ಪುಸ್ತಕ ಮಾರಾಟಗಾರನ ತಲ್ಲಣಗಳು

ಪ್ರಿಯ ವಿವೇಕ್ (ಶಾನಭಾಗ್) ಮತ್ತು (ಕೆ.ವಿ) ಅಕ್ಷರಾ,

ದೇಶಕಾಲದ ಏಪ್ರಿಲ್ ಸಂಚಿಕೆಯ (೨೫ನೇದು) ಸಮಯಪರೀಕ್ಷೆ – ‘ಮಾರುಕಟ್ಟೆಯ ಒತ್ತಡ’, ತುಂಬಾ ಸಾಮಯಿಕ. ಅದನ್ನು ಪುಸ್ತಕೋದ್ಯಮಕ್ಕೆ ಮತ್ತೂ ಮುಖ್ಯವಾಗಿ ಕನ್ನಡ ಪುಸ್ತಕೋದ್ಯಮಕ್ಕೆ ಅನ್ವಯಿಸಿಕೊಂಡು ವಿಸ್ತರಿಸಲು ನನ್ನ ಅನುಭವ ಒತ್ತಾಯಿಸುತ್ತಿದೆ. ಆದರೆ ಹಾಗೆ ಬರೆದದ್ದನ್ನು ನಿಮಗೆ ಪ್ರತಿಕ್ರಿಯಾ ಲೇಖನವಾಗಿ ಕಳಿಸಿ ದೇಶಕಾಲದ ನಿರ್ವಹಣೆಯಲ್ಲಿ ‘ಮಾರುಕಟ್ಟೆಯ ಒತ್ತಡ’ ಬರದಂತೆ ಇಲ್ಲಿ ಪ್ರಕಟಿಸಿದ್ದೇನೆ. (ನಿಮ್ಮ ಐದನೇ ವರ್ಷದ ವಿಶೇಷ ಸಂಚಿಕೆ ಪ್ರಕಟವಾದಾಗ ಮತ್ತೆ ಪ್ರಜಾವಾಣಿ ಸಾಪ್ತಾಹಿಕಕ್ಕೆ ದೇಶಕಾಲ ಸಹಯೋಗ ಕೊಡಲು ಸುರು ಮಾಡಿದಾಗ ನಡೆದ ತಾತ್ತ್ವಿಕ ಮುಖವಾಡ ಹೊತ್ತು, ಜಾತಿ, ಪ್ರಾದೇಶಿಕ ಪ್ರಾತಿನಿಧ್ಯವೇ ಮುಂತಾದ ಸವಕಲು ಸಲಕರಣೆಗಳ ಜೊತೆ ಹೋರಾಡಿದ ಸ್ವಾರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಬರಬಾರದಲ್ಲಾ ಎಂಬ ಎಚ್ಚರ ಎಂದರೂ ಸರಿ.)

ಪುಸ್ತಕೋದ್ಯಮದಲ್ಲಿ ಪ್ರಕಾಶಕ (ಕನ್ನಡದಲ್ಲಿ ಒಮ್ಮೆಗೆ ಹೆಚ್ಚಾಗಿ ಒಬ್ಬನೇ), ಕೆಲವೊಮ್ಮೆ ವಿತರಕರು ತುಂಬಾ ಸಣ್ಣ ಸಂಖ್ಯೆಯಲ್ಲಿರುತ್ತಾರೆ ಮತ್ತು ಹೆಚ್ಚಾಗಿ ದೊಡ್ಡ ನಗರಗಳಲ್ಲಿ ಮಾತ್ರ ಸ್ಥಾಪಿತರಿರುತ್ತಾರೆ. ಆದರೆ ಗ್ರಾಹಕರ (ವ್ಯಕ್ತಿಗಳು ಮತ್ತು ಸಂಸ್ಥೆಗಳು) ಒತ್ತಡವನ್ನು ನೋಡಿಕೊಂಡು ಬಿಡಿ ಮಾರಾಟಗಾರರು ಎಲ್ಲೂ ಸಿಗುತ್ತಾರೆ, ಇನ್ನೂ ಸಾಕಷ್ಟು ಉಳಿದಿದ್ದಾರೆ! ಇಲ್ಲಿ ಡಿವಿಕೆ ಮೂರ್ತಿಯವರ ಕೊನೆಗಾಲದ ಮಾತುಗಳನ್ನು ಕೇಳಿ. “ರಾಜ್ಯ ಮತ್ತು ಹೊರನಾಡುಗಳೂ ಸೇರಿ ಮೊದಲೆಲ್ಲ ಇನ್ನೂರಕ್ಕೂ ಮಿಕ್ಕು ಬಿಡಿ ಪುಸ್ತಕ ವ್ಯಾಪಾರಿಗಳಿಗೆ ನಾನು ಪುಸ್ತಕ ಕಳಿಸಿಕೊಡುತ್ತಿದ್ದೆ. ಯಾವ್ಯಾವುದೋ ಗ್ರಾಮಾಂತರ ಪ್ರದೇಶಗಳಿಂದಲೂ ಅಲ್ಲಿನ ಶಾಲೆಯ ಗ್ರಂಥಾಲಯಕ್ಕೋ ಮಕ್ಕಳ ಅನಿವಾರ್ಯತೆಗೋ ಊರವರ ಕುತೂಹಲಕ್ಕೋ ಏನಿಲ್ಲವೆಂದರೂ ವರ್ಷಕ್ಕೆ ಒಂದೆರಡು ಬಾರಿಯಾದರೂ ಸ್ವತಃ ಮೈಸೂರಿಗೆ ಬಂದೋ ಪತ್ರ ಮುಖೇನ ಸಂಪರ್ಕಿಸಿಯೋ ಅಷ್ಟಿಷ್ಟು ಪುಸ್ತಕ ಒಯ್ಯುವ ಸಣ್ಣ ವ್ಯಾಪಾರಿಗಳಿರುತ್ತಿದ್ದರು. . .”

ಹೆಚ್ಚಿನ ಎಲ್ಲ ಸರಕಾರಗಳೂ (ಪಕ್ಷಾತೀತವಾಗಿ) ಜನಾಡಳಿತದ ವಿಕೇಂದ್ರೀಕರಣದ ಸುಳ್ಳನ್ನು ಬಿತ್ತರಿಸುತ್ತವೆ. ಅನಂತರ ಮೊದಲು ವೈಯಕ್ತಿಕ ಸ್ವಾರ್ಥ ಮತ್ತೆ ಸ್ವ-ಪಕ್ಷದ ಲಾಭಕ್ಕಾಗಿಯೇ ಸಾಮಾಜಿಕವಾಗಿ ಮೌಲಿಕವಾದ ಪ್ರತಿಯೊಂದು ಚಟುವಟಿಕೆಯಲ್ಲೂ ಹಸ್ತಕ್ಷೇಪ ನಡೆಸುತ್ತಾರೆ. (ಇಂದು ಮದುವೆಯಲ್ಲಿ ಮದುಮಗ, ಸ್ಮಶಾನದಲ್ಲಿ ಹೆಣವಾಗಲು ಇಚ್ಛಿಸದವ ರಾಜಕಾರಣಿಯಾಗುವುದು ಅಸಾಧ್ಯ) ಅದು ಪ್ರಾಮಾಣಿಕ ವೃತ್ತಿಪರರ ಮೇಲೆ ಮಾಡುತ್ತಿರುವ ಪರಿಣಾಮವನ್ನು ನಾನಿಲ್ಲಿ ಕೇವಲ ಪುಸ್ತಕೋದ್ಯಮಕ್ಕೆ ಅದರಲ್ಲೂ ತೀರಾ ಈಚಿನ ಕೆಲವೇ ಘಟನೆಗಳ ಮುನ್ನೆಲೆಯಲ್ಲಿ ಸಣ್ಣದಾಗಿ ವಿಶ್ಲೇಷಿಸುತ್ತೇನೆ.

ಕನ್ನಡ ಪುಸ್ತಕ ಪ್ರಾಧಿಕಾರ ಪ್ರಣೀತ ‘ಪುಸ್ತಕ ನೀತಿ’ ಇಂದು ಕನ್ನಡ ಪುಸ್ತಕೋದ್ಯಮದಲ್ಲಿ ಬಹಳ ಮುಖ್ಯ ವಿಷಯವೆಂಬಂತೆ ಬಿಂಬಿಸಲಾಗುತ್ತಿದೆ. ಇದು ನೆಲದ ಶಾಸನವೇ ಆದ unfair trade practiceಗೆ ಯಾವ ರೀತಿಯಲ್ಲೂ ಸಂಬಂಧಿಸಿದ್ದಲ್ಲ. ಇದರ ಅಂಕುರಾರ್ಪಣೆಯಾದದ್ದು ಪ್ರೊ| ಎಸ್.ಜಿ. ಸಿದ್ಧರಾಮಯ್ಯನವರ ಕಪುಪ್ರಾ ಅಧ್ಯಕ್ಷಾವಧಿಯಲ್ಲಿ. ರಾಜ್ಯ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಒಂದು ಇಲಾಖೆ. ಅದಕ್ಕೆ ಅಧೀನ ಸಂಸ್ಥೆ ಕಪುಪ್ರಾ. ಅದರ ಒಂದು ಕಾಲಘಟ್ಟದ, ಓರ್ವ ನಾಮಾಂಕಿತ ಅಧ್ಯಕ್ಷ ತೇಲಿಬಿಟ್ಟ ಗುಳ್ಳೆ ಪುಸ್ತಕ ನೀತಿ. ಇದರ ಚರಮ ಲಕ್ಷ್ಯ ಓದುಗನಾಗಬೇಕಿತ್ತು. ಆದರೆ ವಿವರಗಳಲ್ಲಿ ಕಣ್ಣು ಹಾಯಿಸಿದವರಿಗೆ ಅದು ಕೇವಲ ಸರಕಾರೀ ಸಗಟು ಖರೀದಿಗೊಂದು ನೀತಿ ಪಟ್ಟಿ ಮಾತ್ರ ಎನ್ನುವುದು ಸ್ಪಷ್ಟವಿತ್ತು. ಇದು ಜ್ಯಾರಿಗೆ ಬಂದರೂ ಮೇಲಿನ ಸಂಸ್ಥೆಗಳಿಗೆ, ಅಂದರೆ ಸಂಸ್ಕೃತಿ ಇಲಾಖೆಯೂ ಸೇರಿದಂತೆ ಇತರ ಇಲಾಖೆಗಳು, ಪ್ರಾಧಿಕಾರಗಳು, ಹತ್ತೆಂಟು ಅಕಾಡೆಮಿಗಳು, ವಿವಿನಿಲಯಗಳಿಗೆ ಲಗಾವಾಗುವುದಿಲ್ಲ ಮತ್ತು ಕೊಳ್ಳುವ ಗಿರಾಕಿಗಳನ್ನು ನಿರ್ಬಂಧಿಸುವಲ್ಲೂ ಸೋಲುತ್ತದೆ. ಇದನ್ನು ಬಿಡಿಸಿ ಹೇಳುವುದಾದರೆ ಯಾವುದೇ ಪ್ರಕಾಶನ ಸಂಸ್ಥೆ ತನ್ನ ಪ್ರಕಟಣೆಗಳನ್ನು ಕಪುಪ್ರಾದ ಯಾವುದೇ ಯೋಜನೆಗಳನ್ನು ಬಯಸುವುದಿಲ್ಲವೆಂದರೆ ಈ ಪುಸ್ತಕ ನೀತಿ ಏನೂ ಮಾಡಲಾರದು. ಹಾಗೇ ಯಾವುದೇ ವ್ಯಕ್ತಿ, ಗ್ರಂಥಾಲಯಕ್ಕೆ ತನ್ನ ಪುಸ್ತಕ ಅಗತ್ಯಗಳನ್ನು ಪೂರೈಸಿಕೊಳ್ಳುವಲ್ಲಿ ಈ ‘ಪುಸ್ತಕ ನೀತಿ’ ವಿಷಯಕ ಗುಣಪಕ್ಷಪಾತಿಯಾಗಿ ದೃಢತೆ ಕೊಡುವುದೂ ಇಲ್ಲ.

