜನಿಕ ಮೆಚ್ಚುಗೆಯನ್ನೂ ಗಳಿಸಿತು. ಇಲ್ಲಿ ಯಕ್ಷ-ಚಿನ್ನಕ್ಕೆ ಕಾಲಕ್ಕೆ ತಕ್ಕ ವಿನ್ಯಾಸ ಮತ್ತು ವಿವೇಚನೆಯ ಪುಟ ದಕ್ಕಿತ್ತು!

ಅರ್ಧ ಶತಮಾನದ ಹಿಂದೆಯೇ ಕಾರಂತರು ಬಡಗು ತಿಟ್ಟಿನ ಯಕ್ಷಗಾನದಲ್ಲಿ ತೊಡಗಿಕೊಂಡದ್ದಾದರೂ ಇದೇ ಹುಚ್ಚಿನಿಂದ; ಕಚ್ಚಾ ವಜ್ರಕ್ಕೆ ಮುಖ ಕೊಡುವ ಪ್ರಯತ್ನ. ಪರಿಷ್ಕರಣದಲ್ಲಿ ಅವರದೇ ಆಭರಣ (ಯಕ್ಷಗಾನವೇ ಅಲ್ಲ, ಬ್ಯಾಲೆ ಎಂದರೂ) ರೂಪುಗೊಂಡದ್ದಕ್ಕೆ ಕೆಳ ಧ್ವನಿಗಳ ಟೀಕೆ ಏನೇ ಇರಲಿ, ಅದರ ಪ್ರಭಾವ ಒಟ್ಟಾರೆ ಯಕ್ಷಗಾನದ ಮೇಲೆ ಇಂದಿಗೂ ಅಸಾಧಾರಣ. ಕಾರಂತರ ಗರಡಿಯಲ್ಲೂ ಹುರುಡಿದ ಬನ್ನಂಜೆ ಸಂಜೀವ ಸುವರ್ಣರ ಗುರುತ್ವದ ಬಲದಲ್ಲಿ ಇಂದು ಎಂಜಿಎಂ ಕಾಲೇಜಿನ ‘ಯಕ್ಷಗಾನ ಕೇಂದ್ರ’ ನಡೆಸಿರುವ ಕಲಾ ಕೈಂಕರ್ಯ ನಿಸ್ಸಂದೇಹವಾಗಿ ಅದ್ವಿತೀಯ. ‘ಸಾಂಪ್ರದಾಯಿಕ ಆಟ’ದ ಹೆಸರಿನಲ್ಲಿ ವೃತ್ತಿಪರ ಮೇಳಗಳು ತಮ್ಮ ಕೊರತೆಗಳಿಗೆ ಹಾಕುತ್ತಿದ್ದ ತೇಪೆಯನ್ನು ಈ ಕೇಂದ್ರ ತನ್ನ ಹಿರಿಯ ಮತ್ತು ವಿದ್ಯಾರ್ಥಿ ಕಲಾವಿದರಿಂದ ಮೊದಲು ಜೀರ್ಣೋದ್ಧಾರ ಮಾಡಿ ತೋರಿಸಿತು. ಹೊಸಕಾಲದ ಸವಾಲಿಗೆ ಯಕ್ಷಗಾನ ವಿಕಸಿಸಬೇಕಾದ ಪಥವನ್ನೂ ಬಲು ಎಚ್ಚರದಿಂದ ಹಾಕುತ್ತಲೂ ಇದೆ.

ಯಕ್ಷಗಾನ ಒಬ್ಬ ವ್ಯಕ್ತಿಯ (ಸ್ಟಾರ್ಗಿರಿ), ಒಂದು ಸನ್ನಿವೇಶದ ಬಲದಲ್ಲಿ ನಡೆಯುವುದಲ್ಲ; ಇದು ಮೇಳಕ್ರಿಯೆ. ಇಲ್ಲಿ ಎಲ್ಲಾ ಪಾತ್ರ ಹಾಗೂ ಸನ್ನಿವೇಶಗಳಿಗೆ ನ್ಯಾಯ ಕೊಡುವ ಕ್ರಿಯೆಗೆ ಸ್ವತಃ ಮಹಾಗುರು ಸಂಜೀವರೇ ಆದರ್ಶ ರೂಪಿಸುವಂತೆ ಕೆಲಸ ಮಾಡುತ್ತಾರೆ. ಇವರು ಅಭಿಮನ್ಯು ಕಾಳಗದ ಕಥಾನಾಯಕನಾಗಿಯೂ ಮಿಂಚಬಲ್ಲರು, ಪೂರ್ವರಂಗದಲ್ಲಿ ದೀಪಧಾರಿಯಾಗಿ ಬಂದು ನಾಲ್ಕೇ ಹೆಜ್ಜೆ ಹಾಕಿ ನೇಪಥ್ಯದಲ್ಲಿ ಇರಬಲ್ಲರು. ಕೋಡಂಗಿಯಾಗಿ ಪೌರಾಣಿಕಕ್ಕೆ ಹೋಗಲಿರುವ ರಂಗವನ್ನು ವರ್ತಮಾನಕ್ಕೆ ಔಚಿತ್ಯಪೂರ್ಣವಾಗಿ ಗಂಟು ಹಾಕುವುದನ್ನು ಕಂಡಿದ್ದೇನೆ, ಕಿರಾತಪಡೆಯ ಮುದಿಯಪ್ಪಣ್ಣನಾಗಿ ಪರಿಣಾಮಕಾರಿಯಾಗಿ ನಗಿಸುವುದನ್ನು ಅನುಭವಿಸಿದ್ದೇನೆ. ಇವರ ತಂಡ ಪುನರುಜ್ಜೀವಿಸಿದ ಪೂರ್ವರಂಗದ ಪ್ರದರ್ಶನಕ್ಕೆ ಮಾರುಗೊಂಡು ಡಾ| ಮನೋಹರ ಉಪಾಧ್ಯರ ಜೊತೆ ನಾನೂ (ನನ್ಮಗ) ಅಭಯಸಿಂಹನೂ ವಿಡಿಯೋ ದಾಖಲಾತಿ ನಡೆಸಿದ್ದು ನಿಮಗೆಲ್ಲಾ ತಿಳಿದೇ ಇದೆ. (ಐದು ಡೀವೀಡಿಗಳ ಕಟ್ಟಾಗಿ ಅವನ್ನು ಯಕ್ಷಗಾನ ಕೇಂದ್ರ, ಇಂದ್ರಾಳಿ, ಉಡುಪಿ ಇವರಿಂದ ಕೊಳ್ಳಬಹುದು.) ನಮ್ಮೂವರ (ಮನೋಹರ್, ನಾನು ಮತ್ತು ಅಭಯ) ಯಕ್ಷ-ದಾಖಲೀಕರಣದ ಹುಚ್ಚು ಹೆಚ್ಚಿದಾಗ ದೀವಟಿಗೆ ಆಟಕ್ಕಿಳಿದದ್ದು, ಈ ಹಿಂದೆ ಇಲ್ಲೆ ನೀವು ಓದಿದ್ದೀರಿ. (ಇಲ್ಲವಾದರೆ ಇಲ್ಲೇ ಹಳೆ ಕಡತ ಬಿಚ್ಚಿ ಈಗಲೂ ನೋಡಬಹುದು) ಅದರಲ್ಲಿ ಸಂಜೀವರು ಕೇವಲ ದೀಪಧಾರಿಯಾಗಿ ಒಮ್ಮೆ ರಂಗಕ್ಕೆ ಬಂದದ್ದು ಬಿಟ್ಟರೆ ಉಳಿದಂತೆ ಪೂರ್ಣ ನೇಪಥ್ಯದ ಕೆಲಸ ನಡೆಸಿದ್ದಕ್ಕೇ ‘ಅರಗಿನ ಮನೆ’ ಆಟ ಅಪೂರ್ವ, ಅದ್ಭುತ ಎನ್ನುವಂತೆ ಮೂಡಿಬಂತು. (ಈ ಡೀವೀಡಿಯೂ ಯಕ್ಷಗಾನ ಕೇಂದ್ರದಲ್ಲಿ ಮಾರಾಟಕ್ಕಿದೆ)

