Category Archives: ಯಕ್ಷಗಾನ

ರಣಘೋಷ – ಹೀಗೊಂದು ಯಕ್ಷಗಾನ!

ಶಿವರಾಮಕಾರಂತ ಪೀಠ, ಮಂವಿವಿನಿಲಯ ಈಚೆಗೆ ‘ಕಾರಂತರು ಮತ್ತು ಯಕ್ಷಗಾನ’ ಎಂಬೊಂದು ದಿನದುದ್ದದ ವಿಚಾರ ವಿಚಾರಗೋಷ್ಠಿ ಹಮ್ಮಿಕೊಳ್ಳಲಿದ್ದ ಸುದ್ಧಿ ನನಗೆ ಸಿಕ್ಕಿತು. ಸಹಜವಾಗಿ ನಾನು ವಿಚಾರಿಸಿದೆ, “ಕಾರಂತ ಪ್ರಯೋಗದ ಸಮರ್ಥ ಪ್ರದರ್ಶನ ಅಥವಾ ಪ್ರಾತ್ಯಕ್ಷಿಕೆಯನ್ನು ಕೊಡಬಹುದಾದ ಏಕೈಕ ತಂಡ ಉಡುಪಿಯ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರ. ಸಹಜವಾಗಿ ದಿನಪೂರ್ತಿ ಪ್ರಬಂಧ, ಚರ್ಚೆಗಳಿಗೆ ಕಲಶಪ್ರಾಯವಾಗಿ ಅವರ ಪ್ರದರ್ಶನ ಇರಲೇಬೇಕು. ಪ್ರಸಂಗ ಯಾವುದು?” ನನ್ನದು ಉದ್ದೇಶವಿಲ್ಲದ ಅಧಿಕ ಪ್ರಸಂಗವಾಗಿತ್ತು! ಕಾರಂತ ಪ್ರಯೋಗಗಳ ಉತ್ತರಾಧಿಕಾರದ ಕಾನೂನು ಹೋರಾಟ ಅತ್ಯುಚ್ಛ ನ್ಯಾಯಾಲಯದವರೆಗೂ ಏರಿದ್ದು, ಯಕ್ಷಗಾನ ಕೇಂದ್ರಕ್ಕೆ ಆಂಶಿಕ ಸೋಲಾದದ್ದು ನನಗೆ ತಿಳಿಯದ್ದೇನೂ ಅಲ್ಲ. (ಆ ಪ್ರಸಂಗದಲ್ಲಿ ಯಕ್ಷಗಾನ ಕೇಂದ್ರ ನನಗೆ ಹತ್ತಿರವಿದ್ದಷ್ಟೇ ಎದುರು ಪಕ್ಷದ ವಕೀಲ, ಎ.ಪಿ. ಗೌರೀಶಂಕರ – ನನ್ನ ಸೋದರಮಾವ, ಆತ್ಮೀಯರು!) ನ್ಯಾಯಾಲಯವೇ ಒಪ್ಪಿಗೆ ಕೊಟ್ಟ ಮಿತಿಗಳ ಒಳಗೆ ಆ ಗೋಷ್ಠಿಗೆ ಏನಾದರೂ ದಕ್ಕೀತು ಎಂಬ ನಿರೀಕ್ಷೆ ನಾನು ಇಟ್ಟುಕೊಂಡದ್ದು ತಪ್ಪಾಗಿತ್ತು. ಕಾರಂತ ಪೀಠ ಅವಶ್ಯ ಕೇಳಿದ್ದರು ಕೂಡಾ. ಆದರೆ ಉಡುಪಿಯ ಯಕ್ಷಗಾನ ಕೇಂದ್ರ ಕಾನೂನಿನ ಹೊಸ ‘ರಣಘೋಷ’ ಕೇಳಿಸಿಕೊಳ್ಳಲಿಚ್ಛಿಸದೆ, ವಿವಿನಿಲಯದ ಕರೆಯನ್ನು ಒಪ್ಪಿಕೊಂಡಿರಲಿಲ್ಲ. ಕಾರಂತ ಯಕ್ಷಗಾನ ಗೋಷ್ಠಿ ಶುಷ್ಕ ಗದ್ಯವೇ ಆಗಿ ನಡೆದುಹೋಯಿತು.
Continue reading

Advertisements

ತಾಮ್ರ ಧ್ವಜ ಕಾಳಗ ಸಂಕ್ಷಿಪ್ತ ‘ಪೂರ್ವರಂಗದೊಡನೆ’