ಪುಸ್ತಕ ನೀತಿ, ಪ್ರೊ| ಎಸ್.ಜಿ. ಸಿದ್ಧರಾಮಯ್ಯನವರ ಕನಸಿನ ಕೂಸು. ಪ್ರಸ್ತುತ ಅಧ್ಯಕ್ಷ ಪ್ರೊ| ಸಿದ್ಧಲಿಂಗಯ್ಯನವರ ಸೂಲಗಿತ್ತಿತನದಲ್ಲೂ ಅದು ಹೆರಿಗೆ ನೋವು ಕೊಡುತ್ತಲೇ ಇದೆ! ಇದು ರೂಪುಗೊಳ್ಳುವ ಹಂತದಲ್ಲೇ ನಾನು ಮೇಲೆ ಉಲ್ಲೇಖಿಸಿದ ಸರಳ ಪ್ರಶ್ನೆಗಳನ್ನು ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎಂದೇ ಕೇಳಿದ್ದೆ. ಅದನ್ನು ದಿಟ್ಟವಾಗಿ ಎದುರಿಸಲಾಗದೇ ‘ಉಪಸಮಿತಿ’ (ಅಯಾಚಿತವಾಗಿ ನನ್ನನ್ನು ಸದಸ್ಯ ಮಾಡಿದ್ದರು!), ‘ಕಮ್ಮಟ’ (ಎರಡೆರಡು ಬಾರಿ ನನ್ನ ಅನುಕೂಲ ಕೇಳದೇ ಅದೂ ನನ್ನ ಕೆಲಸದ ದಿನಗಳಲ್ಲೇ ಒಂದೋ ಎರಡೋ ದಿನದ ಅವಕಾಶ ಮಾತ್ರ ಇಟ್ಟು ಕರೆ ಕಳಿಸಿದ್ದರು), ಕೊನೆಗೆ ‘ಬಹುಮತ’ (ಅಳಿದೂರಿಗೆ ಉಳಿದವನೇ ಗೌಡ) ಎಂಬ ಪ್ರಜಾತಾಂತ್ರಿಕ ಶಬ್ದ ಜಾಲದಲ್ಲಿ ಹುಗಿಯಲಾಯ್ತು. ಒಟ್ಟಾರೆ ಕನ್ನಡ ಪುಸ್ತಕೋದ್ಯಮವನ್ನು ಸದೃಢಗೊಳಿಸಬೇಕಾಗಿದ್ದ ಕಪುಪ್ರಾ ಕೇವಲ ಸರಕಾರೀ ಬಟವಾಡೆಗೆ ಇನ್ನೊಂದು ಮುಖವಾಗಿ, ಸಮರ್ಥ ನಿರ್ವಹಣೆಗಾಗಿ ವಿಭಾಗೀಕರಣ ಎಂಬ ತತ್ತ್ವದ ಅಣಕವಾಗಿ, ಕರದಾತನ ಋಣಪಾತಕವಾಗಿ ಮುಂದುವರಿದಿದೆ. ಪುಸ್ತಕೋದ್ಯಮದ ಎಲ್ಲವನ್ನೂ ಎಲ್ಲರನ್ನೂ ಮುಟ್ಟುವ ಮತ್ತು ಜನಪರವಾಗಿ ಬದಲಿಸುವಲ್ಲಿ ಸರ್ವಶಕ್ತವಾದ ‘ನಿಜ ಪುಸ್ತಕ ನೀತಿ’ ರೂಪುಗೊಳ್ಳಲು ಇನ್ನೊಂದೇ ‘ಅಣ್ಣಾಹಜಾರೆ’ ಹುಟ್ಟಬೇಕು.

ಕೃತಿಯ ಯೋಗ್ಯತೆಯನ್ನು ಅಚ್ಚಿನಮನೆಯ ವೆಚ್ಚದ ನೆಲೆಯಲ್ಲಿ, ಬಿಡುಗಡೆಯ ಅದ್ದೂರಿಯಲ್ಲಿ, ಪ್ರಚಾರ ತಂತ್ರದ ಪರಿಣತಿಯಲ್ಲಿ, ಬಹುಮುಖ್ಯವಾಗಿ ಸಾಹಿತ್ಯೇತರ ಪ್ರಭಾವಗಳಲ್ಲಿ ಕಾಣಿಸಲು ಸೋತ ನಾನು (ನನ್ನಂಥವರು) ಅತ್ರಿ ಪ್ರಕಾಶನವನ್ನು ಮುಚ್ಚಿದ್ದು ನಿಮಗೆಲ್ಲಾ ತಿಳಿದೇ ಇದೆ. ಅದು ಅವಸರದ ಹೆಜ್ಜೆಯಾಯ್ತು, ಇತರ ಪುಸ್ತಕ ವ್ಯಾಪಾರಿಗಳ ಮೂಲಕ ನೇರ ಓದುಗರಿಗೇ ಮಾರಬಹುದಿತ್ತಲ್ಲಾ ಎಂದು ಹೇಳಿದವರಿದ್ದಾರೆ. ಇಂದು ರಾಜ್ಯಾದ್ಯಂತ ಪುಸ್ತಕ ವ್ಯಾಪಾರಿಗಳ ವ್ಯವಸ್ಥೆ ಹೇಗಿದೆ ಎನ್ನುವುದಕ್ಕೆ ಮೇಲೆ ಉಲ್ಲೇಖಿಸಿದ ಡಿವಿಕೆ ಮೂರ್ತಿಯವರ ಕೊನೆಗಾಲದ ಮಾತಿನ ಉತ್ತರಾರ್ಧ ನೋಡಿ. “ಈಗ ರಾಜ್ಯಾದ್ಯಂತ ಬಿಡಿ, ನಾಲ್ಕೈದು ಜಿಲ್ಲಾ ಕೇಂದ್ರಗಳಿಂದಲೂ (ಮುಖ್ಯವಾಗಿ ಹೆಸರಿಸುವುದಾದರೆ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು) – a handful ರಿಟೇಲರ್ಸ್ ಮಾತ್ರ ಉಳಿದಿದ್ದಾರೆ.”

ಇಂದು ಶಾಲೆಗಳ ಮತ್ತು ಭಾಷಾ ಪಠ್ಯಗಳ ವಿಚಾರದಲ್ಲಿ ಕಾಲೇಜುಗಳ ಪಠ್ಯಗಳ ಆಯ್ಕೆ, ಪ್ರಕಟಣೆ, ಕೊನೆಗೆ ವಿತರಣೆಯೂ (ಎಷ್ಟು ಸಮರ್ಪಕ ಎಂದು ಕೇಳಬೇಡಿ) ಇಲಾಖೆಗಳ ಮಟ್ಟದಲ್ಲೇ ನಡೆದಿದೆ. ಅವುಗಳಲ್ಲಿ ಮೊದಲಿನಿಂದಲೂ ಅಷ್ಟಾಗಿ ತೊಡಗಿಕೊಳ್ಳದ ವ್ಯಾಪಾರಿ ನಾನು. ಹಾಗಾಗಿ ಕೇವಲ ಪೂರಕ ಸಾಹಿತ್ಯ ಮತ್ತು ಗ್ರಂಥಾಲಯ ಪೂರಣವನ್ನಷ್ಟೇ ಸಣ್ಣದಾಗಿ ಚರ್ಚಿಸುತ್ತೇನೆ. ಪಠ್ಯ ನಿರ್ದೇಶನಕ್ಕೆ ವಿಷಯ ತಜ್ಞರ ವರದಿಗಳು ಅನಿವಾರ್ಯ. ಆದರಿಂದು ಪೂರಕ ಓದು ಅಥವಾ ಸ್ಪಷ್ಟವಾಗಿ ಹೇಳುವುದಾದರೆ ಗ್ರಂಥಾಲಯ ಖರೀದಿಯ ಸ್ವಾತಂತ್ರ್ಯವನ್ನು ಶೈಕ್ಷಣಿಕ ಸಂಸ್ಥೆಗಳಿಂದ ವಂಚಿಸುವಂತೆ ಸರಕಾರೀ ಆಡಳಿತ ವ್ಯೂಹ ರಚಿಸಿದೆ. ಈ ವರ್ಷ ಎಲ್ಲಾ ಮಟ್ಟದ (ಪ್ರಾಥಮಿಕ, ಪ್ರೌಢ) ಬಹುತೇಕ ಶಾಲೆಗಳಿಗೆ ಇಲಾಖೆ ಘನ ಅನುದಾನವನ್ನೇನೋ ಕಡೇ ಗಳಿಗೆಯಲ್ಲಿ ಬಿಡುಗಡೆ ಮಾಡಿದೆ. ಆದರೆ ಜೊತೆಗೇ ಬಂದ ಆದೇಶ ಹೇಳುತ್ತದೆ ‘ನಿಮ್ಮ ಊರಿನ ಸಮೀಪದಲ್ಲಿ ಇಲಾಖೆಯೇ ನಡೆಸಿಕೊಡುವ ಪುಸ್ತಕ ಮೇಳದಲ್ಲೇ ಎಲ್ಲರೂ ಖರೀದಿ ನಡೆಸತಕ್ಕದ್ದು.’ ಪುಸ್ತಕ ಮೇಳಗಳಾದರೋ ಸ್ಥಳೀಯರನ್ನು ಅವಗಣಿಸಿ ಬೆಂಗಳೂರಿನಿಂದಲೇ ಆಯೋಜಿಸಲ್ಪಟ್ಟಿತ್ತು. ಅದರಲ್ಲಿ ಮುಖ್ಯ ಭಾಗಿಗಳು – ಕೆಲವು ಪುಸ್ತಕ ಪ್ರಕಾಶಕರು ಮತ್ತು ಅವರ ಪ್ರಕಟಣೆಗಳು. ಅಂದರೆ ಅಷ್ಟೂ ಪ್ರಕಾಶಕರು ಮತ್ತು ಇನ್ನೆಷ್ಟೋ ಹೆಚ್ಚಿನವರ ಪುಸ್ತಕ ವೈವಿಧ್ಯವನ್ನು ಪ್ರಾದೇಶಿಕವಾಗಿ ವರ್ಷ ಪೂರ್ತಿ ನೆರಹಿಕೊಂಡು, ಇಂಥಾ ಗಳಿಗೆಯಲ್ಲಿ ನ್ಯಾಯವಾಗಿ ಪೋಷಿಸಲ್ಪಡಬೇಕಾದ ಬಿಡಿ ವ್ಯಾಪಾರಿಗಳನ್ನು ಈ ಕ್ರಮ ವಂಚಿಸಿದೆ. ಮತ್ತೆ ಮೌಲಿಕವಾಗಿ ತಮ್ಮ ಗ್ರಂಥಾಲಯಗಳನ್ನೂ ಈ ಕ್ರಮ ವಂಚಿಸಿದೆ ಎಂದು ಗುಣಪಕ್ಷಪಾತಿಗಳಾದ ಹಲವು ಶಿಕ್ಷಕರು ಗೊಣಗಿದ್ದನ್ನೂ ನಾನು ಕೇಳಿದ್ದೇನೆ.

ವಿವಿಧ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ, ಕಪುಪ್ರಾ ಪ್ರಾಯೋಜಿತವಾದ ಪುಸ್ತಕ ಮೇಳಗಳಲ್ಲಿ, ಮತ್ತೀಗ ಶಿಕ್ಷಣ ಇಲಾಖೆ ನೇರ ಶಾಲೆಗಳಿಗೇ ನಡೆಸಿದ ಪುಸ್ತಕ ಮೇಳದಲ್ಲಾದರೂ ಸಂಬಂಧಿಸಿದ ವಕ್ತಾರರು ಮತ್ತು ಪ್ರಾಯೋಜಿತ ಮಾಧ್ಯಮಗಳು ಬಿಂಬಿಸುವಷ್ಟು ‘ಅದ್ಭುತ’ ಘಟಿಸಿದೆಯೇ? ಮೊನ್ನೆ ತಾನೇ ಮಂಗಳೂರು, ಕಲ್ಲಡ್ಕ, ಪುತ್ತೂರುಗಳಲ್ಲಿ ಮೇಳ ಭಾಗಿಯಾಗಿ ಬಂದವರು ‘ಹಿರಿಯ’ ಪ್ರಕಾಶನ ಸಂಸ್ಥೆಗಳು ನಡೆಸುವ ಅನಾಚಾರದ ಬಗ್ಗೆ ಬಹಿರಂಗವಾಗಿ ದಾಖಲಿಸಲಾಗದ ಮಟ್ಟದಲ್ಲಿ ಹೇಳಿಕೊಂಡರು! ಎಲ್ಲ ಖರೀದಿಗಳ ಮೇಲೂ ಏಕಪ್ರಕಾರವಾದ ೧೫% ಸಾಂಸ್ಥಿಕ ವಟ್ಟಾ (ರಿಯಾಯ್ತಿ) ಮಾತ್ರ ಕೊಡುವುದೆಂದೂ (ಬಂದು ಹೋಗುವ, ಕಟ್ಟು ಸಾಗಿಸುವ) ಅನ್ಯ ವೆಚ್ಚಗಳನ್ನು ಅವರವರೇ ಭರಿಸಿಕೊಳ್ಳಲು ಬಿಡುವುದೆಂದೂ ನಿರ್ಧಾರವಾಗಿತ್ತು. ಆದರೆ ಸಾಂಸ್ಥಿಕ ದಾಖಲೆಗಳಲ್ಲಿ ಹೆಚ್ಚುವರಿ ರಿಯಾಯ್ತಿಯೆಂದೇ ಕಾಣಿಸಿ, ಖಾಸಗಿಯಾಗಿ ಬಟವಾಡೆಯಾದ ಇನಾಮು ಮತ್ತು ಸವಲತ್ತುಗಳು ಸಹಜವಾಗಿ ದೊಡ್ಡ ಬಂಡವಾಳಿಗರನ್ನೇ ದೊಡ್ಡ ಫಲಾನುಭವಿಯಾಗಳನ್ನಾಗಿಯೂ ತೋರಿಸಿತು.