ಬನ್ನಂಜೆ ಸಂಜೀವ ಸುವರ್ಣರ ಬಳಗದ ಯಕ್ಷಗಾನೀಯ ಚೌಕಟ್ಟು ಬಹಳ ಬಿಗಿಯಿದೆ. ಹಾಗೆಂದು ಅದಕ್ಕೆ ಕಲೌಚಿತ್ಯ ಮೀರದ ಮಡಿವಂತಿಕೆ ಖಂಡಿತಾ ಇಲ್ಲ. ಯಕ್ಷಗಾನದ ಕುರಿತಂತೆ ನಡೆಯುವ ವಿಚಾರ ಸಂಕಿರಣ, ಕಮ್ಮಟ, ಪ್ರಾತ್ಯಕ್ಷಿಕೆ, ಪ್ರಯೋಗಾದಿಗಳಿಗೆ ಯಕ್ಷಗಾನ ಕೇಂದ್ರದ ಬಾಗಿಲು ಸದಾ ತೆರೆದೇ ಇದೆ. ಎಲ್ಲಕ್ಕೂ ಮಿಗಿಲಾಗಿ ಯಾವುದೇ ವಿಮರ್ಶೆಯನ್ನು ಉತ್ತಮಿಕೆಗೆ ಮೆಟ್ಟಿಲಾಗಿ ಬಳಸುವ ವಿನಯ ಮತ್ತು ಆಸಕ್ತರು ಯಾರೇ ಇರಲಿ ನಿರ್ವಂಚನೆಯಿಂದ ಹಂಚಿಕೊಳ್ಳುವ ಔದಾರ್ಯ, ಪುರಾಣೋಕ್ತ ನಿಜ ಗುರುಕುಲಕ್ಕೆ ಸಾಟಿಯಾಗುವಂತೇ ಇದೆ. ಏಕವ್ಯಕ್ತಿ ಪ್ರದರ್ಶನ ಪಟು ಅಥವಾ ‘ಭಾಮಿನಿ’ ಖ್ಯಾತಿಯ ಮಂಟಪ ಪ್ರಭಾಕರ ಉಪಾಧ್ಯ ತನ್ನ ಪ್ರತಿಭೆಗೆ ಸಾಣೆ ಹಿಡಿಸಿಕೊಂಡದ್ದು ಇಲ್ಲೇ. ಸಂಸ್ಕಾರ ಮತ್ತು ಭಾಷೆಗಳಲ್ಲೂ ಜರ್ಮನಿಯವಳೇ ಆದ ಕ್ಯಾಥರೀನ್ ಈ ಗುರುಕುಲದಲ್ಲಿ ಕೇವಲ ಸಮರ್ಥ ಯಕ್ಷಗಾನ ಪಟುವಾದದ್ದು ಮಾತ್ರವಲ್ಲ. ಆಕೆ ತನ್ನ ಜರ್ಮನ್ ಪ್ರಿಯಕರನನ್ನು ಕರೆಸಿಕೊಂಡು ‘ಭಾರತೀಯ ವಿವಾಹ’ ಏರ್ಪಡಿಸಿಕೊಂಡಾಗ, ಯಕ್ಷಗಾನ ಕೇಂದ್ರ ಕಣ್ವಾಶ್ರಮವೂ ಆಗಿತ್ತು! ಅಭಯ ಅವನ ಕಲಿಕೆಯ ಅಂಗವಾಗಿ ಸಂಜೀವರ ತಂಡವನ್ನು ಪುಣೆಗೆ ಕರೆಸಿಕೊಂಡು ಬಳಸಿದಾಗ ಬಂದ ಕಿರು ಸಿನಿಮಾ (ಕಥಾಚಿತ್ರ) ‘ಯಕ್ಷೋತ್ತಮ’ (ನೋಡಿ: http://www.abhayatalkies.comನ ಒಳಗೆ ವಿಡಿಯೋ ವಿಭಾಗ), ಬಾಗಲೋಡಿ ದೇವರಾಯರ ಸ್ಮರಣ ಕಾರ್ಯಕ್ರಮದಂದು ನಡೆಸಿಕೊಟ್ಟ ಯಕ್ಷ-ರೂಪಕ ‘ಅಂಗುಲಿಮಾಲಾ’, ಹಿರಿಯ ಪ್ರಾಯದವರನ್ನು ಗಟ್ಟಿ ಹವ್ಯಾಸಿ ಕಲಾವಿದರನ್ನಾಗಿಸಿ ಕೊಟ್ಟ ಆಟ ‘ಜಾಂಬವತಿ ಕಲ್ಯಾಣ’, ಕಲಾಗಂಗೋತ್ರಿ ಆಯೋಜಿಸಿದ್ದ ಮಕ್ಕಳಿಗಾಗಿ ಯಕ್ಷಗಾನ ಕಮ್ಮಟದಲ್ಲಿ ಇವರಲ್ಲಿನ ಬಾಲಶಕ್ತಿಯೇ ರೂಪಿಸಿ ಪ್ರದರ್ಶಿಸಿದ ಏಕಲವ್ಯ, ಸಂಜೀವರ ನಿರ್ದೇಶನದಲ್ಲೇ ತಯಾರಾದ ಬಾಲಕರ ತಾಮ್ರಧ್ವಜ ಒಂದಕ್ಕಿಂತ ಒಂದು ಭಿನ್ನ, ಚೊಕ್ಕ ಮತ್ತು ಸುಂದರ.

