ಅತ್ರಿ, ಅಶೋಕ, ಆರೋಹಣ

ಇತ್ತೀಚಿನ ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ

ಅತ್ರಿ

ನನ್ನ (ಜಿ. ಎನ್. ಅಶೋಕವರ್ಧನನ) ವಿದ್ಯಾರ್ಥಿ ದೆಸೆಯ ಒಂದು ಹವ್ಯಾಸವಾಗಿ ತೊಡಗಿದ ಪುಸ್ತಕ ವ್ಯಾಪಾರ ವೃತ್ತಿಯಾಗಿಯೇ ಕುದುರಿದ್ದಕ್ಕೆ ಸಾಕ್ಷಿ ಅತ್ರಿ ಬುಕ್ ಸೆಂಟರ್. ಮೈಸೂರಿನ ಬೀದಿಗಳಲ್ಲಿ, ಆಸುಪಾಸಿನ ಊರುಗಳಲ್ಲೂ ಮನೆಮನೆಗೆ ಪುಸ್ತಕ ಒಯ್ದು ಮಾರಾಟ ಮಾಡಿದ ಅನುಭವ, ಒಂದೂವರೆ ತಿಂಗಳ ಮುಂಬೈ ಮತ್ತು ಪುಣೆ ವ್ಯಾಪಾರಕ್ಕೂ ಮುಂದಿನ ವಿದ್ಯಾರ್ಥಿ ದೆಸೆಯುದ್ದಕ್ಕೂ ಅಂಚೆ ಪುಸ್ತಕ ವ್ಯಾಪಾರಕ್ಕೂ ಧೈರ್ಯ ತುಂಬಿತು. ೧೯೭೫ರಲ್ಲಿ ಮಂಗಳೂರಿನಲ್ಲಿ ಅತ್ರಿ ಮಳಿಗೆ ಮೊದಲ ಬಾರಿಗೆ ಸಾರ್ವಜನಿಕಕ್ಕೆ ತೆರೆದುಕೊಂಡಾಗ ಕೇವಲ ತಾಪೇದಾರಿಯನ್ನು (ತಿಂಗಳ ಕೊನೆಯಲ್ಲಿ ಸಂಬಳಕ್ಕೆ ಯಾರದೋ ಎದುರು ದೀನನಾಗುವ ಸ್ಥಿತಿ) ನಿರಾಕರಿಸುವ ವೃತ್ತಿಯಾಗಿ ಭಾವಿಸಿದ್ದೆ. ನನ್ನ ಹಿನ್ನೆಲೆಗೆ ಮತ್ತು ಓದಿಗೆ ನಿಲುಕುವ ವ್ಯವಹಾರ ಎಂದಷ್ಟೇ ನೆಚ್ಚಿಕೊಂಡೆ. ಆದರೆ ಬಲು ಬೇಗನೆ ಜ್ಞಾನಪಾರಾವಾರದಲ್ಲಿ ನನ್ನ ಪುಟ್ಟ ದೋಣಿಯ ಮಿತಿಯನ್ನು ಶಕ್ತಿಯಾಗಿಸಿಕೊಂಡೆ. `ಕೇವಲ ಓದುವ ಪುಸ್ತಕಗಳು’ ಎಂದಿದ್ದ ವಿಶೇಷಣ ಸಂಕೀರ್ಣಗೊಳ್ಳುತ್ತಾ ವೈದ್ಯಕೀಯ ಪುಸ್ತಕಗಳಿಲ್ಲ, ತಂತ್ರಜ್ಞಾನ, ಶಾಲೆ ಕಾಲೇಜುಗಳ ಪಠ್ಯ, ಗೈಡು, ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಇಲ್ಲಾ ಇಲ್ಲ. ಹೀಗೆ ಹಲವು ಇಲ್ಲಾಗಳಿಂದ ಮೊನಚುಪಡೆದು ಸಾಮಾನ್ಯರ ಓದಿಗೆ `ಎಲ್ಲೂ ಇಲ್ಲದ್ದು ಇಲ್ಲಿದೆ, ಇಲ್ಲಿಲ್ಲದ್ದು ಎಲ್ಲೂ ಇಲ್ಲ’ ಎಂದು ಸಾಧಿಸುವ ಪ್ರಯತ್ನ ನಿರಂತರ ನಡೆಸಿದ್ದೇನೆ.