ಮೊನ್ನೆಯಷ್ಟೇ ಬಳ್ಳಾರಿ ಮೇಳದಲ್ಲಿ ಭಾಗವಹಿಸಿ ಬಂದ ಗೆಳೆಯರೊಬ್ಬರ ಪತ್ರದ ಸಾರಾಂಶ ನೋಡಿ: “ಮೊನ್ನೆ ಬಳ್ಳಾರಿಯ ಪುಸ್ತಕ ಪ್ರದರ್ಶನಕ್ಕೆ ಹೊಗಿದ್ದೆ. ೨೦% ಡಿಸ್ಕೌಂಟ್ ಕಡ್ಡಾಯ ಮಾಡಿದ್ದಾರೆ. ಪ್ರಕಾಶಕರೇ ಅಲ್ಲದವರು ನೂರಾರು ಮಳಿಗೆ ಹಾಕಿ ೫೦-೬೦% ಡಿಸ್ಕೌಂಟ್ ಕೊಟ್ಟು ಪುಸ್ತಕ ಮಾರುತ್ತಿದ್ದರು. ನಮ್ಮಲ್ಲಿಗೂ ಅದನ್ನು ಬಯಸಿ ಬಂದವರನ್ನು ಬೈದು ಕಳಿಸಿದೆ. ನಾವು ಇದಕ್ಕೆಲ್ಲ ಸಾಕ್ಷಿಯಾಗಬೇಕಲ್ಲ ಎನಿಸುತ್ತದೆ. ಮುಂದಿನ ಬದುಕಿನ ಬಗೆಗೆ ಆಸಕ್ತಿ ಮತ್ತು ನಂಬಿಕೆಯೆ ಹೊರಟು ಹೋಗುತ್ತದೆ. ಮೈಸೂರಿನ ಕೆಲವು ಪ್ರಕಾಶಕರು ಟೀಚರ್ಸ್‌ಗಳನ್ನು ಕೂಡಾ ಕರಪ್ಟ್ ಮಾಡುತ್ತಿದ್ದಾರೆ. ಅವರು ಮಕ್ಕಳಲ್ಲಿ ಪುಸ್ತಕ ಪ್ರೀತಿ ಹೇಗೆ ಹುಟ್ಟಿಸಲು ಸಾಧ್ಯ? ಮುಂದಿನ ಜನಾಂಗ ಪುಸ್ತಕದ ಬಗೆಗೆ ಆಸಕ್ತಿ ಹುಟ್ಟುವುದು ಬೆಳೆಯುವುದು ಹೇಗೆ? ನಾವೆಲ್ಲಾ ಇಷ್ಟು ಶ್ರದ್ಧೆಯಿಂದ ಕಟ್ಟಿದ ಈ ಉದ್ಯಮ ಮುಂದಿನ ದಿನಗಳಲ್ಲಿ ಹೇಗೆ ಸಾಗುತ್ತದೆ? ತಲೆಯ ತುಂಬೆಲ್ಲಾ ಇದೇ ಯೋಚನೆ.” ಪ್ರಕಾಶಕನಿಂದ ಬಿಡಿ ಖರೀದಿದಾರನಿಗೆ ಪುಸ್ತಕಗಳನ್ನು ನೇರ ಮುಟ್ಟಿಸುವ ಇಂಥಾ ಯೋಜನೆಗಳೇ ಇಂದು ಪುಸ್ತಕೋದ್ಯಮವನ್ನು ಭ್ರಾಮಕ ಸ್ವರ್ಗಕ್ಕೆ ಎಳೆದೊಯ್ಯುತ್ತಿದೆ. (ಇಂಥಲ್ಲಿ ನನ್ನ ಪ್ರಕಟಣೆಗಳನ್ನು ರಾಜ್ಯಾದ್ಯಂತ ಓದುಗರಿಗೆ ಕಾಣಿಸುವ ಪ್ರಯತ್ನವೂ ಸೋತದ್ದು ಸಹಜವೇ ಇದೆ)

ರಾಜ್ಯದಲ್ಲಿ ಗ್ರಂಥಾಲಯ ಇಲಾಖೆಗೆ (ಇದು ಸರಕಾರದಡಿಯಲ್ಲಿ ಸ್ವತಂತ್ರ) ಜಿಲ್ಲಾ, ನಗರ, ತಾಲೂಕು ಮತ್ತೂ ಸಣ್ಣ ಮಟ್ಟದಲ್ಲಿ, ಸಂಚಾರೀ  ರೂಪದಲ್ಲೂ ಶಾಖೋಪಶಾಖೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಇವೆ. ಇವೆಲ್ಲ ಬೆಂಗಳೂರು ಕೇಂದ್ರೀಕೃತ ಸಗಟು ಖರೀದಿ ಜಾಲದಲ್ಲಿ ಒದಗಿದವನ್ನೇ ‘ಅನುಭವಿಸಿಕೊಂಡು’ ಬಹುಕಾಲ ಪ್ರಾದೇಶಿಕ ಖರೀದಿಯಲ್ಲಿ ನಿರ್ವೀರ್ಯವಾಗಿದ್ದವು. ಈಚೆಗೆ ಅದು ಸ್ವಲ್ಪ ಮಟ್ಟಿಗೆ ಮುಕ್ತವಾದರೂ ಎಲ್ಲಾ ಸರಕಾರೀ ಇಲಾಖೆಗಳಂತೆ ಪಾರದರ್ಶಕವಾಗಿಲ್ಲ, ಜನ ಸ್ನೇಹಿಯಂತೂ ಖಂಡಿತಾ ಅಲ್ಲ. ಸಹಜವಾಗಿ ಪ್ರಾದೇಶಿಕ ಅಗತ್ಯಗಳನ್ನು ಒದಗಿಸುವ ಒತ್ತಡ ಮತ್ತದಕ್ಕಾಗಿ ಊರಿನ ಪುಸ್ತಕ ವ್ಯಾಪಾರಿಗಳೊಡನೆ ಚೊಕ್ಕ ಸಂಬಂಧ ಉಳಿಸಿಕೊಳ್ಳುವ ಪ್ರಯತ್ನ ಎಂದೂ ಆದದ್ದಿಲ್ಲ.

ಹಿಂದೆಲ್ಲಾ ಸ್ವತಂತ್ರ ವೃತ್ತಿಯಾಗಿಯೇ ಯಶಸ್ವಿಯಾಗಿದ್ದ ಖಾಸಗಿ ಸರ್ಕುಲೇಟಿಂಗ್ ಲೈಬ್ರರಿ ಜಾಲ ಇಂದು ಬಹುತೇಕ ಮುಚ್ಚಿಹೋಗಿವೆ ಅಥವಾ ತುಂಬ ಶೋಚನೀಯ ಸ್ಥಿತಿಯಲ್ಲಿವೆ. ಅಂಚೆ, ಬ್ಯಾಂಕ್, ಮೊದಲಾದ ಸರಕಾರೀ ಮತ್ತು ಖಾಸಗಿ ದೊಡ್ಡ ಉದ್ಯಮಗಳು ತಮ್ಮ ಸದಸ್ಯರುಗಳಿಗಾಗಿಯೇ ಮನರಂಜನಾ ಸಂಘಗಳನ್ನು ಕಟ್ಟುವುದು ಇದ್ದದ್ದೇ. ಅಲ್ಲಿ ಲಘು ಓದಿಗೊಂದಷ್ಟು ಕಾದಂಬರಿಗಳು, ವ್ರತಕ್ಕೊಂದು ಅನುಷ್ಠಾನ ದೀಪಿಕೆ, ಪ್ರವಾಸಕ್ಕೊಂದು (ಕಥನ ಸಾಹಿತ್ಯ ಅಥವಾ ಕನಿಷ್ಠ) ಮಾರ್ಗದರ್ಶಿ, ನಾಲಿಗೆ ಚಪಲಕ್ಕೊಂದು ಸೂಪಶಾಸ್ತ್ರ, ಹಾಡಿಕೊಳ್ಳಲು ಭಜನಾಸಂಗ್ರಹ, ನೋಡಿಕೊಳ್ಳಲು ನಾಟಕ ಪಠ್ಯ, ಆಡಿಕೊಳ್ಳಲು ಪ್ರಸಂಗ ಸಾಹಿತ್ಯ, ಅನುಸರಿಸಲು ಆದರ್ಶಗಳ ಕೋಶ, ಹಗುರಾಗಲು ನಗೆಹನಿಗಳ ಸಂಗ್ರಹ, ಆರೋಗ್ಯಕ್ಕೆ ಕ್ರೀಡೆ ಯೋಗ, ಅನಾರೋಗ್ಯಕ್ಕೆ ಮನೆಯಲ್ಲೇ ವೈದ್ಯ ಇತ್ಯಾದಿ ಪುಸ್ತಕಗಳ ಕಪಾಟುಗಳನ್ನು ರುಚಿಕಟ್ಟಾಗಿ ನಿಲ್ಲಿಸಿಕೊಳ್ಳುತ್ತಿದ್ದರು. ಅಂಗಡಿ ಕಟ್ಟುವಲ್ಲಿ ವ್ಯಾಪಾರಿಗೆಷ್ಟು ಉತ್ಸಾಹವೋ ಈ ಜನಕ್ಕೆ ಕೊಳ್ಳುವಲ್ಲೂ ಅಷ್ಟು ಉಲ್ಲಾಸವಿರುತ್ತಿತ್ತು. ಇಂದಿನ ಜೀವನ ಶೈಲಿಯಲ್ಲಿ ಅವೆಲ್ಲ ಎಲ್ಲಿ ಸತ್ತು ಹೋದವೋ ನನಗಂತೂ ಕುರುಹು ಸಿಕ್ಕಿಲ್ಲ.

ಪುಸ್ತಕಗಳು ತಮ್ಮ ವೃತ್ತಿಜೀವನದ ಅವಿಭಾಜ್ಯ ಅಂಗ ಎನ್ನುವ ಶಿಕ್ಷಕವರ್ಗ ಇಂದು ಅಲ್ಪಸಂಖ್ಯಾತ. ಅಲ್ಲೂ ಸ್ವಂತ ಹಣದಿಂದಲ್ಲದಿದ್ದರೂ ತಮ್ಮ ಸಂಸ್ಥೆಯ ಗ್ರಂಥಾಲಯ ಖರೀದಿಗಾಗುವಾಗ ದೊಡ್ಡ ಮೊತ್ತ ಪಡೆಯುವಲ್ಲಿ ವಿಭಾಗ ವಿಭಾಗಗಳೊಳಗೆ ಸ್ಪರ್ಧೆ ಇರುತ್ತಿತ್ತು. ಇಂದು ಗ್ರಂಥಾಲಯ ಅನುದಾನ ಬರಿದೇ ವಾಪಾಸಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಕತ್ತಿಗೆ ಕಟ್ಟಿ ಎಲ್ಲರೂ ‘ಅನ್ಯ ಕಾರ್ಯ’ ನಿರತರಾಗುತ್ತಾರೆಂದು ಹಲವು ಗ್ರಂಥಪಾಲರು ದೂರಿಕೊಳ್ಳುತ್ತಿದ್ದಾರೆ. ಹೀಗೇ ಸಾರ್ವಜನಿಕರಲ್ಲೂ ವೈವಿಧ್ಯಗಳನ್ನು ಗುರುತಿಸುವ, ಆಯ್ದುಕೊಳ್ಳುವ ಮತ್ತು ಖರೀದಿಸುವ ಜನ ದಿನೇ ದಿನೇ ಅಲ್ಪ ಸಂಖ್ಯಾತರಾಗುತ್ತಿದ್ದಾರೆ. ಆದರೆ ಅವರಿಗೂ ಈಗ ಗೋರಿಕಲ್ಲೆಳೆಯುವ ವ್ಯವಸ್ಥೆ ಕೆಲವು ಖ್ಯಾತನಾಮ ಪ್ರಕಾಶಕರಿಂದಲೂ ಮಾಲ್ ಸಂಸ್ಕೃತಿಯಿಂದಲೂ ಬಲಗೊಳ್ಳುತ್ತಿವೆ. ಊರಿನೆಲ್ಲಾ ವ್ಯಾಪಾರವನ್ನು ತಮ್ಮ ಉಡಿಗೇ ಕವುಚಿಕೊಳ್ಳುವ ಇವರ ಧೋರಣೆಯ ಒಳಹೊರಗನ್ನು ನನ್ನ ಅನುಭವಕ್ಕೆ ದಕ್ಕಿದಷ್ಟನ್ನು ಹೇಳಿಬಿಡುತ್ತೇನೆ.