ಈಚೆಗೆ ‘ವೀರಪ್ಪ ಮೊಯಿಲಿ ಸಾಹಿತ್ಯಾವಲೋಕನ’ – ದಿನಪೂರ್ತಿ ಮಂಗಳೂರು ಪುರಭವನದಲ್ಲಿ, ಘಟಾನುಘಟಿಗಳ ಸಮಕ್ಷಮದಲ್ಲಿ ಭರ್ಜರಿಯಾಗಿ ನಡೆಯಿತು. ನನ್ನ ಲೆಕ್ಕಕ್ಕದು ಅಸಾಹಿತ್ಯಕ ಮತ್ತು ಅನಾಕರ್ಷಕ ಕಾರ್ಯಕ್ರಮ. ನನ್ನ ಗಮನವೇನಿದ್ದರೂ ಕೊನೆಯಲ್ಲಿ, (ಸಮಾರೋಪ ಕಲಾಪವೂ ಮುಗಿದ ಮೇಲೆ) ಅಂದರೆ ಸಂಜೆ ಆರಕ್ಕೆ ಉಡುಪಿ ಯಕ್ಷಗಾನ ಕೇಂದ್ರ ಕೊಡಲಿದ್ದ ಯಕ್ಷಗಾನ ರೂಪಕದ ಮೇಲೆ. ದಿನದ ಕಾರ್ಯಕ್ರಮಕ್ಕೆ ಪೂರಕವಾಗುವಂತೆ ಮೊಯಿಲಿಯವರ ಶ್ರೀರಾಮಾಯಣ ಮಹಾನ್ವೇಷಣೆ ಕಾವ್ಯದ ಯಕ್ಷಗಾನೀಯ ಪ್ರಸ್ತುತಿ! ಯಕ್ಷಪ್ರಸಂಗಗಳಂತೆ ಛಂದೋಬದ್ಧತೆ ಇಲ್ಲದ (ಅವರು ಯಕ್ಷಗಾನಕ್ಕಾಗಿ ಬರೆದದ್ದೂ ಅಲ್ಲ), ಸಹಜವಾಗಿ ರಾಗ ತಾಳಗಳಿಗೆ ಒಗ್ಗದ ಸಾಲುಗಳಲ್ಲಿ ಸಂಜೀವ ಸುವರ್ಣರ ಬಳಗ ಆರಿಸಿಕೊಂಡದ್ದು ಪಂಚವಟಿ ಕಥಾನಕದ ಒಂದು ಸನ್ನಿವೇಶ. ಅದಕ್ಕೆ ಪೂರ್ವಾರ್ಧವಾಗಿ ವಾಲ್ಮೀಕಿಗೆ ಮಹಾಕಾವ್ಯ ರಚನೆಗೊದಗಿದ ಪ್ರೇರಣೆಯೂ ಪ್ರದರ್ಶನಗೊಂಡಿತು. ಕ್ರೌಂಚ ಮಿಥುನದ ನಷ್ಟ, ಕಾವ್ಯ ಪ್ರಪಂಚದ ಲಾಭ ಮತ್ತು ಶೂರ್ಪನಖಾ ಮಾನಭಂಗ ಅಂದಿನ ಪ್ರಸಂಗಗಳು.

ಭಾಗವತ ಸತೀಶ ಕೆದ್ಲಾಯರ ಅಮೋಘ ಕಂಠಸಿರಿ ಮತ್ತು ರಸಭಾವಗಳಿಗೆ ಅದ್ವಿತೀಯವಾಗಿ ಸ್ಪಂದಿಸುವ ಪರಿಗೆ, ಪಕ್ಕವಾದ್ಯಗಳ ಯಥೋಚಿತ ಅಲಂಕಾರ ಸಂದು ಸಭೆ ಬೆಕ್ಕಸ ಬೆರಗಾಗಿಹೋಯ್ತು. ಯಕ್ಷಗಾನಕ್ಕೆ ಅನಿವಾರ್ಯವಾದ ಪೌರಾಣಿಕ ವಾತಾವರಣಕ್ಕೆ ವ್ಯತಿರಿ
ಕ್ತವಾಗಿ ಕಾಣುವಂತೆ (ಕಾವ್ಯದಲ್ಲಿ) ಬಲವತ್ತರವಾಗಿ ಸೇರಿಸಿದ ವರ್ತಮಾನದ ಸಾಮಾಜಿಕ ಮೌಲ್ಯಸೂಚೀ ಪದಗಳನ್ನೂ (ಕಾವ್ಯಕ್ಕೆ ಪ್ರಾಮಾಣಿಕವಾಗಿ) ಎಂದಿನ ಸ್ಪಷ್ಟೋಚ್ಚಾರದಲ್ಲೇ ಭಾಗವತರು ನಿರ್ವಹಿಸಿದರು! ಆಯ್ಕೆಯಲ್ಲಿ ವಂಚಿಸದೆ (ಸಾಂಪ್ರದಾಯಿಕ ಮೇಳಗಳಲ್ಲಿ ಕೆಲವೊಮ್ಮೆ ಸನ್ನಿವೇಶಕ್ಕೆ ತಕ್ಕಂತೆ ಭಾಗವತರು ಕಿಸೆಯಿಂದ ಬರಿಯ ಶಬ್ದಗಳೇನು, ಇಡಿಯ ಪದ್ಯಗಳನ್ನೇ ಸೇರಿಸುವುದು ಧಾರಾಳ ಕೇಳಿದ್ದೇವೆ), ರಾಗತಾಳಗಳಲ್ಲಿ ಬರುವ ಕೊರತೆಯನ್ನು ಕೇವಲ ಆಲಾಪಗಳ ಬಲದಲ್ಲಿ ಎತ್ತಿಕೊಟ್ಟು ಪ್ರದರ್ಶನವನ್ನು ಕೆದ್ಲಾಯರು ಅದ್ವಿತೀಯವಾಗಿ ಗೆಲ್ಲಿಸಿದರು. ಕೊನೆಯಲ್ಲಿ ಮೊಯಿಲಿಯವರು ಭಾಗವತರನ್ನು ವಿಶೇಷವಾಗಿ ಮಾತಾಡಿಸುತ್ತಿದ್ದಾಗ (ಸಭೆಗೆ ಕೇಳುತ್ತಿರಲಿಲ್ಲ) “ನಿಜಕ್ಕೂ ಇದು ನಾನೇ ಬರೆದದ್ದೋ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರೆ, ಯಾರೂ ತಪ್ಪು ತಿಳಿಯಬೇಕಿಲ್ಲ.