ಶಿವರಾಮ ಕಾರಂತರು ದೂರದ ಪುತ್ತೂರಿನಲ್ಲಿ ನೆಲೆಸಿದ್ದರೂ ತನ್ನ (ಹತ್ತುಮುಖಗಳಲ್ಲಿ) ಯಕ್ಷಮುಖದ ಉಬ್ಬರಗಳಿಗೆ ಬಹುತೇಕ ಉಡುಪಿ, ಬ್ರಹ್ಮಾವರ ಎಂದು ಅಲೆದಾಡುತ್ತಿದ್ದ ಕಾಲವದು. ಅವರಿಗೆ ಬಹು ಸಮರ್ಪಕ ಮತ್ತು ಗಟ್ಟಿ ನೆಲೆ ಕಾಣಿಸಿದವರು ಕುಶಿ ಹರಿದಾಸ ಭಟ್ಟ; ಸಂಸ್ಥೆ – ಎಂ.ಜಿ.ಎಂ ಕಾಲೇಜು, ಉಡುಪಿ. ಹಾಗೆ ನೆಲೆಗೊಂಡ ಯಕ್ಷಗಾನ ಕೇಂದ್ರ (ಎಂ.ಜಿ.ಎಂ ಕಾಲೇಜು, ಉಡುಪಿ) ತನ್ನ ನಲ್ವತ್ತನೇ ವಾರ್ಷಿಕ ಹಬ್ಬವನ್ನು ಮೊನ್ನೆ (೨೭-೩-೧೧, ಆದಿತ್ಯವಾರ) ಸರಳವಾಗಿ ಆಚರಿಸಿಕೊಂಡಿತು. ಸರದಿಯೋಟದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶನ ಪದವಿಯನ್ನು ನೇರಾನೇರ ಕುಶಿಯವರಿಂದ ಹೆರಂಜೆ ಕೃಷ್ಣಭಟ್ಟರು ವಹಿಸಿಕೊಂಡರು. ಕಾಲೇಜಿನ ಹಿತ್ತಲಿನಿಂದ ಸಂಸ್ಥೆ ಸುಂದರ ಸ್ವಂತ ವಠಾರ (ಯಕ್ಷಗುರುಕುಲ ಶಿಕ್ಷಣ ಟ್ರಸ್ಟ್ (ರಿ) ಎಂಬ ಸ್ವಾಯತ್ತ ಸಂಸ್ಥೆಯೂ ಆಗುವುದರೊಂದಿಗೆ), ಅನುಕೂಲದ ಕಟ್ಟಡಕ್ಕೆ ಏರಿದ್ದೇ ದೊಡ್ಡ ಕಥೆ. ಸಂಸ್ಥೆಯ ಮುಖ್ಯ ಗುರುಪದದ ಪರಂಪರೆಗೆ ವೀರಭದ್ರ ನಾಯಕರು ಹಾಕಿದ ಅಡಿಪಾಯಕ್ಕೆ ಇಂದು ಸುವರ್ಣ ಕಳಶವಾಗಿ, ಯಕ್ಷಗಾನವನ್ನೇ ಮೆರೆಸುತ್ತಿದ್ದಾರೆ ಬನ್ನಂಜೆ ಸಂಜೀವ ಸುವರ್ಣ. (ಇವರ ಕುರಿತ ಹೆಚ್ಚಿನ ವಿವರಗಳಿಗೆ ಇಲ್ಲೇ ನನ್ನ ಹಳೆಯ ಯಕ್ಷ ಲೇಖನಗಳನ್ನು ನೋಡಿ)
Continue reading

ಯಕ್ಷೋಪಾಸನೆ

ಸೂರಿಕುಮೇರು ಗೋವಿಂದ ಟ್ (ಚಿತ್ರ ಮನೋಹರ ಉಪಾಧ್ಯ)

ಸೂರಿಕುಮೇರು ಗೋವಿಂದ ಭಟ್ (ಚಿತ್ರ ಮನೋಹರ ಉಪಾಧ್ಯ)

(ಸೂರಿಕುಮೇರು ಗೋವಿಂದ ಭಟ್ಟರ ಆತ್ಮಕಥೆಗೊಂದು ಅರೆಖಾಸಗಿ ಅನಿಸಿಕೆ)