ನಗರದ ಭಾರೀ ಬಜಾರ್ ಒಂದರಲ್ಲಿ ಅಷ್ಟೇ ಭಾರೀ ಪುಸ್ತಕ ಮಳಿಗೆ ಬರಲಿದೆ ಎಂಬ ಸುದ್ದಿ ಬಂತು. ಒಂದು ದಿನ ಅದರೊಬ್ಬ ಖರೀದಿ ಪ್ರತಿನಿಧಿ ನನ್ನ ಪ್ರಕಟಣೆಗಳನ್ನು ಕೇಳಿ ಬಂದ. ಆತನಿಗೆ ನನ್ನ ಪ್ರಕಟಣೆಗಳ ಗುಣ, ತತ್ತ್ವಕ್ಕಿಂತಲೂ ಮುಖ್ಯವಾಗಿ ಆತನ ಸಂಸ್ಥೆಯ ಮಹತ್ತನ್ನು ಬಿಂಬಿಸಬೇಕಾಗಿತ್ತು. ಅವರ ಭಾಷೆಯಲ್ಲೇ ಹೇಳಬೇಕಾದರೆ ‘ಒಮ್ಮೆಗೆ ಟೈಟಲ್ಸ್ ನೋಡಿಕೊಂಡು ಹಂಡ್ರೆಡ್ಸಿನಲ್ಲಿ ಕಾಪೀಸ್ ಲಿಫ್ಟ್ ಮಾಡ್ತೇವೆ. ಟ್ರೇಡ್ ಟರ್ಮ್ಸ್ – ಮಿನಿಮಮ್ ೪೦% ಡಿಸ್ಕೌಂಟ್, ನೈಂಟಿ ಡೇಸ್ ಟೈಮ್ ಮತ್ತು ಕೊನೆಯಲ್ಲಿ (ಪ್ರಕಾಶಕನ ಶವಪೆಟ್ಟಿಗೆಗೆ ಹೊಡೆದ ಅಂತಿಮ ಮೊಳೆ) – ಅನ್‌ಲಿಮಿಟೆಡ್ ರಿಟರ್ನ್ಸ್.’  ಆದರೆ ಗ್ರಾಹಕನ ಕೊನೆಯಲ್ಲಿ ಈ ಮಾಲ್ ಒಡ್ಡುವ ಮುಖ ದೊಡ್ಡ ಕಮಾಲ್! ಕೇಂದ್ರೀಕೃತವಾಗಿ ಹವಾನಿಯಂತ್ರಿತ ಅದೆಷ್ಟೋ ಸಾವಿರ ಚದರಡಿಗಳ ಪ್ರದರ್ಶನಾಂಗಣದಲ್ಲಿ ಯವುದುಂಟು ಯಾವುದಿಲ್ಲ ಎನ್ನುವ ವೈವಿಧ್ಯ. ಕೆಲವೊಂದು ಶೀರ್ಷಿಕೆಗಳಂತೂ ನೂರಾರು ಪ್ರತಿಗಳ ಸಂಖ್ಯೆಯಲ್ಲೂ ಮೋಹಕ ವಿನ್ಯಾಸದಲ್ಲೂ ಆಕರ್ಷಕ ಬೆಳಕಿನಲ್ಲೂ ಹರಡಿಕೊಂಡಿರುವಾಗ ಗಿರಾಕಿ ಮರುಳುಗಟ್ಟದಿನ್ನೇನು. ಧಾರಾಳವಿರುವ ಆರಾಮಾಸನಗಳಲ್ಲಿ ಕೂತು, ನಿಂತು, ಕಾಫಿ ಹೀರುತ್ತಾ ಪುಸ್ತಕಗಳನ್ನು ನೋಡುವುದು ಮಾತ್ರವಲ್ಲ ನಿರ್ವಿಘ್ನವಾಗಿ ಓದಿ ಮತ್ತೂ ಬೇಕಾದರೆ  ಕೊಳ್ಳುವ ಅನುಭವ ಯಾರನ್ನೂ ಮೋಹಪರವಶರನ್ನಾಗಿಸುವುದು ತಪ್ಪಲ್ಲ. ಅದರ ಮೇಲೆ ಕಾಲಕಾಲಕ್ಕೆ, ಕೆಲವು ವಿಭಾಗಕ್ಕೆ ವಿಶೇಷ ರಿಯಾಯ್ತಿಗಳು, ಬಹುಮಾನಗಳು. ಸಾಲದ್ದಕ್ಕೆ ಉಚಿತ ಸದಸ್ಯ ಕಾರ್ಡು ಪಡೆದರೆ ಎಷ್ಟು ಸಣ್ಣ ಖರೀದಿಗೂ ಖಾಯಂ ರಿಯಾಯ್ತಿ, ಇಲ್ಲಿ ಸವಲತ್ತುಗಳ ಬಾಲ ಹನುಮಂತನದ್ದು.

ನಾನೇನೋ ಪುಸ್ತಕ ಒದಗಿಸಲಿಲ್ಲ. ಆದರೇನು ಮಾಲ್ ತೆರೆದಾಗ ಜನಪ್ರಿಯ ಲೇಖಕರೆಲ್ಲರ ಕೃತಿಗಳ ಸಂತೆ ಅಲ್ಲಿ ನೆರೆದಿತ್ತು. ಮಾಲ್ ಖ್ಯಾತಿಗೆ ಕುಂದು ಬಾರದಂತೆ ಒಂದು ವಾರ ‘ಇನಾಗುರಲ್ ಆಫರ್ ೫೦%’ ಮುಂದೆ ತಿಂಗಳ ಕಾಲ ೨೦%. ನನ್ನ ಆಶ್ಚರ್ಯಕ್ಕೆ ಮೇರೆ ಇಲ್ಲದಂತೆ ಖ್ಯಾತ ಸಾಹಿತಿ ಭೈರಪ್ಪನವರ ಕೃತಿಗಳೂ ಅಲ್ಲಿತ್ತು. ಅವುಗಳ ಪ್ರಕಾಶಕ – ಸಾಹಿತ್ಯ ಭಂಡಾರ, ವ್ಯಾಪಾರೀ ಧೋರಣೆಯಲ್ಲಿ ಬಲುಬಿಗಿ. ಅವರು ಯಾವುದೇ ಪುಸ್ತಕ ವ್ಯಾಪಾರಿಗೆ ೨೫% ಮಿಕ್ಕು ವ್ಯಾಪಾರೀ ವಟ್ಟಾ ಕೊಟ್ಟದ್ದಿಲ್ಲ. ಸಾಲದ ಲೆಕ್ಕ ಬರೆಸುವವರಿಗೆ ಇವರು ಮಣೆ ಹಾಕಿದ್ದೂ ಇಲ್ಲ. ಅಂದರೆ ಮಾಲ್‌ನಲ್ಲಿ ಕಳ್ಳಮಾಲು? ಊಹುಂ, ಸಾಧ್ಯವೇ ಇಲ್ಲ. ಇಂದು ಕಳ್ಳ ಮುದ್ರಣದ ಅಗತ್ಯ ಬರುವಷ್ಟು ಕನ್ನಡ ಪ್ರಕಾಶನರಂಗ ಸಮೃದ್ಧವಾಗಿ ಉಳಿದಿಲ್ಲ. ಕುತೂಹಲಕ್ಕೆ ಭಂಡಾರಕ್ಕೇ ದೂರವಾಣಿಸಿದೆ. ಯಜಮಾನರಲ್ಲಿ ಒಬ್ಬರಾದ ರಾಜ ಹೇಳುವಂತೆ ಬೆಂಗಳೂರಿನದೇ ಇನ್ಯಾರೋ ಪುಸ್ತಕ ವ್ಯಾಪಾರಿಗಳೊಡನೆ ಮಾಲ್‌ನವರು ಮಾಡಿಕೊಂಡ ಒಳ-ಒಪ್ಪಂದದ ಫಲವಂತೆ. ಅನಿವಾರ್ಯ ಪುಸ್ತಕಗಳನ್ನು ಕಡಿಮೆ ದರದಲ್ಲಾದರೂ ಕೊಂಡು, ಸಣ್ಣ ನಷ್ಟದಲ್ಲಾದರೂ ಗಿರಾಕಿ ಹಿಡಿದಿಡುವ ಬುದ್ಧಿವಂತಿಕೆ. ಮುಂದೆ ಊರೂರಿನ ಪುಸ್ತಕ ಮಾರುಕಟ್ಟೆಯ ಏಕಸ್ವಾಮ್ಯ ಹಿಡಿದಾಗ ಅದೇ ಪೀಠದಲ್ಲಿ ಗಿರಾಕಿಯನ್ನೂ ಪ್ರಕಾಶಕನನ್ನೂ ಬಲಿಗೊಟ್ಟು ದಕ್ಕಿಸಿಕೊಳ್ಳುವ ಹುನ್ನಾರ. (ಕ್ಷುದ್ರ ಬಯಕೆಗಳಲ್ಲಿ ಜಯಿಸಿ, ಮಹತ್ತಿನಲ್ಲಿ ಬಿದ್ದ ಮ್ಯಾಕ್‌ಬೆತ್ ನೆನಪಿಸಿಕೊಳ್ಳಿ) ಇವನ್ನೆಲ್ಲಾ ವಿವರಿಸ ಹೋಗುವ ಬಿಡಿ ಪುಸ್ತಕ ವ್ಯಾಪಾರಿ ‘ಅತಿಲಾಭದಲ್ಲಿ’ ಪಾಲು ಕೊಡಲು ಹಿಂಜರಿವ ಜುಗ್ಗ, ಅವಾಸ್ತವವಾದಿ. ಸೂಪರ್ ಬಜಾರುಗಳಿಗೆ ಎರವಾದ ಜಿನಸಿನ ಅಂಗಡಿಗಳಂತೆ, ಸ್ಪೆಷಲಿಸ್ಟ್ ವೈದ್ಯರುಗಳು ಮತ್ತು ಹೈಟೆಕ್ ಆಸ್ಪತ್ರೆಗಳೂ ಬರುತ್ತಿದ್ದಂತೆ ಖಿಲವಾದ ಕುಟುಂಬ ವೈದ್ಯರಂತೆ, ಬ್ರಾಂಡೆಡ್ ದಿರುಸು ಆಭರಣಗಳ ಸುನಾಮಿ ಬಡಿಯುತ್ತಾ ದರ್ಜಿ ಅಕ್ಕಸಾಲಿಗಳು ಕೊಚ್ಚಿ ಹೋಗುತ್ತಿರುವ ಹಾಗೆ (ಪಟ್ಟಿಯನ್ನು ನೀವೆಲ್ಲಿಯವರೆಗೂ ಬೆಳೆಸಬಹುದು) ಬಿಡಿ ಪುಸ್ತಕ ವ್ಯಾಪಾರಿಗಳೂ ಬಾಗಿಲು ಹಾಕುವ ದಿನಗಳು ದೂರವಿಲ್ಲ. ಆದರೆ ನೆನಪಿರಲಿ, ಪ್ರವಾಹದ ಸೆಳೆತಕ್ಕೆ ಉದುರೆಲೆ ಕಡ್ಡಿಗಳಷ್ಟೇ ಕೊಚ್ಚಿಹೋಗುವುದಲ್ಲ, ಬೇರು ಬಿಟ್ಟ ಮರಗಳೂ ಸರದಿಯಲ್ಲಿರುತ್ತವೆ!

ಬೆಂಗಳೂರಿನಲ್ಲಿಂದು ಸರಾಸರಿಯಲ್ಲಿ ಕನಿಷ್ಠ ವಾರಕ್ಕೊಂದರಂತೆ ಕನ್ನಡ ಪುಸ್ತಕ ಪ್ರಕಟವಾಗುತ್ತಲೇ ಇದೆ. ಅದೂ ಅಬ್ಬರದ ಬಿಡುಗಡೆ ಸಮಾರಂಭ. ಭೋರ್ಗಾಳಿಯೇನು, ಮಿಂಚಿನ ಸೆಳಕೆಷ್ಟು, ಇನ್ನು ಗುಡುಗು ಅಬ್ಬಬ್ಬ, ಪ್ರವಾಹ ಸಾಕ್ಷಾತ್ ಗಂಗಾವತರಣ! ಆದರೇನು, ಫ಼ೇವರ್ ಫ಼ಿನಿಶ್ಡ್ ಡಾಮರು ಮಾರ್ಗಗಳಲ್ಲಿ, ಕಾಂಕ್ರೀಟೀಕರಣಗೊಂಡ ಚತುಷ್ಪಥಗಳಲ್ಲಿ, ಇಂಟರ್ಲಾಕ್ಡ್ ಅಥವಾ ಲ್ಯಾಂಡ್‌ಸ್ಕೇಪ್ಡ್ ಹಾಸುಗಳಲ್ಲಿ ಸ್ಮೂತಾಗಿ ಸರಿದು ಭೂಗತ ಚರಂಡಿಗಳಲ್ಲಿ ಲೀನ. ಬೆರಗಿನಲ್ಲೇ ಮೊಗೆದಿರೋ ನೀವು ಧನ್ಯರು. ವ್ಯವಸ್ಥೆಯಲ್ಲಿ ಸೋರಿತೋ ನೆಲದ ಭಾಗ್ಯ. ನನ್ನ ಕೈ ಸ್ವಲ್ಪ ಉದ್ದ. ಬೆಂಗಳೂರಿನ ಮಳೆಗೆ ನಾನು ಯಥಾನುಶಕ್ತಿ ಚೊಂಬು ಚರಿಗೆ ಒಡ್ಡುವುದುಂಟು. ಮಂಗಳೂರಿನ ದಾಹಕ್ಕೆ ನಾಲ್ಕು ಹನಿ ಸಿಂಪಡಿಸುತ್ತಿದ್ದುಂಟು. ಆದರೀಚೆಗೆ ನದಿ ತಿರುಗಿಸುವ ಜಾಣರು ಹೆಚ್ಚಿದ್ದಾರೆ. ಪುತ್ತೂರಿನ ಶಾರದಾ ಪುಸ್ತಕ ಮಳಿಗೆಯ ಯಜಮಾನರ ಮಾತು ಕೇಳಿ. “ಸಣ್ಣ ಊರಿನಲ್ಲಿ ಹೊಸಹೊಸತನ್ನು ಬಂದಂತೆ ಸ್ವಾಗತಿಸುವವರು ಎಷ್ಟೆಂದು ಬಲುಬೇಗನೇ ಗುರುತಿಸಬಹುದು. ಅವರಿಗೆ ನೇರ ಪುಸ್ತಕ ಒದಗಿಸುವ ಉತ್ಸಾಹ ಪ್ರಕಾಶಕರದ್ದು. ಅವರು ಮರೆತರೂ ಮನೆಮನೆಗೆ ಮುಟ್ಟಿಸುವ ತಿರುಗೂಳಿಗಳಿದ್ದಾರೆ. ನಾನೀಗಾಗಲೇ ಪುಸ್ತಕ ವ್ಯಾಪಾರದಿಂದ ಡೈವರ್ಶನ್ ಹುಡುಕಿಕೊಂಡು, ರೂಢಿಸುತ್ತಿದ್ದೇನೆ.” ನನ್ನಲ್ಲಿಯೂ ಹರಿವು ಬಡವಾಗುತ್ತಿದೆ. ವಾರವಾರದ ಪುಸ್ತಕದ ಮೇಲೆ ಪುಸ್ತಕ ಬಿದ್ದು ದೂಳು ಸೇರುತ್ತಿದೆ. ಪ್ರಕಾಶನ ಮುಚ್ಚಿದಾಗ “ಹಾಗೊಂದು ಇತ್ತೇ?” ಎಂದು ಕೇಳಿದವರಿದ್ದಾರೆ. “ಅಂಗಡಿಯೇ ಮುಚ್ಚಿತೆಂದು ತಿಳಿದೆ” ಎಂದವರೂ ಇದ್ದಾರೆ. ನಡೆಯಬಲ್ಲವನಿಗೆ ದಾರಿ ಅನಂತ.