ಯಾಂತ್ರಿಕ ಕಲೆ ಮತ್ತು ಭಾವಹೀನವಾದ ಸಿದ್ಧ ಮುಖವಾಡಗಳನ್ನು ನಿರಾಕರಿಸಿ, ಯಕ್ಷಗಾನಕ್ಕೆ ಸಹಜವಾದ ಬಣ್ಣಗಾರಿಕೆ ಮತ್ತು ವೇಷಭೂಷಣಗಳಲ್ಲಿ ಈಗಾಗಲೇ ಸಾಕಷ್ಟು ಪಕ್ಷಿ ಮತ್ತು ಪ್ರಾಣಿ ಪ್ರಪಂಚ ಯಕ್ಷಗಾನಗಳಲ್ಲಿ ಬಂದದ್ದಿದೆ. ಅದರಲ್ಲೂ ಯಕ್ಷಗಾನ ಕೇಂದ್ರದ ಪ್ರಯೋಗಗಳು ಮತ್ತು ಅದು ಪ್ರದರ್ಶನದಿಂದ ಪ್ರದರ್ಶನಕ್ಕೆ ಕೊರತೆಗಳನ್ನು ಮೆಟ್ಟಿ ಬೆಳೆಯುವ ಚಂದ ನೋಡಿಯೇ ಅನುಭವಿಸಬೇಕು (ಸಾಂಪ್ರದಾಯಿಕ ಪಂಚವಟಿ ಪ್ರಸಂಗದಲ್ಲಿ ಸುವರ್ಣರ ಚಿನ್ನದ ಜಿಂಕೆ ವಿಕಾಸಗೊಂಡ ಮೂರು ಹಂತಗಳನ್ನು ನಾನು ನೋಡಿದ್ದೇನೆ). ಇಲ್ಲಿ ಕ್ರೌಂಚ ಜೋಡಿಯ ಬೇಟ ಮತ್ತು ಬಲಿಯ ಸಂದರ್ಭಗಳ ಕುಣಿತ ಮಣಿತಗಳು, ಪ್ರೀತಿ, ವಿರಹ ಮತ್ತು ತಾಪದ ಭಾವಗಳು ಅ-ಮಾನವೀಯವಾಗಿಯೇ ಮೂಡಿದ್ದು ಅತಿ ಸುಂದರ ಅನುಭವ. ಸಾಂಪ್ರದಾಯಿಕ ಪ್ರದರ್ಶನಗಳಲ್ಲಿ ಮಾನವೇತರ ಜೀವಿಗಳು ಎಲ್ಲೋ ಪ್ರವೇಶದಲ್ಲೊಮ್ಮೆ ಮತ್ತೆ ಎಡೆಯಲ್ಲಿ ತಪ್ಪಿ ನೆನಪಾದಂತೆ ಪಾತ್ರಭಾವವನ್ನು ತಳೆಯುವುದುಂಟು. ಆದರೆ ಇಲ್ಲಿನ ಕ್ರೌಂಚ ಪಾತ್ರಗಳ ತೇಲು ನಡೆಯಲ್ಲಿ ಕಂಡ ಹಾರಾಟದ ಲಯ, ಪರಸ್ಪರ ಕೊಕ್ಕಿನ ಮಿದುಕುಕ್ಕಿನಲ್ಲಿ ದೇಹ ತಡವುವ ಭಾವ, ಬಾಣಹತಿಯಲ್ಲಿ ಒಂದು ದೊಪ್ಪನುರುಳುವ ಅಭಿನಯ, ವಿರಹದುರಿಯಲ್ಲಿ ಇನ್ನೊಂದು (ಮನುಷ್ಯ ಮೊಣಕಾಲೂರಿ) ಅಭಿವ್ಯಕ್ತಿಸುವ ವಿಹ್ವಲ ನಡೆ, ಕೊನೆಯಲ್ಲಿ ಕೆರಳಿ ಬೇಡನ ಮೇಲೆ ಆಕ್ರಮಿಕವಾಗಿ ಎರಗುವ ಪರಿ, ನನ್ನನ್ನು ನಾಟಕ ವಾಸ್ತವಗಳ ಅಂತರ ಕಳೆದುಕೊಳ್ಳುವಷ್ಟು ಪ್ರಭಾವಿಸಿತು. ಈ ತೀವ್ರ ಭಾವಗಳಲ್ಲಿ ಭಾಗವತರ ಹಾಡಿಕೆಯ ಕಂಪನ ಸೇರಿದಂತೆ ಹಿಮ್ಮೇಳದ ಕೊಡುಗೆಯೂ ಮಹತ್ವದ ಪಾತ್ರವಹಿಸಿತ್ತು.

ಕಾವ್ಯ ನಿಷ್ಠೆಯ ಕಟ್ಟುಪಾಡು ಎಂದರೂ ಸರಿ, ರೂಪಕದ ಸ್ವಾತಂತ್ರ್ಯ ಎಂದರೂ ನಡೆಯುತ್ತದೆ, ಪ್ರದರ್ಶನದಲ್ಲಿ ಮಾತಿರಲಿಲ್ಲ; ಬೇಕೂ ಆಗಲಿಲ್ಲ. ಶೋಕವನ್ನು ಕಾವ್ಯವಾಗಿಸಿದ ವಾಲ್ಮೀಕಿ, ಶಾಂತಮೂರ್ತಿ ರಾಮ, ಶೀಘ್ರಕೋಪಿ ಲಕ್ಷ್ಮಣ, ಕ್ರೌರ್ಯರೂಪೀ ರಕ್ಕಸಿ, ಮೋಹಕ ಮಾಯಾ ಶೂರ್ಪನಖಾ, ಸ್ವಾಮಿ ಸೇವಾಪರಾಯಣ ಜಟಾಯು ಮುಂತಾದ ವಿವರಗಳ ಸಮಪಾಕದ ಅದ್ಭುತವನ್ನು, ನಾನು ಮಾತಿನಾಡಂಬರದಲ್ಲಿ ಬಿಡಿಸಿಡಲು ಹೋಗಿ ನಿಮ್ಮ ರುಚಿಗೆಡಿಸಲಾರೆ. ಎಷ್ಟೂ ಪಂಚವಟಿ ಪ್ರಸಂಗಗಳನ್ನು ನಿರ್ವಹಿಸಿದ ಬಲದ ಮುನ್ನೆಲೆಯಲ್ಲಿ, ಶ್ರೀರಾಮಾಯಣಮಹಾನ್ವೇಷಣೆ ಕಾವ್ಯದ ನೆಪದಲ್ಲಿ, ಮೂಡಿದ ಈ ಪ್ರದರ್ಶನ ಯಕ್ಷಗಾನ ಕೇಂದ್ರದ ದೊಡ್ಡ ಸಾಧನೆಯೇ ಸರಿ. ಪ್ರದರ್ಶನದ ಕೊನೆಯಲ್ಲಿ ಅಂಗಚ್ಛೇದಕ್ಕೊಳಗಾದ ರಕ್ಕಸಿ, ತನ್ನ ನಿಜರೂಪದಲ್ಲಿ, ತನ್ನ ಪರಿಚಯವನ್ನೂ ಘೋಷಿಸಿಕೊಂಡು ಬರಲಿರುವ ರಾಮ-ರಾವಣ ಯುದ್ಧದ ರಣಘೋಷವನ್ನೇ ಮಾಡುವುದರೊಡನೆ ಪ್ರದರ್ಶನ ಸುಂದರ ನಾಟಕೀಯತೆಯೊಡನೆ ಮುಗಿಯಿತು.

ಇದೇ ಸಂದರ್ಭದಲ್ಲಿ ಇಂಥ ಪ್ರಯೋಗಗಳ ಪ್ರಭಾವ ಹೆಚ್ಚಳಕ್ಕೆ ನನ್ನೊಂದೆರಡು ಅಭಿಪ್ರಾಯಗಳನ್ನೂ (ವಿವೇಚನೆ, ನಿರ್ಧಾರ ಕಲಾವಿದರದೇ ಎಂಬ ಅರಿವಿನೊಡನೆ) ನಿವೇದಿಸಿಕೊಳ್ಳುತ್ತೇನೆ.