ಪ್ರಿಯ ಗೋವಿಂದ ಭಟ್ಟರೇ ನಾನು ವ್ಯಾಪಾರೀ ಅಗತ್ಯದಲ್ಲಿ ಯಕ್ಷೋಪಾಸನೆ ಕೊಳ್ಳುತ್ತಿದ್ದರೂ ನೀವು ವೈಯಕ್ತಿಕವಾಗಿ ನನಗೆ ಒಂದು ಗೌರವಪ್ರತಿ ಕೊಡುವ ಉತ್ಸಾಹ ತೋರಿಸಿದಿರಿ. ನಾನು ಪ್ರತಿ ಒಪ್ಪಿಸಿಕೊಳ್ಳದಿದ್ದರೂ ನೀವು “ನನ್ನಿಂದ ಗೌರವ ಪ್ರತಿ ಪಡೆದ ಅಥವಾ ಪುಸ್ತಕ ಕೊಂಡ ಎಲ್ಲರಿಗೆ ನಾನು ಹೇಳುವುದಿಲ್ಲ. ಆದರೆ ನೀವು ಮಾತ್ರ ಪುಸ್ತಕ ಓದಿ ನಿಮ್ಮ ಅಭಿಪ್ರಾಯ ತಿಳಿಸಬೇಕು” ಎಂದು ಹೇಳಿಹೋದಿರಿ. ಹಾಗಾಗಿ ಮುಂದಿನ ಸಾಲುಗಳನ್ನು ಓದುವ ಕಷ್ಟ ಕೊಡುತ್ತಿದ್ದೇನೆ.

ಕಡುಬಡತನ, `ನಮ್ಮವರು’ ಎನ್ನಬಹುದಾದವರಿಂದಲೂ (ಅದೇ ಹೆಚ್ಚೇನೋ!) ಆದ ದ್ರೋಹಗಳು, ಯಾವುದೇ ಆದರ್ಶ ಕಟ್ಟಿಕೊಡುವವರಿಲ್ಲದೆಯೂ ನೀವು ರೂಪಿಸಿಕೊಂಡ ಜೀವನ, ಹಳೆಯ ಕಹಿಗಳ್ಯಾವವೂ ನಿಮ್ಮ ವರ್ತಮಾನವನ್ನು ಕಲುಷಿತಗೊಳಿಸದಂಥ ನಿಮ್ಮ ಸಂಯಮ ಹೀಗೆ ಪಟ್ಟಿ ಮಾಡ ಹೋದರೆ ಮೊದಲೇ ನಿಮ್ಮ ಬಗ್ಗೆ ಇದ್ದ ಪ್ರೀತಿ, ಗೌರವ ಅಪಾರವಾಗುತ್ತದೆ. ಹೀಗೆ ಇನ್ನಷ್ಟು ವಿವರಗಳಲ್ಲಿ ನಿಮ್ಮನ್ನೇ ನಿಮಗೆ ತೋರಿಸುವ ಬದಲು ಸದ್ಯ ನನಗೆ ಕಾಣಿಸಿದ ಭಿನ್ನಮತವನ್ನಷ್ಟೇ ಒಕ್ಕಣಿಸುತ್ತೇನೆ.