22 responses to “ಪುಸ್ತಕ ಮಾರಾಟಗಾರನ ತಲ್ಲಣಗಳು

  1. ಬಹುಶಃ ಇಂದಿನ ಕಾಲಕ್ಕೆ ನಿನ್ನಂಥ ಆದರ್ಶವಾದಿಗಳು ಹೊಂದಾಣಿಕೆ ಆಗುವುದಿಲ್ಲ. “ನಾನೀಗಾಗಲೇ ಪುಸ್ತಕ ವ್ಯಾಪಾರದಿಂದ ಡೈವರ್ಶನ್ ಹುಡುಕಿಕೊಂಡು, ರೂಢಿಸುತ್ತಿದ್ದೇನೆ.”- ಮೆಚ್ಚುಗೆ ಆಯಿತು. ನಾನು ಈಗಾಗಲೇ ಸಾಕಷ್ಟು ‘ಡೈವರ್ಶನ್’ ರೂಢಿಸಿಕೊಂಡು ಜೀವನೋತ್ಸಾಹ ುಳಿಸಿಕೊಂಡಿದ್ದೇನೆ. ‘ಮಾಲ್’ಗಳ ‘ಕಮಾಲ್”ನಿಂದಾಗಿ ಅನೇಕ ‘ಚಿಲ್ಲರೆ ವ್ಯಾಪಾರಿ’ಗಳ ಜೀವನೋಪಾಯಕ್ಕೆ ಪೆಟ್ಟು ಬಿದ್ದಿದೆ. ‘ಆಫರ್’ ಇರುವ ಸಾಮನುಗಳನ್ನು ಬೇಕೋಬೇಡವೋ ಕೊಳ್ಳುವವರ ಸಂಖ್ಯೆ (ಮಧ್ಯಮ ವರ್ಗದಲ್ಲಿ) ಹೆಚ್ಚುತ್ತಿದೆ.

  2. ಪ್ರಿಯರೆ,
    ಮಾಲಿನ ಮಾರುಕಟ್ಟೆಯಲ್ಲಿ ಕನ್ನಡ ಪುಸ್ತಕ ಮಾರಾಟ ಕಳೆದುಹೋಗುತ್ತಿದೆ.
    ಕನ್ನಡ ಪುಸ್ತಕಗಳನ್ನು ಕೊಳ್ಧಲು ರಾಜ್ಯಾದ್ಯಂತ ಪ್ರಾಧಿಕಾರ ಏರ್ಪಡಿಸುವ ಮೇಳಗಳಿವೆಯೇ?
    ಪುಸ್ತಕ ಪ್ರಕಾಶನ ಇರುವವರೆಗೆ ವಿತರಣ ಜಾಲವೂ ಇರಬೇಕು. ಅದು ಹೊಸ ಸಂದರ್ಭಕ್ಕೆ ಅನುಗುಣವಾಗಿ ವಿದ್ಯುನ್ಮಾನ ಮಳಿಗೆಯೂ ಆಗಬಹುದು. ಬೇಕಾದ ಪುಸ್ತಕಗಳನ್ನು ಕಳುಹಿಸುವಂತೆ ತಿಳಿಸಿ ಸ್ಥಳದಲ್ಲೇ ಕಾರ್ಡ್ ಬಳಸಿ ಪಾವತಿಸಬಹುದು. ಅಥವಾ ಬ್ಯಾಂಕ್ ಖಾತೆಗೆ ಜಮಾಯಿಸಬಹುದು. ಪುಸ್ತಕ ಮಾರಾಟ ನಿಲ್ಲಿಸಿ ಬದಲಿ ಮಾರ್ಗ ಹುಡುಕುವುದು ಸದ್ಯ ಅನಿವಾರ್ಯವೆನಿಸುವುದಿಲ್ಲ.

  3. ಅಮೆರಿಕಾದಲ್ಲಿ ಕಾಣೆ ಆಗಿರುವ “ಕಾರ್ನರ್ ಶಾಪ್‍ಗಳ ಕಾನ್ಸೆಫ್ಟ್” ಇಂದು
    ನಮ್ಮ ದೇಶಕ್ಕೂ ಹರಡಲಿದೆಯೆ?

    ಇಂದಿನ “ಮಾಲ್‍ಗಳ ಕಮಾಲ್ ” ನೋಡುವಾಗ ಭಾರತ ಕೂಡಾ ದೊಡ್ಡಣ್ಣನ ದೇಶವನ್ನೇ ಅನುಕರಿಸುವ ಛಾಯೆ ಕಾಣುತ್ತಾ ಇದೆ.
    ಕಾರ್ನರ್ ಶಾಪಿನ ಆತ್ಮೀಯತೆ ಬೃಹತ್ ಮಾಲ್‍ಗಳಿಗೆ ಎಲ್ಲಿಂದ ಬಂದೀತು?
    ನಮ್ಮ ಜನರಿಗೂ ಹೆಚ್ಚಿನ ಡಿಸ್ಕೌಂಟಿನಲ್ಲಿ ಸಿಗುವ ವಸ್ತುಗಳನ್ನೇ ಮಾಲ್‍ಗಳಲ್ಲಿ ಹುಡುಕಿ ಖರೀದಿಸುವ ಕೊಳ್ಳುಬಾಕ ಅಭ್ಯಾಸ ಶುರು ಆಗುತ್ತಿದೆ.

    ಇದರಿಂದ ಬಿಡುಗಡೆ ಉಂಟೇ ವಿಠಲ?

    ಜಾಗತೀಕರಣಕ್ಕೆ ಜಯ ಎನ್ನಲೇ?

    ನಮಸ್ಕಾರಗಳು

    ಕೇಸರಿ ಪೆಜತ್ತಾಯ

  4. S Raghavendra Bhatta

    ಮೊನ್ನೆ ಇಲ್ಲಿ ಹೊಸದಾಗಿ ತೆರೆದ ” ದೇಸಿ ಅಂಗಡಿ “ಗೆ ಹೋದಾಗ ವಿಸ್ಮಯವೊಂದ ಕಂಡೆ —
    ಸಾಹಸಿ ರಂಗಕರ್ಮಿ ಪ್ರಸನ್ನರು ಮಲೆನಾಡಿನ ವಂಚಿತರ ಏಳಿಗೆಗೆಂದು ಅವರೇ ತಯಾರಿಸಿದ ಕೈಮಗ್ಗದ ಬಟ್ಟೆಗಳನ್ನು ಓರಣವಾಗಿ ಜೋಡಿಸಿದ ಬೀರುಗಳ ನಡುವೆ ಒಂದರಲ್ಲಿ ಕನ್ನಡದ ಹೊಸ ಹೊಸ ಪುಸ್ತಕಗಳಿದ್ದುದನ್ನು ನೋಡಿದಾಗ ಅನಿಸಿದ್ದು — ಹೀಗೆ ಎಲ್ಲೆಂದರಲ್ಲಿ ಕನ್ನಡದ ಪುಸ್ತಕಗಳು
    ಕಣ್ಣಿಗೆ ಬಿದ್ದರೆ ಯಾರೋ ಒಬ್ಬರಿಗಾದರೂ ಇದೇನೆಂದು ಹೊತ್ತು ಕಳೆಯಲಾದರೂ ಆದಂತೆ ಕ್ರಮೇಣ
    ಕೊಳ್ಳಲು ಮನಸಾದೀತೋ, ಹೇಗೆ?
    ರಾಘವೇಂದ್ರ ಭಟ್ಟ

  5. Shyamala Madhav

    Pusthaka marata lokada novannu hanchi kondiddeeri, Ashok. Illi Mumbyiyalli ondadaru KannadaPusthaka marata malige illada novu nammadu. Kannada Pusthaka Pradhikara hathu savira pusthakagalannu kaluhi koduvudagi heli varshaveradu kaleyithu’ Samarambhagalalli punaha punaha vagdanagaladaru, pusthakagalu mathra bande illa.
    — Shyamala.

  6. ನಿಮ್ಮ ಹಲವಾರು ‘ಪುಸ್ತಕೋದ್ಯಮ ಉಳಿಸಿ’ ಹೋರಾಟದ ಸಾರಾಂಶದಂತಿರುವ ಈ ಲೇಖನಕ್ಕೆ ‘ದೇಶಕಾಲ’ದ ‘ಮಾರುಕಟ್ಟೆಯ ಒತ್ತಡ’ ಲೇಖನವನ್ನು ಓದದೆಯೇ ಪ್ರತಿಕ್ರಿಯುಸುತಿದ್ದೇನೆ. ಡಾರ್ವಿನ್ ನ “survival of the fittest” ವಾದ ಪುಸ್ತಕೋದ್ಯಮದಲ್ಲಿಯೂ ಅನ್ವಯವಾಗುತ್ತದೆ. ಮನುಷ್ಯ ಪ್ರಾಣಿ ಜಗತ್ತಿನ ಎಲ್ಲಾ ಪ್ರಾಣಿಸಂಕುಲವನ್ನು ನಾಶ ಮಾಡ ಹೊರಟ ಹಾಗೆ ಕಪುಪ್ರಾ, ಡಿಸ್ಕೌಂಟ್ ಸಂಸ್ಕೃತಿ, ಮಾಲ್ ಗಳು ನಿಮ್ಮಂಥ ಬಿಡಿ ವ್ಯಾಪಾರಿಗಳನ್ನು ನಾಶ ಮಾಡಲು ಹೊರಟಿವೆ. ಒಂದೋ ನೀವು ಆ ಸೆಳೆತ/ಚಪಲಕ್ಕೆ ಬಲಿಯಾಗಬೇಕು. ಅಥವಾ ನೀವು ಮಾಡುವಂತೆ ಹೋರಾಡಬೇಕು. ಮೊದಲೇ ಸೊರಗಿರುವ ಕನ್ನಡ ಪುಸ್ತಕೋದ್ಯಮ, ಈ ಪಿಡುಗನ್ನು ಹೇಗೆ ಎದಿರಿಸುತ್ತದೆಯೋ?
    – ಕೃಷ್ಣ ಮೋಹನ