 1. ಸಾಂಪ್ರದಾಯಿಕ ತೆರೆ ಹಿಡಿಯುವವರು ಪಾತ್ರಗಳ ಪ್ರವೇಶ ನಿರ್ಗಮನಗಳ ಆವಶ್ಯಕತೆಗನುಗುಣವಾಗಿ ತೆರೆಯನ್ನು ರಥದೆತ್ತರದಲ್ಲಿ ನಿಂತ ಪಾತ್ರದ ಅನುಕೂಲಕ್ಕಾಗಿ (ಬಿಲ್ಲಿನ ಕೊನೆಗೆ ಕಟ್ಟಿ) ಎತ್ತಿಯೋ ಮರಣಿಸಿದವರ ನಿರ್ಗಮನಕ್ಕಾಗಿ ತಗ್ಗಿಸಿಯೋ ಹಿಡಿಯುತ್ತಿದ್ದದ್ದು ಅಚ್ಚುಕಟ್ಟಾಗಿತ್ತು. ಆದರೆ ಕಲಾಪ್ರಸ್ತುತಿಗೆ ನೇರ ಸಂಬಂಧಿಸದ ಒಟ್ಟಾರೆ ರಂಗದ ಹಿನ್ನೆಲೆಗೂ ಒಂದು ಪೂರ್ಣ ತೆರೆಯನ್ನು ಯಾಕೆ ಯೋಚಿಸಲಿಲ್ಲ? ವೇದಿಕೆ ದಿನಪೂರ್ತಿ ನಡೆದ ಸಭಾಕಾರ್ಯಕ್ಕೆ ಅದ್ದೂರಿಯಲ್ಲಿ ಸಜ್ಜುಗೊಂಡದ್ದು ಸರಿ. ಆದರೆ ಕಲಾ ಪ್ರಸ್ತುತಿಗಾಗುವಾಗ ಕ್ಷಣಾರ್ಧದಲ್ಲಿ ಅವನ್ನೆಲ್ಲ ಕಳಚುವುದು ಕಷ್ಟಸಾಧ್ಯವೇ ಸರಿ. ಬದಲು (ಆಳೆತ್ತರದ ದೀಪ ಮತ್ತು ವಾತಾಯನದ ಯಂತ್ರಗಳನ್ನು ಒಳಗೆ ನೂಕಿದಂತೆ) ಹಿನ್ನೆಲೆಯ ಸ್ಥಿರ ಅಲಂಕಾರಗಳ ಮುಂದೊಂದು ಏಕವರ್ಣದ ಪರದೆ ಎಳೆಯಬಹುದಿತ್ತು. ವಿಶೇಷ ದೀಪವ್ಯವಸ್ಥೆಯೊಡನಿದ್ದ ಭಾರೀ ಗಾತ್ರದ ಸರಸ್ವತಿಯ (?) ಮೂರ್ತಿ, ಜಗಮಗಿಸುವ ಢಾಳಾದ ಅಕ್ಷರಗಳ ಬ್ಯಾನರ್ ಒಟ್ಟು ಪ್ರದರ್ಶನದ ಪರಿಣಾಮವನ್ನು ಅವಮಾನಿಸುತ್ತಿತ್ತು. ಇಲ್ಲೊಂದು ಪೂರ್ವಾಚಾರವನ್ನು ನೆನಪಿಸಿಕೊಳ್ಳುವುದು ಅಪ್ರಸ್ತುತವಾಗದು. ಹಿಂದೆ ರಾಮಕೃಷ್ಣಾಶ್ರಮದ ವೇದಿಕೆಯಲ್ಲಿ ಆಟದ ಸರಣಿಯೊಂದನ್ನು ಮಾಲಿಂಗ ಭಟ್ಟ, ಸತ್ಯನಾರಾಯಣ ಭಟ್ಟರಾದಿ ನನ್ನ ಗೆಳೆಯರ ಕೂಟವೊಂದು ಯೋಜಿಸಿತ್ತು. ಮೊದಲ ಪ್ರದರ್ಶನ ನಡೆದಾಗ ಇಂಥದ್ದೇ ಒಂದು ಸಮಸ್ಯೆ ಅವರನ್ನು ಕಾಡಿತ್ತು. ಅಲ್ಲಿ ಹಿನ್ನೆಲೆಯಲ್ಲಿ ಪೂರ್ತಿ ರಂಗ ತುಂಬಿ ಬರುವಂತೆ ಮತ್ತು ಖಾಯಂ ವ್ಯವಸ್ಥೆಯಾಗಿ ರಾಮಕೃಷ್ಣ ಪರಮಹಂಸ, ವಿವೇಕಾನಂದ ಮತ್ತು ಶಾರದಾದೇವಿಯವರ ಭಾವಚಿತ್ರಗಳಿವೆ. ಅವೂ ಕಲಾಪ್ರಸ್ತುತಿಗೆ ಅನುಚಿತ ಹಿನ್ನೆಲೆ ಕಲ್ಪಿಸುತ್ತಿತ್ತು. ಸಮಸ್ಯೆಯನ್ನು ಕೇಳಿಸಿಕೊಂಡ ಆಶ್ರಮದ ಸ್ವಾಮಿಗಳು ತುಂಬಾ ಉದಾರವಾಗಿಯೇ ಆ ಚಿತ್ರಗಳೆದುರು ಪರದೆ ಎಳೆಯಲು ಅನುಮತಿಸಿದ್ದರು. ಬಹುಶಃ ಪುರಭವನದಲ್ಲೂ ಇದು ಸಾಧ್ಯವಾಗುತ್ತಿತ್ತು.
 2. ಪ್ರದರ್ಶನ ಮುಗಿದ ಮೇಲೆ ಕಲಾವಿದರನ್ನು ಗೌರವಿಸಲು ಮೊಯ್ಲಿಯವರು ವೇದಿಕೆಗೆ ಬಂದಿದ್ದರು. ಆಗ ಗುರು ಸಂಜೀವರು ಸಾರ್ವಜನಿಕವಾಗಿ ಈ ಪ್ರಸಂಗವನ್ನು ಬಹುವ್ಯಾಪಿಯಾಗಿ ಪ್ರದರ್ಶಿಸಲು ಯಕ್ಷಗಾನ ಕೇಂದ್ರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಮೊಯ್ಲಿಯವರಲ್ಲಿ ಸ್ಪಷ್ಟ ಬೇಡಿಕೆಯಿಟ್ಟರು. ವಿಶೇಷ ಅಗತ್ಯಕ್ಕೆ ಮತ್ತು ಸಭೆಗೆ ಮಾತ್ರ ಸಜ್ಜುಗೊಂಡ ಪ್ರದರ್ಶನವಿದು. ಅದೆಷ್ಟು ಒಳ್ಳೆಯದಾಗಿದ್ದರೂ ಸಾರ್ವತ್ರಿಕ ಪ್ರದರ್ಶನಕ್ಕೆ ಅದಕ್ಕೂ ಮಿಗಿಲಾಗಿ ಯಕ್ಷಗಾನ ಕೇಂದ್ರದ ಪ್ರಾತಿನಿಧಿಕ ಪ್ರಯೋಗವಾಗಿ ಇಂಥವು ಚಲಾವಣೆಗೆ ಬರುವುದು ಉಚಿತವಲ್ಲ.