ashoka-vardhana

೧೯೯೦ರಲ್ಲಿ ತಂದೆಯ (ಜಿ.ಟಿ. ನಾರಾಯಣರಾವ್) ನೋಡೋಣು ಬಾರಾ ನಕ್ಷತ್ರದೊಡನೆ ನಾನು ಪ್ರಕಾಶನರಂಗಕ್ಕೂ ಇಳಿದೆ. ಪ್ರಕಾಶನ ಮುಖ್ಯವಾಗಿ ನನ್ನ ತಂದೆಯ ಮತ್ತೆ ನಮಗೆ ತೀರಾ ಆಪ್ತವಾದ ವ್ಯಕ್ತಿಯ ಅಥವಾ ವಿಷಯಗಳ ಬಗ್ಗೆ ಇದುವರೆಗೆ ಐವತ್ತಕ್ಕೂ ಮಿಕ್ಕು ಪ್ರಕಟಿಸಿದೆ, ಮರುಮುದ್ರಿಸಿದೆ. ಪ್ರಕಾಶನ ತಂದೆಯ ಮಾತಿನಲ್ಲಿ ಹೇಳುವುದಾದರೆ “ಸಮಾಜಕ್ಕೆ ನಮ್ಮ ಋಣಸಂದಾಯ.” ಹಾಗಾಗಿ ಪ್ರಕಟಣೆಗಳು ಸದಾ ಕೊಳ್ಳುಗ ಸ್ನೇಹೀ ಬೆಲೆಯಲ್ಲಿರುತ್ತವೆ. ‘ಸೇವಾವ್ರತ’ ನಮ್ಮದಾದ್ದರಿಂದ ಪುಸ್ತಕೋದ್ಯಮದ ಇತರ ವರ್ಗಗಳಿಂದ ತ್ಯಾಗ (ಕಾಗದ, ಮುದ್ರಣ, ಬಿಡಿ ಮಾರಾಟಗಾರರ ವಟ್ಟಾ ಇತ್ಯಾದಿ) ಸರಕಾರವೂ ಸೇರಿದಂತೆ ಅನ್ಯ ಮೂಲಗಳಿಂದ ಸಹಾಯ (ಅನುದಾನ, ಸಗಟು ಖರೀದಿ ಇತ್ಯಾದಿ) ಪಡೆದುದಿಲ್ಲ, ಬಯಸುವುದೂ ಇಲ್ಲ. ಪುಸ್ತಕೋದ್ಯಮದ ಅವನತಿಗೆ ಏಕೈಕ ಕಾರಣ ಸರ್ಕಾರೀಕರಣ.

ಇತ್ತೀಚಿನ ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ

ಅಶೋಕ

ಜನನ ೧೯೫೨. ತಂದೆ, ತಾಯಿ – ಜಿ.ಟಿ ನಾರಾಯಣ ರಾವ್ ಮತ್ತು ಲಕ್ಷ್ಮೀ ದೇವಿ. ಹೆಂಡತಿ – ದೇವಕಿ, ಮಗ – ಅಭಯಸಿಂಹ, ಸೊಸೆ ರಶ್ಮಿ. ಪ್ರಾಥಮಿಕ ವಿದ್ಯೆ ಮಡಿಕೇರಿ, ಬಳ್ಳಾರಿ. ಪ್ರೌಢ ಶಾಲೆ, ಪದವಿಪೂರ್ವ ಬೆಂಗಳೂರು. ಸ್ನಾತಕ, ಸ್ನಾತಕೋತ್ತರ (ಇಂಗ್ಲಿಶ್) ಮೈಸೂರು. ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ಏಕೈಕ ಪಠ್ಯೇತರ ಚಟುವಟಿಕೆ ಎನ್.ಸಿ.ಸಿ. ಪ್ರಕಟಿತ ಪುಸ್ತಕಗಳು – ತಾತಾರ್ ಶಿಖರಾರೋಹಣ, ಬೆಟ್ಟಗುಡ್ಡಗಳು, ಪುಸ್ತಕ ಮಾರಾಟ ಹೋರಾಟ.