  7. ಪುಸ್ತಕ ದಿನದಂದು ಪ್ರಸ್ತುತವಾದ ಆದರೆ ತುಂಬ ಮನಕ್ಕೆ ಕಳವಳ ಹುಟ್ಟಿಸುವ ಬರಹ. ಬದಲಾಗುತ್ತಿರುವ ದಿನಗಳು, ಮೌಲ್ಯಗಳು. ಬೈರಪ್ಪ ಸ್ಟಾರ್ ವ್ಯಾಲ್ಯೂ ಇರುವ ಲೇಖಕ. ಅಂಥವರ ಪುಸ್ತಕವನ್ನು ಮಾಲುಗಳು ಶೇಕಡಾ ಐವತ್ತು ಅಥವಾ ಸಬ್ಸಿಡಿ ಕೊಟ್ಟು ಗಿರಾಕಿಗಳನ್ನು ಸೆಳೆವ ಮತ್ತು ತಮ್ಮ ಬಲೆಗೆ ಬೇಳುವಂತೆ ಮಾಡುವ ಉಪಾಯಗಳು – ಗ್ರಾಹಕರನ್ನು ತಮ್ಮೆಡೆಗೆ ಸೆಳೆವ ಮೊಬೈಲ್ ಕಂಪೆನಿಗಳ ತಂತ್ರಕ್ಕೆ ಸರಿ ಮಿಗಿಲಾದದ್ದೇ. ಇಂಥ ಆಟ – ಪ್ರತಿತಂತ್ರಗಳನ್ನು ಮಾಡುತ್ತ ಸ್ವಂತಿಕೆ ಮರೆತರಷ್ಟೇ ಉಳಿಗಾಲ – ಇದಕ್ಕಿಂತ ಬೇರಿನ್ನೇನು ದುರ್ಭರ ಇದ್ದೀತು?
    ಶಾಲೆ – ಕಾಲೇಜುಗಳಿಗೆ ವರ್ಷದ ಕೊನೆಯಲ್ಲಿ ಗ್ರಂಥಾಲಯಕ್ಕೆ ಅನುದಾನ ಬರುವುದುಂಟು. ಒಮ್ಮಿಂದೊಮ್ಮೆಲೇ ಹಣಕ್ಕೆ ಕ್ರಿಯಾವಿಧಿ ಆಗಬೇಕು. ಸರಿ, ಪುಸ್ತಕ ಯಾವುದಾದರೇನು? ಬೆಲೆ ಎಷ್ಟಾದರೇನು? ಪುಸ್ತಕಗಳು ಬಂದು ಬೀಳುವುದುಂಟು – ಪುಸ್ತಕಗಳ ಕುರಿತು ನಿಜ ಪ್ರೇಮಿ ಅಧ್ಯಾಪಕರಿಗಿಲ್ಲ ಅಲ್ಲಿ ದನಿ.
    ಇದರದೇ ಭಾಗವಾಗಿ ಪ್ರಯೋಗಾಲಯಗಳಿಗೆ ಬರುವ ಉಪಕರಣಗಳಿಗೂ ಇದೇ ಗತಿಯಾಗುವುದೂ ಉಂಟು. ವಿಜ್ಞಾನದ ಗಂಧಗಾಳಿ ಇಲ್ಲದ ಪ್ರಾಂಶುಪಾಲರನ್ನು ಪುಸಲಾಯಿಸಿದ ಕಂಪೆನಿಗಳು ತಮ್ಮ ಸರಕುಗಳನ್ನು ಬೇಕಾಬಿಟ್ಟಿ ಇಳಿಸಿ ಸರಕಾರದ ಅನುದಾನಕ್ಕೆ “ನ್ಯಾಯ” ಒದಗಿಸಿಬಿಡುತ್ತವೆ. ಹೆಚ್ಚಿನೆಲ್ಲ ಉಪಕರಣಗಳು ಯಾವ ರೀತಿಯಲ್ಲಿಯೂ ಬಳಸದ ಸ್ಥಿತಿಯಲ್ಲಿರುತ್ತವೆ. ಬಿಲ್ ಚುಕ್ತಾ ಆದ ಮೇಲೆ ಕೇಳುವವರು ಯಾರು?
    ರಾಧಾಕೃಷ್ಣ

  8. Now a days reading habits specially in younger generation of pizza burguer
    has come down

  9. Yes this is a common problem for any marketer these days.
    may be the goods and services change in form and kind but in the name of better appearence and thereby beter percived quality real value addition to the product and services take a back seat.

  10. Spashta, nera , nurakke nuuru sari. aadarenu? phala phala illavalaa.
    MP Joshy

  11. ಪ್ರತಿಯೊಂದನ್ನೂ ಲಾಭಕ್ಕೇ ಎಂದುಕೊಂಡಾಗ ಈ ಪರಿಸ್ಥಿತಿ ಆಗುತ್ತದೆ ಅದು ನಿಜ. ಆದರೆ ಇದಕ್ಕೆಲ್ಲ ಪರಿಹಾರ ಏನು…? ನಾವು ಸಾಮಾನ್ಯ ಬರೀ ಸಮಸ್ಯೆಗಳನ್ನ ಮಾತನಾಡುವವರಾಗಿದ್ದೇವೆಯೆ ಅಂತ ಅನ್ನಿಸೋತ್ತೆ. ಇವಗಳ ಪರಿಹಾರ ಮುಖ್ಯ ಅಲ್ಲವ….. ನಡೆಯುವವನಿಗೆ ಅನಂತ ದಾರಿ ಎಂದಾದರೆ ಆ ದಾರಿಗಳ ಪರಿಚೆಯ ನಡೆವವನಿಗಾದರೂ ಇರಬೇಕಲ್ಲವ…. ತಾವು ಹೇಳಿದ್ದರಲ್ಲಿ ಸತ್ಯವಿದೆ, ಆದರೆ ಅದಕ್ಕೆ ಸರಿಯಾಗಿ ಈಗಿನ ಪರಿಸ್ಥಿತಿಯಲ್ಲಿ ಅದಕ್ಕೆ ಪರಿಹಾರವು ಬೇಕಿದೆ…. ಅಲ್ಲವ ಸರ್…..

  12. ಅಶೋಕವರ್ಧನ ಜಿ.ಎನ್

    ಅರವಿಂದಾ
    ಜನಸೇವಕರಾಗಬೇಕಾದವರು ರಾಜಗತ್ತುಗಳನ್ನು ಅಳವಡಿಸಿಕೊಂಡಾಗ ಪ್ರಜಾಪ್ರಭುಗಳು ಗುಲಾಮರಾಗುವುದನ್ನು ಕಾಣುತ್ತಿದ್ದೇವೆ. ಆಡಳಿತ ಕೊಡಬೇಕಾದವರು ಕಸುಬುಗಳಿಗೇ ಇಳಿದಾಗ ಆತ್ಮಗೌರವವಿರುವವರು (ವೃತ್ತಿಪರರು) ಅನ್ಯ ದಾರಿ ಹುಡುಕಿಕೊಳ್ಲುವುದು ಮಾತ್ರ ಉಳಿದಿರುತ್ತದೆ. ಎಷ್ಟೋ ಕಸುಬುಗಳು ಕಣ್ಮರೆಯಾದಂತೆ ಪುಸ್ತಕ ವ್ಯಾಪಾರಿತನ ಅಳಿವಿನಂಚಿನಲ್ಲಿದೆ. ಅದಕ್ಕೆ ಮದ್ದಿಲ್ಲ. ಪರಿಹಾರವನ್ನು ಮಾಲ್ ಗಳಲ್ಲಿ, ಸರಕಾರೀ ಮಳಿಗೆಗಳಲ್ಲಿ ಕಂಡುಕೊಳ್ಳಬೇಕಷ್ಟೆ.
    ಅಶೋಕವರ್ಧನ

  13. ವಿವೇಕ ಶಾನುಭಾಗ್

    ಪ್ರಿಯ ಅಶೋಕ, ಲೇಖನ ಈಗ ತಾನೇ ಓದಿದೆ. ಚೆನ್ನಾಗಿದೆ. ನಿದ್ದೆಯಲ್ಲಿದ್ದವರನ್ನು ಎಚ್ಚರಿಸಬಹುದು ಆದರೆ ನಿದ್ದೆ ನಟಿಸುವವರನ್ನು ಎಚ್ಚರಿಸಲಾಗದು. ಅಲ್ಲವೇ?

  14. ಕೆ.ವಿ ಅಕ್ಷರ ಹೇಳಿದ್ದು

    ಅಕ್ಷರ ದೂರವಾಣಿಸಿದರು (೨೯-೪-೧೧ ಸಂಜೆ): ಅವರ ಮಾತುಗಳಲ್ಲಿ ನಾನು ಗ್ರಹಿಸಿದ ಅಂಶಗಳು: ಪುಸ್ತಕ ಮಾರಾಟಗಾರನ ತಲ್ಲಣಗಳು ನೂರಕ್ಕೆ ನೂರು ಸರಿ. ಈ ಪುಸ್ತಕೋದ್ಯಮದ ವ್ಯಾಪ್ತಿ ಮಾರಾಟಗಾರನನ್ನೂ ಮೀರಿದ್ದು. ಉದ್ಯಮ ಎನ್ನುವಲ್ಲಿಗೆ ಅದು ಸಂಸ್ಕೃತಿ ಎನ್ನುವುದನ್ನು ಕಳಚಿಕೊಂಡಿತು. ಸರಿ ತಪ್ಪುಗಳ ವಿವೇಚನೆಗಿಳಿಯದೆ, ತಾವು – ಅಕ್ಷರ ಪ್ರಕಾಶನದಲ್ಲಿ ಹೆಚ್ಚಿನ ಪುಸ್ತಕ ಸಂಸ್ಕೃತಿಗಾಗಿಯೇ ಸುಮಾರು ೨೦% ವಹಿವಾಟನ್ನು ಪರೋಕ್ಷವಾಗಿ ಇದರಲ್ಲಿ ಕಂಡುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ಆದರೆ ಅಲ್ಲೂ ಇವರು ಮಧ್ಯವರ್ತಿಗೆ ಕೊಟ್ಟ ಮೌಖಿಕ ಸೂಚನೆಯಲ್ಲಿ `ಲಂಚ ಕೊಡಬೇಡಿ, ವಶೀಲಿ ಹಾಕಬೇಡಿ. ಮಾಲಿನ ಯೋಗ್ಯತೆಯಲ್ಲಿ ಹೋದಷ್ಟು ಸಾಕು’ ಎಂದು ಸ್ಪಷ್ಟ ಮಾಡಿದ್ದಾರೆ. ಮತ್ತೆ ಪುಸ್ತಕ ಸಂಸ್ಕೃತಿ ವಿಸ್ತರಣೆಯಲ್ಲಿ ಅವರು ಹೆಗ್ಗೋಡಿನಲ್ಲಿ ನಡೆಸುವ ವಾರ್ಷಿಕ ಸಂಸ್ಕೃತಿ ಶಿಬಿರವಲ್ಲದೆ ವರ್ಷ ಒಂದರಲ್ಲಿ ಸುಮಾರು ಇಪ್ಪತ್ತಕ್ಕೂ ಮಿಕ್ಕು ಹೊರ ಊರುಗಳಲ್ಲಿ ಯುವಜನಾಂಗದ ಮಟ್ಟದಲ್ಲಿ (ಶಾಲೆ, ಕಾಲೇಜು, ಕನ್ನಡ ಸಂಘಟನೆಗಳು ಇತ್ಯಾದಿ) ಸ್ಪಷ್ಟವಾಗಿ ಪುಸ್ತಕ ಓದಿನ ಕುರಿತೇ ಕಮ್ಮಟಗಳನ್ನು ನಡೆಸುವುದರೊಡನೆ ಸಾವಿರಾರು ಪುಸ್ತಕಗಳನ್ನು ಅರ್ಥಪೂರ್ಣವಾಗಿ ಉಚಿತ ವಿತರಿಸುತ್ತಲೂ ಇದ್ದರೆ. ಇಷ್ಟಾದರೂ ಕನ್ನಡ ಓದುವ ಸಂಸ್ಕೃತಿ ಎಣ್ಣೆ ಮುಗಿದ, ಬತ್ತಿ ಕರಟುತ್ತಿರುವ ದೀಪ ಎನ್ನುವ ಚಿತ್ರ ಅಕ್ಷರರಿಗೆ ಸ್ಪಷ್ಟವಿದೆ ಎಂದೇ ನನಗನ್ನಿಸಿತು. ಅವರು ಬೆಂಗಳೂರಿನ ಪುಸ್ತಕ ಅನಾವರಣ ಸಂದರ್ಭ ಒಂದರಲ್ಲಿ ಈ ನಿಟ್ಟಿನಲ್ಲೇ ಮಾತಾಡಿದಾಗ ಅಲ್ಲಿ ನೆರೆದಿದ್ದ ವಸುಧೇಂದ್ರಾದಿ ಹೊಸ ತಲೆಮಾರಿನ ಖ್ಯಾತ ಲೇಖಕರು ಆಕ್ಷೇಪಿಸಿದ್ದನ್ನೂ ತನ್ನ ನಿಲುವು ಬದಲದ್ದನ್ನೂ ಹೇಳಿಕೊಂಡರು.
    ಅಶೊಕವರ್ಧನ