ಪ್ರದರ್ಶನಕ್ಕೂ ಮೊದಲು ನಾನು ಚೌಕಿಗೆ ಹೋಗಿದ್ದೆ. ಆಗ ಸಂಜೀವರು ಗಂಡು ಕ್ರೌಂಚದ ವೇಷದಲ್ಲಿದ್ದುದನ್ನು ಕಂಡಿದ್ದೆ. ಅದಲ್ಲವಾದರೆ ಪ್ರದರ್ಶನದ ಯಶಸ್ಸಿನಲ್ಲಿ ಬೊಟ್ಟಿಟ್ಟು ಹೇಳಲು ಹೊರಟಿದ್ದರೆ ನನಗೆ ಸೋಲು ಖಂಡಿತ. ಯಾವ ಪಾತ್ರವೂ ಪಾತ್ರಧಾರಿಯ ಹಿರಿತನ, ಕಿರಿತನದಿಂದ ಅತಿಬೆಳಗಿದ್ದೂ ಇಲ್ಲ, ಸೊರಗಿದ್ದಂತೂ ಇಲ್ಲವೇ ಇಲ್ಲ! ಭಾಗವತರ ಒಂದೆರಡು ಹಾಡುಗಳಲ್ಲಂತೂ ಸಾಂಪ್ರದಾಯಿಕ ಪ್ರೇಕ್ಷಕರು ನಿಜಕ್ಕೂ ಭಾವಪರವಶರಾಗಿ ಉದ್ಗಾರ ತೆಗೆಯಲೋ, ಚಪ್ಪಾಳೆಗೆಳಸುವುದೋ ಕಾಣುತ್ತಿತ್ತು. ರಂಗಪ್ರಸ್ತುತಿ ಸತ್ತರೂ ಸರಿ, ನನ್ನ ರಾಗಕ್ಕೆ ಚಪ್ಪಾಳೆ ಬೀಳಬೇಕು ಎಂದೊರಲುವ ಭಾಗವತರು, ಒಟ್ಟಾರೆ ಪರಿಣಾಮಕ್ಕೆ ಭಾರವಾದರೂ ಸರಿ ನನ್ನ ವೈಶಿಷ್ಟ್ಯಕ್ಕೆ ಸೀಟಿ ಬರಲೇಬೇಕು ಎಂದು ಸಿದ್ಧ ಸರ್ಕಸ್ ತಂತ್ರಗಳನ್ನೆಲ್ಲಾ ಯಕ್ಷ-ವೇದಿಕೆಗೆ ಹೇರುವ ಪಾತ್ರಧಾರಿಗಳ ವಿರುದ್ಧ ಈ ಪ್ರದರ್ಶನವೇ ಒಂದು ರಣಘೋಷ. ಮೇಳಕಲೆಯ ಸತ್ವದ ವಿಜಯಕ್ಕೆ ಪ್ರದರ್ಶನದ ಕೊನೆಯಲ್ಲಷ್ಟೇ ಕರತಾಡನ ಮಹಾಪೂರ ಹರಿಯಿತು.

12 responses to “ರಣಘೋಷ – ಹೀಗೊಂದು ಯಕ್ಷಗಾನ!

 1. ತುಂಬ ದಿನಗಳ ಅನಂತರ ಯಕ್ಷಗಾನದ ಬಗ್ಗೆ ಲೇಖನವನ್ನು ಓದುವ, ಪ್ರಾತ್ಯಕ್ಷಿಕೆಯನ್ನು ನೋಡುವ ಅವಕಾಶ ಒದಗಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಕಾರಂತರ ಯಕ್ಷರಂಗದಿಂದ ವೃತ್ತಿಪರರು ಮತ್ತು ಹವ್ಯಾಸಿಗಳು ಸ್ವಿಕರಿಸಬಹುದಾದ ಹಲವು ಅಂಶಗಳಿವೆ.
  ಭಾಗವತರನ್ನು ವೇದಿಕೆಯ ಮೇಲ ಕೂರಿಸದೆ ನೇಪಥ್ಯದಲ್ಲಿರಿಸಿ ಅಭಿನಯಕ್ಕೆ ವಿಶಾಲ ವೇದಿಕೆ ಒದಗಿಸುವುದು ಅಪಥ್ಯವೆನಿಸಬಾರದು.
  ಶಾಲೆಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ಮನೋರಂಜನೆಯ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಪ್ರದರ್ಶನವಿರುವಾಗ ವೇದಿಕೆಯ ಮೇಲೆ ಹಿನ್ನೆಲೆಯಾಗಿರುವ ಕಾರ್ಯಕ್ರಮದ ವಿವರಗಳ ಫಲಕಗಳು ಪ್ರಾಯೋಜಕರ ಜಾಹೀರಾತುಗಳು ಇಂಗ್ಲಿಷ್ ಅಲ್ಲ, ಕನ್ನಡದಲ್ಲಿದ್ದರೂ ಆಭಾಸವೇ.
  ಧ್ವನಿವರ್ಧಕಗಳಿಲ್ಲದ ಕಾಲದ ಹಾಡುಗಾರಿಕೆಯ ಏರುದನಿ(ಕೂಗುದನಿ?)ಯನ್ನು ಬದಲಿಸಿಕೊಂಡು ಭಾವಸೂಕ್ಷ್ಮಗಳ ಸಮರ್ಥ ಅಭಿವ್ಯಕ್ತಿಗೆ ತಕ್ಕ ದನಿಯನ್ನು ಬಳಸಬಹುದು. ಮಂಗಳೂರಿನ ಪುರಭವನದಲ್ಲಿ ನೋಡಿದ್ದ ಕಾರಂತರ ಶೈಲಿಯ ಯಕ್ಷರಂಗ ಪ್ರಯೋಗವನ್ನು ಸಾಧ್ಯವಾದರೆ ಮತ್ತೊಮ್ಮೆ ನೋಡಬೇಕೆನಿಸುತ್ತದೆ. ವೃತ್ತಿಪರರು ಇವನ್ನು ಸಾಧ್ಯಮಾಡಲಿ ಎಂದು ನನ್ನ ವಿನಂತಿ.

 2. Nice article… Happy to see the videos… its long time now since i have seen any ‘yakshagaana-bayalaata’. In my place (kasaragod) now this art is almost under extinction…!! very sad to say this though the same place had given birth to great people in the field like ‘Parthi-Subba’ ‘Sheni’ ‘Balipa’ etc…
  Seems to be a tragedy and a failure of ours in supporting these….