ಇತ್ತೀಚಿನ ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ

ಆರೋಹಣ

ವಾರದ ಆರು ದಿನ ವೃತ್ತಿರಂಗ ನಗರದೊಳಗೆ, ನಾಲ್ಕು ಗೋಡೆಯ ನಡುವೆ ಹಿಡಿದಿಡುವುದಕ್ಕೆ ಎದುರು ಭಾರವಾಗಿ ಬೆಳೆದು ನಿಂತ ಹವ್ಯಾಸಕ್ಕೆ ಹೆಸರು ಆರೋಹಣ ಪರ್ವತಾರೋಹಿಗಳು ಸಾಹಸಿಗಳು. ವಿದ್ಯಾರ್ಥಿ ದೆಸೆಯಲ್ಲಿ ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯಲ್ಲಿ ವಿ. ಗೋವಿಂದರಾಜರ ಮಾರ್ಗದರ್ಶನದಲ್ಲಿ ದಕ್ಕಿದ ಪರ್ವತಾರೋಹಣ ಶಿಸ್ತಿಗೆ ಸಾಹಸದ ಪುಕ್ಕ ಸಿಕ್ಕಿಸಿದೆ. ಪರಿಸ್ಥಿತಿಯ ಅಗತ್ಯವಾಗಿ ಪರಿಸರಪ್ರೇಮ ವರ್ಧಿಸಿತು, ಉಲ್ಲಾಸ ಕಾರಂತರ ಗೆಳೆತನದಿಂದ ವನ್ಯಸಂರಕ್ಷಣೆಯ ಛಲ ಕುದುರಿತು. ಅವಿಭಜಿತ ದಕ ಜಿಲ್ಲೆಯಲ್ಲಿ ನಮ್ಮ ಬಳಗ ಪಾದ ಊರದ ಶಿಖರವಿಲ್ಲವೆನ್ನುವಷ್ಟು ಪಶ್ಚಿಮ ಘಟ್ಟ ತಿರುಗಿದೆವು. ಬೈಕ್ ಯಾನಗಳು ಅಸಾಂಪ್ರದಾಯಿಕ ಮಾರ್ಗಗಳನ್ನು ಶೋಧಿಸುವುದರೊಡನೆ ಎರಡುಬಾರಿ ಅಖಿಲಭಾರತ, ಒಮ್ಮೆ ದಕ್ಷಿಣ ಭಾರತವನ್ನೂ ಸುತ್ತಿ ಬಂತು. ಗುಹಾಶೋಧಗಳಂತೂ ಕೊನೆಯಿಲ್ಲದ ವಿಚಾರಮಂಥನಕ್ಕೆ ಕಾರಣವಾದ್ದನ್ನು ಇಲ್ಲೇ ನೀವು ನೋಡಬಹುದು. ಕಡಲ ಯಾನ, ಗಗನಗಮನದ ಅಲ್ಪಸ್ವಲ್ಪ ಅನುಭವಗಳೂ ಆರೋಹಣದ ಕಡತದಲ್ಲಿ ಇದ್ದೇ ಇದೆ. ದಕ್ಷಿಣ ಭಾರತದುದ್ದಕ್ಕೆ ನಡೆದ ‘ಪಶ್ಚಿಮ ಘಟ್ಟ ಉಳಿಸಿ’ ಪಾದಯಾತ್ರೆಗೆ ಈ ವಲಯದಲ್ಲಿ ಮಾರ್ಗದರ್ಶಿಸಿದ ಖ್ಯಾತಿ ಆರೋಹಣದ್ದು. ಸುಮಾರು ಹತ್ತು ವರ್ಷಗಳ ಹಿಂದೆ ಸಮೀಪದಲ್ಲೇ ನಾನು ಪ್ರಯೋಗಭೂಮಿಯಾಗಿ ಕೊಂಡ ಒಂದು ಎಕ್ರೆ ಪಾಳುನೆಲ ‘ಅಭಯಾರಣ್ಯ’ ಇಂದು ವನ್ಯ ಪುನರುತ್ಥಾನದ ಸಂಕೇತ. ನೇರ ಪಶ್ಚಿಮ ಘಟ್ಟದಲ್ಲೇ ಕೇವಲ ಸಂರಕ್ಷಣೆಗಾಗಿ ಮಿತ್ರ ಕೃಷ್ಣಮೋಹನ್ ಜತೆ ಕೊಂಡ ಹದಿನೈದು ಎಕ್ರೆ ದಟ್ಟಾರಣ್ಯ ‘ಅಶೋಕವನ’ ನಮ್ಮ ಪರಿಚಿತ ವಲಯಗಳಲ್ಲಿ ಅಪೂರ್ವ. ಮುಖ್ಯವಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಒಟ್ಟಾರೆ ಈ ವಲಯದ ವನ್ಯಸಂರಕ್ಷಣೆಯ ಗುರುತರವಾದ ಹೊಣೆ ಮತ್ತು ಸಮರ್ಥ ಕಾರುಭಾರು ನಡೆಸುತ್ತಿರುವ ಎಲ್ಲಾ ಸಂಘಟನೆಗಳೊಡನೆ, ವ್ಯಕ್ತಿಗಳೊಡನೆ ಆರೋಹಣದ ಹೆಸರೂ ಅನಿವಾರ್ಯವಾಗಿ ಇದೆ.

ಇತ್ತೀಚಿನ ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ

Advertisements