  15. ನೀವು ಬಹುದೊಡ್ಡ ಪ್ರಶ್ನೆಯನ್ನು ಎತ್ತಿಬಿಟ್ಟಿದ್ದೀರಿ. “ಡೈವರ್ಶನ್” ಬಹು ಸಣ್ಣ ಮಿತಿಯಲ್ಲಿ ಇದಕ್ಕೆ ಪರಿಹಾರವಾದೀತು. ಪೂರ್ಣ ಪರಿಹಾರ ಅಲ್ಲ. ಏಕೆಂದರೆ, “ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದೊಡೆ ನಿಲಬಹುದೆ?”
    ಎಲ್ಲಿಯವರೆಗೆ ನನ್ನ ಪ್ರೆಸ್ಸಿನಲ್ಲಿ ಮೊಳೆ ಜೋಡಿಸಿ ಟ್ರೆಡಲ್ ಯಂತ್ರದಲ್ಲಿ ಪ್ರಿಂಟ್ ಮಾಡುತ್ತಿದ್ದೆವೋ ಅಲ್ಲಿಯವರೆಗೂ ಪ್ರೆಸ್ಸನ್ನು ಸುಮಾರಿಗೆ ನಡೆಸಿಕೊಂಡು ಬರುವುದು ನನಗೆ ಸಾಧ್ಯವಾಗಿತ್ತು. ಯಾವಾಗ ಕಂಪ್ಯೂಟರ್, ಆಫ್ ಸೆಟ್ ಯಂತ್ರಗಳು ರಂಗಪ್ರವೇಶ ಮಾಡಿದವೋ ಆಗ ಚಿತ್ರ ಸಂಪೂರ್ಣ ಬದಲಾಯಿತು. “ಹದವಾದ ಹಸಿವು ಮೂರ್ಖತನ, ರಾಕ್ಷಸ ಹಸಿವು ಇದ್ದವನು ಮಾತ್ರ ವ್ಯಾಪಾರಕ್ಕೆ ಅರ್ಹ” ಎಂಬ ವಾತಾವರಣ ಉಂಟಾಯಿತು. ಪುತ್ತೂರು ರಾಜೇಶ್ ಪ್ರೆಸ್ಸಿನ ರಘುನಾಥ ರಾಯರು ನಾನು ಪ್ರೆಸ್ಸಿನಲ್ಲಿ ಸ್ವತಃ ಮೊಳೆ ಜೋಡಿಸುವುದನ್ನು ನೋಡಿ ಹೇಳುತ್ತಿದ್ದರು “ನೀವೇ ಸ್ವತಃ ಕೆಲಸ ಮಾಡಿದರೆ, ಒಬ್ಬ ಕೆಲಸಗಾರ ಎಷ್ಟು ಸಂಪಾದಿಸುತ್ತಾನೋ ಅಷ್ಟೇ ನಿಮಗೂ ಆಗುವುದು”. ಆದರೆ ಟ್ರೆಡಲ್ ಯಂತ್ರ ಸಹ ಅದರ ಹಿಂದೆ ಇದ್ದ ಪ್ರತಿ ಮಾಡುವ ವ್ಯವಸ್ಥೆಯನ್ನು ಕೊಂದೇ ಮೇಲೆ ಬಂದಿತ್ತಷ್ಟೆ? ಅತ್ತಿಮಬ್ಬೆ ರನ್ನನ ಕೃತಿಯೊಂದನ್ನು ಒಂದು ಸಾವಿರ ಪ್ರತಿ ಮಾಡಿಸಿದಳಂತೆ. ಹೇಗೆ ಮಾಡಿರಬಹುದು?
    ನಾನು ವಿಷಯಾಂತರ ಮಾಡುತ್ತಿಲ್ಲ. ನಮ್ಮ ಕೈಗಳು ಆಧುನಿಕ ತಂತ್ರಜ್ನಾನವೆಂಬ ಕಬ್ಬಿನ ಗಾಣದೊಳಗೆ ಸಿಕ್ಕಿಕೊಂಡಿವೆ. ಕೈ ಹಿಂದೆಳೆದರೆ ತುಂಡು; ಮುಂದೆ ಬಿಟ್ಟರೆ ಚಟ್ನಿ.

  16. ವಸುಧೇಂದ್ರ

    ಪುಸ್ತಕೋದ್ಯಮದಲ್ಲಿ ನಿಮ್ಮ ಅನುಭವ ದೊಡ್ಡದು. ಅಂದ ಮೇಲೆ ನಿಮ್ಮ ಮಾತುಗಳಲ್ಲಿ ಸತ್ಯವಿರಲೇ ಬೇಕು. ಅದಕ್ಕೆ ಕಮೆಂಟಿಸಲಾಗಲಿ, ಪ್ರತಿ ಹೇಳಲಾಗಲಿ ನನಗೆ ಅನುಭವ ಮತ್ತು ವಿದ್ವತ್ತಿಲ್ಲ. ಕೆ.ವಿ. ಅಕ್ಷರ ನನಗಿಂತಲೂ ಹಿರಿಯರು. ಹಲವು ವರ್ಷಗಳಿಂದ ಪುಸ್ತಕೋದ್ಯಮವನ್ನು ನಡೆಸಿದವರು. ಅವರು ನನ್ನ ಹೆಸರು ಹೇಳಿ ಆಕ್ಷೇಪಿಸಿದರೆ ಬೇಸರವಿಲ್ಲ. ಕೊನೆಗೂ ನಾನು ನಂಬುವುದು ನಾವು ಪುಸ್ತಕ ಮಾರಾಟದಲ್ಲಿ ಎಷ್ಟು ಯಶಸ್ವಿಯಾಗಿದ್ದೇವೆ ಎಂಬ ಅಂಕಿ-ಸಂಖ್ಯೆಗಳನ್ನು. ಉಳಿದದ್ದೆಲ್ಲಾ ಸುಮ್ಮನೆ ಗೊಣಗಾಟವೆಂಬಂತೆ ಕಾಣುತ್ತದೆ.
    ವಸುಧೇಂದ್ರ

  17. ಅಶೋಕವರ್ಧನ

    ಪ್ರಿಯ ವಸುಧೇಂದ್ರರೇ
    ಕಮೆಂಟಿಸುವುದಿಲ್ಲ ಎಂದರೂ `ಉಳಿದವೆಲ್ಲಾ ಗೊಣಗಾಟ’ ಎಂದಿದ್ದೀರಿ, ಇರಲಿ. ವೃತ್ತಿಪರನಾಗಿ ನನ್ನ ಮಾತೂ ನಿಜ ಮಾರಾಟದ ಸುತ್ತ ಮುತ್ತ ಬಿಟ್ಟು ಎಂದೂ ದೂರ ಹೋಗಿಲ್ಲವಲ್ಲ. ಪುಸ್ತಕ ಮಾರಾಟ “ಹೇಳೋದು ಹತ್ತು ಕೊಡೋದು ಐದು” ಎನ್ನುವ ಹಂತಕ್ಕಿಳಿಯುತ್ತಿರುವುದರ ಕುರಿತು ನಾನು ಮಾತಾಡುತ್ತಿದ್ದೇನೆ. ಕೇವಲ ಅಂದಂದಿನ `ಹೊಟ್ಟೆ ಹೊರೆಯುವ’ ಮಟ್ಟಕ್ಕಿಳಿಯಬಾರದು ಎಂಬ ಕಾಳಜಿಯಷ್ಟೇ.
    ಅಶೋಕವರ್ಧನ

  18. Maaraata-horata for publishers

    nodaata for others

  19. Now a days, finding a book published by small publishers has become difficult. I saw this in case of a foriegn writer, who had written two books. One got published through an international publisher and that book is available in big book shops. The other published by a Delhi NGO is not be seen even in small book shops!
    MNC colas have takenover indian colas long time back. I think our tastes are dictated by what is being dished out by the majors. Amen.

  20. ನರೇಂದ್ರ

    ನನ್ನ ಪ್ರತಿಕ್ರಿಯೆ ದೀರ್ಘವಾಗಿದೆ, ಆ ಬಗ್ಗೆ ಕ್ಷಮೆಯಿರಲಿ.

    ನ್ಯಾಯವಾಗಿ ನಾವೆಲ್ಲ ಇದಕ್ಕೆ ಪ್ರತಿಸ್ಪಂದಿಸಲೇ ಬೇಕಿದೆ. ಆದರೆ ನನ್ನನ್ನು ಹಲವು ಸಂದಿಗ್ಧಗಳು ಕಾಡುತ್ತಿದ್ದು ನೀವು ಎತ್ತಿರುವ ವಿಚಾರಕ್ಕೆ ಸರಳವಾದ ಪ್ರತಿಕ್ರಿಯೆ ಕಷ್ಟವಾಗುತ್ತಿದೆ. ಮೊದಲಿಗೆ ನೀವು ಒಬ್ಬ ಪುಸ್ತಕ ವ್ಯಾಪಾರಿಯಾಗಿ ಇದಕ್ಕೆಲ್ಲ ಸ್ಪಂದಿಸುವ ಹಾಗೆ ನನ್ನಂಥವರು ಕೊಳ್ಳುಗರಾಗಿ ಸ್ಪಂದಿಸುತ್ತಿರುತ್ತೇವೆ. ಇವೆರಡೂ ವಿರುದ್ಧ ಧ್ರುವಗಳಾಗಿದ್ದೂ ನಿಮ್ಮ concern ನನಗೆ ಮತ್ತು ನನ್ನಂಥವರಿಗೆ ಗೊತ್ತಿರುವುದರಿಂದ ನೀವು ಎತ್ತಿರುವ ಪ್ರಶ್ನೆಗಳು ಸುಲಭವಾಗಿ ನಮ್ಮನ್ನು ಬಿಟ್ಟು ಹೋಗುತ್ತಿಲ್ಲ.

    ಓದುವ ಮಂದಿ ಕಡಿಮೆಯಾಗುತ್ತಿರುವುದು ಒಂದು ನೆಲೆಯ ನಿಜವಾಗಿರುತ್ತಲೇ ಓದಲು ಸಿಗುತ್ತಿರುವ ಸರಕು ಕೂಡಾ ವಿಪರೀತವೆನ್ನುವಷ್ಟು ಹೆಚ್ಚುತ್ತಲೂ ಇದೆ ಮತ್ತು ಗುಣಾತ್ಮಕವಾಗಿ ಈ ಲಭ್ಯ ಸರಕಿನ ಮೌಲ್ಯ ಗಣನೀಯವಾಗಿ ಇಳಿದು ಹೋಗುತ್ತಲೂ ಇದೆ ಎನ್ನುವುದು ನನ್ನ ಅನುಭವ. ಹಿಂದೊಮ್ಮೆ ಹೇಳಿದ್ದಂತೆ ನಮ್ಮಲ್ಲಿ ಒಬ್ಬ ಚಿತ್ರಕಾರ, ಸಂಗೀತಪಟು, ಚಿತ್ರ ನಿರ್ದೇಶಕ, ನೃತ್ಯಪಟು, ಆಟಗಾರ ಏನೇ ಆಗುವುದಿದ್ದರೂ ಅದಕ್ಕೆಲ್ಲ ತರಬೇತಿ, ಶಿಕ್ಷಣ, ಸಾಮರ್ಥ್ಯವನ್ನು ಪರೀಕ್ಷೆಗೊಡ್ಡುವ ಮತ್ತು ಪ್ರಮಾಣೀಕರಿಸುವ ವ್ಯವಸ್ಥೆ, ಅಗತ್ಯ ಎಲ್ಲ ಇದೆ. ಆದರೆ ಬರಹಗಾರನಾಗುವುದಕ್ಕೆ ನಿಮ್ಮ ಬಳಿ ಒಂದು ಪೆನ್ನು-ಕಾಗದ ಇದ್ದರೆ ಸಾಕು, ಭಾಷೆ ಕೂಡಾ ಸ್ಪಷ್ಟವಾಗಿರಬೇಕಾದ ಅನಿವಾರ್ಯವೇನಿಲ್ಲ. ಕೆಲವೇ ವರ್ಷಗಳ ಹಿಂದೆ ಬರೆದಿದ್ದನ್ನು ಸಂಪಾದಕ ಮಹಾಶಯರೆನ್ನಿಸಿಕೊಂಡವರು ಮನ್ನಿಸಿದರೇ ನೊಬೆಲ್ ಪ್ರಶಸ್ತಿ ಬಂದಷ್ಟು ಸಂಭ್ರಮಿಸುವ ಪರಿಸ್ಥಿತಿಯಲ್ಲಿದ್ದ ನನ್ನಂಥವರು ಆಗ ಒಂದು ಪುಸ್ತಕವನ್ನೇ ನಮ್ಮ ಹೆಸರಿನಲ್ಲಿ ಪ್ರಕಟಿಸುವುದು ಜನ್ಮದಲ್ಲಿ ಸಾಧ್ಯವಾದೀತೆಂಬ ಕನಸು ಕಾಣಲೂ ಹೆದರುತ್ತಿದ್ದೆವು. ಇವತ್ತು ಸಂಪಾದಕನದ್ದು ಕಾರಕೂನಿ ಕೆಲಸವೆಂಬುದು ಎಲ್ಲರಿಗೂ ಗೊತ್ತಿದೆ. ಅವರ ಮರ್ಜಿ ಕಾಯುವವರು ಯಾರೂ ಇಲ್ಲ ಇವತ್ತು. ಬದಲಿಗೆ ಬ್ಲಾಗುಗಳಿವೆ, ಸೋಶಿಯಲ್ ವೆಬ್ ಸೈಟುಗಳಿವೆ, ಆನ್‌ಲೈನ್ ಪತ್ರಿಕೆಗಳೂ ಇವೆ. ಪುಸ್ತಕ ಪ್ರಕಟನೆಗೆ ಯಾರ ಹಂಗೂ ಅಗತ್ಯವಿಲ್ಲ. ಬರೆದಿದ್ದನ್ನೆಲ್ಲ ನೇರ ಪುಸ್ತಕ ಮಾಡಿ ಮಾರುಕಟ್ಟೆಗೆ ತೇಲಿ ಬಿಡಬಹುದು, ಅದು ಎಷ್ಟೆಂದರೆ ಅಷ್ಟೂ ಸುಲಭ ಎನ್ನುವ ಅನುಭವ ನನಗೇ ಆಗಿದೆ. ಸ್ವಲ್ಪ ಅವರಿವರ ಸಂಪರ್ಕ ಇದ್ದರೆ ಸಗಟು ಖರೀದಿಗೆಂದೇ ಅಚ್ಚು ಹಾಕುವ ಪ್ರಕಾಶಕರಿದ್ದಾರೆ, ಏನಿಲ್ಲವೆಂದರೆ ಇವರು ಬರಹಗಾರನಿಗೆ ಐದಾರು ಸಾವಿರ ಖಂಡಿತ ಕೊಡುತ್ತಾರೆ, ಐವತ್ತು ಉಚಿತ ಪ್ರತಿಗಳ ಸಮೇತ. ಬರೆದವನಿಗೆ ಲೇಖಕ ಅನಿಸಿಕೊಳ್ಳುವ ಸುಲಭದ ದಾರಿ ಇಷ್ಟಗಲಕ್ಕೆ ತೆರೆದಿದೆ ಇವತ್ತು. ಪ್ರಕಾಶಕ ನೀವೇನು ಬರೆದಿದ್ದೀರಿ ಎಂದು ಓದಿ ನೋಡುವ ಕಷ್ಟ ಕೂಡ ತೆಗೆದುಕೊಳ್ಳುವುದಿಲ್ಲ! ಇನ್ನೇನು ಬೇಕು ನಿಮಗೆ? ಐವತ್ತು ಅರವತ್ತು ವರ್ಷ ಪತ್ರಿಕೆ ನಡೆಸಿದ ಸಾಹಿತಿ ಸಂಪಾದಕರು ಎರಡೋ ಮೂರೋ ಪುಸ್ತಕ ತಂದಿದ್ದರೆ ಇವತ್ತು ಎರಡು ವರ್ಷ ಸಂಪಾದಕನಾಗಿದ್ದವನು ಇಪ್ಪತ್ತೈದು ಪುಸ್ತಕ ತಂದಿರುತ್ತಾನೆ. ಇವತ್ತು ನಾವು ಬರೆದಿದ್ದೆಲ್ಲ ಪುಸ್ತಕವಾಗಲು ಯೋಗ್ಯವಾದದ್ದೇ ಎನ್ನುವ ನಂಬಿಕೆ ಎಲ್ಲರಿಗೂ ಇದೆ, ಅವೇ ಪುಸ್ತಕಗಳನ್ನು ಮಾರಲು ಹೊರಟವರನ್ನು ಬಿಟ್ಟು!