 3. ತುರ್ತು ಪರಿಸ್ಥಿತಿ ಇದ್ದಾಗ ಮೈಸೂರಿನ ಕ್ರಾಫರ್ಡ್ ಹಾಲಿನಲ್ಲಿ ಒಮ್ಮೆ ಕಾರಂತ ನಿರ್ದೇಶಿತ ಯಕ್ಷಗಾನ ಪ್ರಯೋಗ ನೋಡಿದ್ದೆ. ಆನಂತರ ಅಂಥ ಪ್ರಯೋಗ ನೋಡಿಲ್ಲ

 4. ಶ್ರೀ ಕುಂಬಳೆ ಸುಂದರ ರಾಯರು ದೆಹಲಿಗೆ ಬಂದಿದ್ದಾಗ ಬಜ್ಪೆಯಲ್ಲಿ ನಡೆಯಲಿರುವ ಕಮ್ಮಟದ ಬಗ್ಗೆ ಹೇಳಿದ್ದರು. ಶ್ರೀ ಮುರಳಿ ಕಡೆಕಾರ್ ಅವರು ಅದರ ಬಗ್ಗೆ ಹೆಚ್ಚು ವಿವರಣೆ ನೀಡಿದ್ದರು. ಈಗ ನಿಮ್ಮ ಲೇಖನ ಓದಿ ವಿವರಗಳೆಲ್ಲ ಸ್ಪಷ್ಟವಾದುವು. ತೆನ್ಕುತಿಟ್ಟಿಗೆ ಒಬ್ಬ ಕಾರಂತರು ಸಿಗಲಿಲ್ಲವಲ್ಲ ಎಂಬ ಬೇಸರ ಈಗಲೂ ನನಗಿದೆ. ಅದೇನೇ ಇರಲಿ, ತೆಂಕು ಬಡಗು ತಿಟ್ಟುಗಳ ಅತ್ಯದ್ಭುತ ಕಥನ ಗುಣ, ನಾಟ್ಯ, ಬಣ್ಣಗಾರಿಕೆ ಮತ್ತಿತರ ಅಂಶಗಳ ಮಹತ್ವವನ್ನು ಒಂದುಬಗೆಯ ಶಿಸ್ತಿಗೆ ಒಳಪಡಿಸಿ ದೇಶಕ್ಕೆ ತಿಳಿಸಿ ಹೇಳುವ ಕೆಲಸವನ್ನು ನಾವೀಗ ಮಾಡಲೇಬೇಕಾಗಿದೆ.. ದೇಶದ ವಿವಿಧ ಕಲೆಗಳಿಗೆ ಹೀಗೆ ಮಾಡಲು ಅಗತ್ಯವಾದ ಹಣವನ್ನು UNESCO ಕೊಡುತ್ತಿದೆ, ಆದರೆ ಅ ಪುಣ್ಯ ಯಕ್ಷಗಾನಕ್ಕೆ ಇನ್ನು ಬಂದಿಲ್ಲ. ಯಕ್ಷಗಾನ ಅಕಾಡೆಮಿಯವರು ದೆಹಲಿಯ ತೆಂಕು ತಿಟ್ಟು ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ಕಳೆದ ಅಗುಸ್ಟ್ ತಿಂಗಳಲ್ಲಿ ದೆಹಲಿಯ ರಾಷ್ಟೀಯ ನಾಟಕ ಶಾಲೆಯಲ್ಲಿ ‘ಯಕ್ಷಗಾನದ ಭಾಷೆ’ ಎಂಬ ಹೆಸರಿನಲ್ಲಿ ಕೆಲವು ವೇಷಗಳ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು. ನಮ್ಮ ಕಲಾವಿದರ ಪ್ರತಿಭೆಗೆ ಏನ್ ಎಸ ಡಿ ಯೆ ಮಕ್ಕಳು ದೀರ್ಘ ಚಪ್ಪಾಳೆ ಮತ್ರವಲ್ಲು ಎದ್ದು ನಿಂತು ಗೌರವ ತೋರಿಸಿದರು. ಈ ಕಲೆಗೆ ದೊಡ್ದಶಕ್ತಿಯಿದೆ, ಅದನ್ನು ಪರಿಣಾಮಕಾರಿಯಾಗಿ ಬಳಸಲು ನಾವೆಲ್ಲ ಕೆಲಸ ಮಾಡಬೇಕಾಗಿದೆ.

 5. Good article.Unfortunately, only internet users have access to this. I feel that your views must reach wider circle of Yakshagana spectators and artistes.How will you do it?

 6. Shanady Ajithkumar Hegde

  Verygood article.Thankyou verymuch.
  Shanady Ajithkumar Hegde

 7. krishna prakasha ulithaya

  Article with strong feeling and depth in its artistic sense. Personally I feel the very costume of Tenkutittu restricts Nritya & Abhinaya in its minute aspects as it is allowed in Badagu tittu.

  Due to poor financial condition & Less sound sleep artists are unable to think over many areas wherein lot of improvements can be done. Steps shall be taken to overcome this problem.

  As far as Himmela is concerned, lot of research should be undertaken to unearth various aspects which is not practiced now. Ex. use of Chow Tala, Druva Tala, Bidthige in Kore (Tittitai) Tala, Aditala etc.

  Further, we are loosing sensibility in playing Maddale and Chende. According to me the role of Chende and Maddale is, in its apex level,to reflect the feelings of Bhagavathike. When he sings Maddale should say yes, yes, it is true, oho, hm…Presently, whoever make noise is considered the superstar Maddalegara. In the course of playing Maddale, if he overtakes Bhagavata, he is well considered as perfect accompanist.
  I don’t know when this attitude will be vanished.

  Chapu: There is no silence in the sound of Maddale and Chende.

  Artist should not become a critique and a critique should not become an artist.

  It was wonderful to read your article.

  Thank you.

  Krishna Prakasha Ulithaya, Mangalore.

 8. dhananjay from mysore

  ಅಬ್ಬಾ ! ಎಂತಹ ಮೋಡಿಯಿದು ? ಕಣ್ಣಿಗೆ ಕಟ್ಟುವಂತೆ ಅಲ್ಲ ರಾಚುವಂತೆ ಬರೆದಿರುವಿರಲ್ಲಾ … ಸಂತಸವಾಯ್ತು. ನಿಜವಾಗ್ಲೂ ಕರಾವಳಿ ಯಕ್ಷಗಾನದ ಎಲ್ಲಾ ಅಂಗಗಳ ಪರಿಷ್ಕರಣೆಯ ಸಂಕ್ರಮಣ ಕಾಲ ಸನ್ನಿಹಿತವಾಗಿದೆ. ತಮ್ಮಂತಹ ವಿದ್ವಾಂಸರ ನೇತೃತ್ವದಲ್ಲಿ ಅದು ನಡೆಯುವುದಾದರೆ ನನ್ನಂತಹ ಅನೇಕ ಪಿಪಾಸುಗಳ ಸಹೃದಯೀ ಸಹಕಾರ ದೊರಕುವುದು. ತೆಂಕಿನ ಕಾರಂತರು ತಾವೇ ಯಾಕಾಗಬಾರದು ? || ಯಕ್ಷಗಾನಂ ವಿಶ್ವಗಾನಂ ||
  ಧನಂಜಯ್ (೮೧೨೩೭ ೮೬೪೨೫)