Continue reading

ಯಕ್ಷಗಾನ ಕಲಾರಂಗದ ಮೂರು ಬೈಠಕ್

yakshagana-kalaranga-1ಪ್ರಿಯ ಮುರಳಿ ಕಡೇಕಾರರೇ,

ಪದಾಧಿಕಾರಿಗಳ ಭಾರಕ್ಕೆ ಕುಸಿಯುವ, ಸ್ಥಾವರ ಕಟ್ಟುವ (ಕಛೇರಿ, ಸಭಾಭವನ ಇತ್ಯಾದಿ) ಹುಚ್ಚಿನಲ್ಲಿ ಆಶಯ ಸಮಾಧಿಸುವ ಸಂಘಟನೆಗಳ (ಹೆಚ್ಚಾಗಿ ಸರಕಾರೀ) ನಡುವಣ ಕಮಲ ನಿಮ್ಮ (ಉಡುಪಿಯ) ಯಕ್ಷಗಾನ ಕಲಾರಂಗ (ರಿ). ಅಂದಿನ (೯-೧೧-೨೦೦೮ ಆದಿತ್ಯವಾರ) ಸಭಾಸದರ ಸಂಖ್ಯೆಗೆ ಕಲಾರಂಗದ ಕಛೇರಿ ಕಿಷ್ಕಿಂಧೆಯೇ ಆಯ್ತು. ಆದರೆ ಅದನ್ನು ಮರೆಸುವಂತಿದ್ದ ಕಲಾಪಗಳು ಸುಂದರಕಾಂಡವೇ ಸರಿ! ಕಾರ್ಯಕ್ರಮ ನನಗೆ ಕೊಟ್ಟ ಸಂತೋಷವನ್ನು ಈ ಬಹಿರಂಗ ಪತ್ರದ ಮೂಲಕ ಹಂಚಿಕೊಳ್ಳಲು ಬಯಸುತ್ತೇನೆ. ಕಲೆಯ ಮತ್ತು ಕಲಾವಿದರ ಪೋಷಣೆ, ರಕ್ಷಣೆಗಳ ಗಿರಿಯನ್ನು ಹಳಗಾಲದ ಕಟ್ಟಡವೊಂದರ ಕಿರಿ (ಬೆರಳಿನಲ್ಲಿ?) ಕೋಣೆಯಲ್ಲೇ ನಿಭಾಯಿಸುವ ನಿಮ್ಮ ಸಂಸ್ಥೆಗೆ ಕಲಾರಸಿಕರ ಪೂರ್ಣ ಮನ್ನಣೆ ಮತ್ತು ದಾನಿ, ಪ್ರಾಯೋಜಕ ಸಂಸ್ಥೆಗಳ ನಿಷ್ಕಾಮ ಬೆಂಬಲ ಈ ಮೂಲಕವೂ ಒದಗಬಾರದೆಂದಿಲ್ಲವಲ್ಲ!

ಮೊದಲೊಂದು ಪ್ರವಾಸ ಕಥನ. ಕಲಾರಂಗದ ಸಕ್ರಿಯ ಸದಸ್ಯ ಎಸ್.ವಿ. ಭಟ್ಟರಿಗೆ ತಮ್ಮ ಮಗಳ ಮನೆಗೆ ಒಮ್ಮೆಯಾದರೂ ಭೇಟಿಕೊಡುವ ಅನಿವಾರ್ಯತೆ. ಮೇಲೆ ಅಲ್ಲಿಗೆ ಭೇಟಿಕೊಟ್ಟ ತನ್ನ ಹೆಂಡತಿಯನ್ನು ಮರಳಿ ತರುವ ಹೊಣೆ. ಹೀಗೆ ವಿದೇಶೀ ವ್ಯಾಮೋಹವಿಲ್ಲದೆಯೂ ಸಿಂಗಾಪುರಕ್ಕೆ ಹೋದವರು ಎರಡು ತಿಂಗಳು ಇದ್ದು ಬಂದರು. ಅವರು ಅಲ್ಲಿದ್ದ ಎರಡು ತಿಂಗಳಲ್ಲಿ ವರ್ತಮಾನದ ಸಾಮಾನ್ಯ ಶಿಕ್ಷಕ ಮನೋವೃತ್ತಿಗೆ ಅಪವಾದವಾಗಿ (ಇಲಾಖೆ ವಿಧಿಸಿದ ಪಾಠಪಟ್ಟಿಯನ್ನು ಮೀರಿದಂತೆ), ಆ ಊರು ಸಂಸ್ಕೃತಿಯ ಬಗ್ಗೆ ವ್ಯಾಪಕವಾಗಿ ತಿಳಿದುಕೊಂಡರು. ಕಲಾರಂಗದ ಔಪಚಾರಿಕ ವೇದಿಕೆಯಲ್ಲಿ ಅದನ್ನು ಹಂಚಿಕೊಳ್ಳುವ ಪ್ರಸಂಗ ಒದಗಿದಾಗ ವೈಯಕ್ತಿಕತೆಯನ್ನು ತೆಳು ಮಾಡಿ (ಮಜ್ಜಿಗೆ?) ಅನುಭವ ನವನೀತವನ್ನಷ್ಟೆ ಹಂಚಿದರು. `ಸಂಗ್ರಹಕ್ಕೆ’ ವಿವೇಚನೆಯ ಕಾವುಕೊಟ್ಟು, ಹಾಸ್ಯದ ಲೇಪವಿಟ್ಟು ನಮಗೆ ಉಣಬಡಿಸಿದ್ದಷ್ಟೂ ರುಚಿಕಟ್ಟಾಗಿತ್ತು. ಕಥನ ನಮ್ಮ ದೇಶದ ಆಡಳಿತದ ದಿಕ್ಚ್ಯುತಿಯನ್ನು ತೋರುವ ಕೈಕಂಬವೇ ಆಯ್ತು.

Continue reading