 9. The article on yakshaghana was an eye opener.It is also very informative about the current state of the contemporary art form. I recently saw a marathi play “Sangeet Katyar Kalajat Ghusali” staged by 115 year old drama company “Bhaat Natya Mandir”, Pune on 9th october 11. The Marathi and Bengali have kept their theatrical art forms alive. Can yakshaghana still produce great artists like in the past? keep up the good work

 10. ಯಾವುದೇ ವಿಷಯದ ಸಮಗ್ರ ಅಭಿವ್ಯಕ್ತಿಗೆ ಬೇಕಾದ ಎಲ್ಲಾ ಪೂರ್ವ ತಯಾರಿ ಇದರಲ್ಲಿ ಇವೆ. ಯಕ್ಷಪ್ರಿಯರಿಗೆ ರಸದೌತಣ.ವೇದಿಕೆಯ ಆಭಾಸ ತಪ್ಪಿಸಲು ಕಪ್ಪು ಪರದೆ ಉಪಯೋಗಿಸಬಹುದಿತ್ತು . ಅಶೋಕರ ಸೂಕ್ಷ್ಮ ದೃಷ್ಟಿ ಮತ್ತು ನೇರ ನುಡಿ ಇನ್ನಷ್ಟು ಬೆಳಕು ಚೆಲ್ಲಲಿ.

  ಪಾ. ನ. ಮಯ್ಯ

 11. ಕಮೆಂಟಿಗರ ಉಪ್ಪಿನ ಕಾಯಿಯನ್ನೋ ಸಂಡಿಗೆಯನ್ನೋ ಭುಜಿಸುತ್ತಾ ಯಕ್ಖ್ಷಗಾನ ನನ್ನು ಪುನಹಾ ಮೆದ್ದು ಅನುಭವಿಸಿದೆ. ಒಂದೇ ವ್ಯಥೆ ಎದ್ದುಕೊಂಡು ನನ್ನೆದುರು ಕುಣಿಯುತ್ತಾ ಇದೆ. ತೆಂಕು ತಿಟ್ಟು ಯಕ್ಷಗಾನ ಅಕಾಡೆಮಿ ಒಂದು ಇನ್ನೂ ಹುಟ್ಟಿಲ್ಲ ! – ಅನ್ನುವ ವ್ಯಥೆ ನನ್ನನ್ನು ಕಾಡುತ್ತಾ ಇದೆ.

  ಮೈಕಾಸುರನ ಇದುರು ಕುಳಿತು ಭಾಗವತರು ವಿರಾಟರಾಯನ ಹಾಗೆ ಅರಚಿಕೊಳ್ಳ ಬೇಕಿಲ್ಲ. ಭಾಗವತರು ಏರು ಸ್ವರದಲ್ಲಿ ಹಾಡದೇ ಇದ್ದರೆ ರಸಾಭಾಸ ಆಗುತ್ತದಂತೆ! ಆಗ ಸೌಂಡ್ ಕಂಟ್ರೋಲ್ ಮಾಡುವ ಮನುಷ್ಯ ಸ್ವಲ್ಪ ಮೈಕಾಸುರನ ಗಂಟಲು ಹಿಡಿಯ ಬಾರದೇಕೆ?

  ತೆಂಕುತಿಟ್ಟಿನ ಯಕ್ಷಗಾನದ ಪಟ್ಟು ಕೇಳುತ್ತಲೇ ಬೆಳೆದ ನನಗೆ ಎಂದೆಂದಿಗೂ ಭಾಗವತರ ಜಾಗಟೆ ತಾಳ, ಮದ್ದಳೆ ಮತ್ತು ನಿಂತು ಬಾರಿಸುವ ಚೆಂಡೆಯೇ ಪ್ರಿಯ.
  ಈ ನಿಟ್ಟನ್ನು ಬದಲಾಯಿಸಲು ಸಾಧ್ಯ ಇಲ್ಲ. ಭಾರತೀಯರಾದ ನಮಗೆ ಪೂರಿ, ಚಪಾತಿ ದೋಸೆ ತಿನ್ನಲು ಕೈಬೆರಳುಗಳನ್ನೇ ಉಪಯೋಗಿಸಿದರೇನೇ ಅವು ರುಚಿ. ನಮಗೆ ಬೆಳ್ಳಿಯ ಚಾಕು ಮುಳ್ಳು ಬೇಕಿಲ್ಲ.

  ನಾವು ಮುಸ್ಸಂಜೆಯ ಅಬ್ಬರ ತಾಳ ಕೇಳಿದನಂತರವೇ ” ಪ್ರಸಂಗ ಯಾವುದಯ್ಯಾ? ” ಅನ್ನುತ್ತಾ ಕೇಳುತ್ತಾ ಒಮ್ಮೆ ಹೊರಟ ಮೇಲೆ ಯಾವ ದಶಾವತಾರದ ಪ್ರಸಂಗವಾದರೂ ” ಸೈ ” ಎನ್ನುತ್ತಾ ನಾಲ್ಕಾರು ಮೈಲಿ ಬಯಲಾಟಕ್ಕೆ ನಡೆಯಲು ತಯಾರು!

  ತೆಂಕು ತಿಟ್ಟಿಗೂ ಒಂದು ಪಾಠಶಾಲೆ ಬರಲಿ. ಕಟೀಲು ಮೇಳಗಳಂಥಹಾ ಮಹಾ ಮೇಳಗಳು ತಮ್ಮ ಪಾತ್ರಧಾರಿಗಳನ್ನು ಸದ್ರಿ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿಸಿ ತಯಾರು ಮಾಡಿಕೊಳ್ಳಬೇಕು. ಯಕ್ಷಗಾನದ ಭವ್ಯ ಪರಂಪರೆ ಉಳಿಯಬೇಕು.

  ಅರುವತ್ತು ವರ್ಷಗಳ ಹಿಂದೆ ನಾವು ನೋಡಿದ ಯಕ್ಷಗಾನ ಪ್ರಸಂಗಗಳು ಇನ್ನೊಮ್ಮೆ ಚಿಗುರಿ ಬರಬೇಕು. ಈ ಮುಹೂರ್ತವೇ ಶುಭ ಮುಹೂರ್ತ ……. ಸಾರಥಿಯೇ ಮುನ್ನಡೆಸು ರಥವನ್ನು!
  ಗಟ್ಟ ಸೇರಿದ ಉತ್ತರ ಕುಮಾರ
  ಪೆಜತ್ತಾಯ.
  .

 12. ashokavardhanare,

  sanjeevannana prayogagalige neevu mathra criticism bareyaballiri. nanobba avara prayogagala hucccha. avra panchavati-jatayu moksha shimogadalladaga adbhutha pradarshanavagitthu. yakshagana badaguthittige avarobbare samartha guru.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s