    ಇದು ಸಂಭ್ರಮಿಸಬಹುದಾದ ವಿದ್ಯಮಾನವೇ ಆಗಬಹುದಿತ್ತೇನೊ. ಆದರೆ ವಾಸ್ತವ ಹೇಗಿದೆ ಎಂದರೆ, ನೋಡಿದರೆ ಕೊಳ್ಳಬೇಕೆನಿಸುವ ಮುಖಪುಟ, ಮುದ್ರಣ, ಕಾಗದ ಎಲ್ಲ ಇದ್ದೂ ಕೊಂಡರೆ ಮೂರ್ಖರಾಗುವುದು ನಿಶ್ಚಿತ ಎನಿಸುವ ಮಟ್ಟಿಗೆ ಇರುತ್ತವೆ ಇವೆಲ್ಲ! ಯಾರ ಮುನ್ನುಡಿ, ಬೆನ್ನುಡಿಯನ್ನೂ ನಂಬುವಂತಿಲ್ಲ! ಆವತ್ತು ಬಸಲಿಂಗಪ್ಪ ಕನ್ನಡ ಸಾಹಿತ್ಯವನ್ನು ಬೂಸಾ ಸಾಹಿತ್ಯ ಎಂದಿದ್ದಕ್ಕೆ ರಾಜೀನಾಮೆ ಕೊಡಬೇಕಾಯಿತು. ಇವತ್ತಿನ ಸಾಹಿತ್ಯವನ್ನು ಏನೆಂದು ಕರೆಯಬಹುದೋ ಗೊತ್ತಿಲ್ಲ!

    ನಡುವೆ ಇದುವರೆಗಿನ ಸಮಗ್ರಗಳು, ಒಬ್ಬರೇ ಬರೆದ ಅವೇ ಲೇಖನಗಳಲ್ಲನ್ನು ವಿಭಿನ್ನ ಪ್ರಕಾರಗಳಲ್ಲಿ ವಿಂಗಡಿಸಿ ಪ್ರಕಟಿಸಿದ ಸಂಕಲನಗಳು ಬರುತ್ತಿವೆ. ಮೂಲ ಸಂಕಲನಗಳು, ಕೃತಿಗಳು ಇನ್ನೂ ಕಪಾಟಿನಲ್ಲಿರುವಾಗಲೇ ಇವು ಬಂದರೆ ವ್ಯಾಪಾರ ಯಾವುದರದ್ದು ಸಾಗಬೇಕೆನ್ನುವ ಪ್ರಶ್ನೆಯೂ ಇದೆಯಲ್ಲವೆ.

    ನಾನು ಓದುವುದನ್ನು ಒಂದು obsessionಎನ್ನುವ ಮಟ್ಟಿಗೆ ಹಚ್ಚಿಕೊಂಡವನು. ಕಛೇರಿಯ ಕೆಲಸ ಬಿಟ್ಟರೆ ಉಳಿದಂತೆಲ್ಲ ನಾನು ಓದುವುದು, ಒಳ್ಳೆಯ ಸಿನಿಮಾ ಇತ್ಯಾದಿ ನೋಡುವುದರಲ್ಲಿ ವ್ಯಯಿಸುತ್ತೇನೆ. ಆದರೂ ನನಗೆ ಓದಲು ಸಾಧ್ಯವಾಗುವುದು ವರ್ಷಕ್ಕೆ ಸುಮಾರು ಇನ್ನೂರೈವತ್ತು ಪುಟಗಳ ಅರವತ್ತು ಪುಸ್ತಕಗಳನ್ನಷ್ಟೇ. ತಿಂಗಳಿಗೆ ಅರವತ್ತು ಪುಸ್ತಕಗಳು ಬರುತ್ತಿದ್ದರೆ ಅವುಗಳನ್ನು ಓದುವಲ್ಲಿ – ಕೊಂಡುಕೊಳ್ಳುವಲ್ಲಿ ಚೂಸಿಯಾಗಿರಲೇ ಬೇಕಾಗುತ್ತದೆ. ಈ ಚೂಸಿತನ ಮೌಲ್ಯ, ಡಿಸ್ಕೌಂಟ್ ಇತ್ಯಾದಿಗಳಿಗೆ ಸಂಬಂಧಿಸಿ ಅಲ್ಲ ಎನ್ನುವುದು ನಿಮಗೆ ಹೇಳಬೇಕಿಲ್ಲ. ಆದರೆ ನಮ್ಮ ಹಣ, ಸಮಯ ಮತ್ತು ಶ್ರಮಕ್ಕೆ ತಕ್ಕ ಪ್ರತಿಫಲ ಈ ಕೃತಿಗಳು ಕೊಡುತ್ತಿವೆಯೆ? ಬರವಣಿಗೆ ಮತ್ತು ಪ್ರಕಟಣೆ ನಮ್ಮಲ್ಲಿ ಜವಾಬ್ದಾರಿಯ ಕಾಯಕ ಎನ್ನುವ ಮೌಲ್ಯವನ್ನೇ ಬಿಟ್ಟುಕೊಟ್ಟಂತೆ ನನಗಂತೂ ಅನಿಸಿದೆ. ಕೊನೆ ಕೊನೆಗೆ ನನಗೆ ಏನಾಯಿತೆಂದರೆ ನಾನು ಕನ್ನಡ ಪುಸ್ತಕಗಳನ್ನು ಕೊಳ್ಳುವುದನ್ನೇ ಬಿಟ್ಟು ಬಿಟ್ಟೆ. ಹಿಂದೆ ಅನುವಾದಿತ ಕನ್ನಡ ಪುಸ್ತಕಗಳ ಮೇಲಾದರೂ ವಿಶ್ವಾಸವಿತ್ತು. ಈಚೆಗೆ ಅದೂ ಕುಸಿಯುತ್ತಿದೆ. ಅಂಕಿತ, ಪ್ರಿಸಂ, ಅಕ್ಷರ, ಪುಸ್ತಕ ಪ್ರಕಾಶನ, ಲಂಕೇಶ್ ಪ್ರಕಾಶನ, ಛಂದ, ಮನೋಹರ, ಲೋಹಿಯಾ, ಅಭಿನವ ಎಂದೆಲ್ಲ ಪ್ರಕಾಶಕರನ್ನು ನಂಬಿ ಪುಸ್ತಕ ಕೊಳ್ಳುತ್ತಿದ್ದ ಕಾಲವಿತ್ತು. ಈ ಪಟ್ಟಿ ಈಗ ಅಕ್ಷರ, ಅಭಿನವದಂಥ ಒಂದೆರಡು ಹೆಸರುಗಳಿಗೆ ಸೀಮಿತವಾಗಿರುವುದು ಕೂಡ ನಿಜ. ಸ್ನೇಹ ಸಂಬಂಧಗಳ ದಾಕ್ಷಿಣ್ಯಕ್ಕೆ, ಇನ್ನೇನೋ ಅನಿವಾರ್ಯಕ್ಕೆ ಎಂದೆಲ್ಲ ಕೆಲವೊಮ್ಮೆ ಖ್ಯಾತರು ಬರೆದ ಕಸವನ್ನು ಕೂಡ ಅಚ್ಚು ಹಾಕುವ compromise policy ಗೆ ಓದುಗರು ಬಲಿಯಾಗಲು ಎಲ್ಲಿಯವರೆಗೆ ಸಿದ್ಧರಿರುತ್ತಾರೆ? ಒಂದೆರಡು ಬಾರಿ ಮೂರ್ಖರಾಗಲು ನಾವೂ ಸಿದ್ಧರಿರುತ್ತೇವೆ, ಆದರೆ ಸದಾಕಾಲ ಅಲ್ಲ! ನನ್ನ ಕಟುವಾದ ಮಾತಿಗೆ ಹೀಗಾಗಿದೆಯಲ್ಲ ಎನ್ನುವ ನನ್ನ ನೋವು ಮಾತ್ರ ಕಾರಣ, ಇನ್ಯಾವ ಪೂರ್ವಾಗ್ರಹಗಳೂ ನನಗಿಲ್ಲ.

    ಇದೆಲ್ಲದರಿಂದಾಗಿ ಏನಾಗುತ್ತದೆ, ಎಲ್ಲ ಪುಸ್ತಕಗಳೂ ಒಂದೇ, ಎಲ್ಲ ಸಾಹಿತಿಗಳು, ಪ್ರಕಾಶಕರು ಒಂದೇ, ಇವರದ್ದೆಲ್ಲ ಇಷ್ಟೇ ಎನ್ನುವ ಅಸಡ್ಡೆ ಹೊಸ ಮತ್ತು ಹಳೆಯ ಓದುಗರಲ್ಲಿ ಬಂದು ಬಿಡುತ್ತದೆ. ಮೊದಲೇ ಓದುವುದೆಂದರೆ ಅಷ್ಟಕ್ಕಷ್ಟೇ ಇರುವವರಿಗೆ ಇದೆಲ್ಲ ಸಮರ್ಥನೆಯನ್ನು ಒದಗಿಸಿದಂತೆ ಆಗುತ್ತದೆ. ವಿಪುಲವಾದ ಬೆಳೆ ಎಲ್ಲರಿಗೂ ಸಂತಸ, ಸಮೃದ್ಧಿ, ಸಂಭ್ರಮ ತರುವಂತೆ ವಿಪುಲವಾದ ಕಳೆ ಮಾರಕವಾಗುತ್ತದೆ ಎನ್ನುವುದು ನಿಜವಲ್ಲವೆ.

    ಈ ಸ್ಥಿತಿಯಲ್ಲಿ ಡಿಸ್ಕೌಂಟು, ಸರಕಾರೀ ವ್ಯವಸ್ಥೆ ಏನಾದರೂ ಪರಿಣಾಮ ಬೀರುತ್ತದೆಯೇ ಎಂದರೆ ಸಾಂಸ್ಥಿಕ ಖರೀದಿಗೆ ಮತ್ತು ವ್ಯಕ್ತಿಗತ ಖರೀದಿಗೆ ಸಂಬಂಧಿಸಿದಂತೆ ವಿಭಿನ್ನ ಉತ್ತರಗಳು ಸಿಗುತ್ತವೆ. ಒಬ್ಬ ಪ್ರಾದೇಶಿಕ ಮಿತಿಗಳ ಸಣ್ಣ ಪುಸ್ತಕವ್ಯಾಪಾರಿಯಾಗಿ ನಿಮಗೆ ಇದೆಲ್ಲ ಎಷ್ಟು ಒತ್ತಡ, ಸಂಕಟ ಮತ್ತು ಸಂದಿಗ್ಧಗಳನ್ನೊಡ್ಡುತ್ತ ಅಸ್ತಿತ್ವದ ಪ್ರಶ್ನೆಯೇ ಆಗಿ ಬಿಡುತ್ತದೆ ಎನ್ನುವುದು ನನಗೆ ಅರ್ಥವಾಗುತ್ತದೆ ಮತ್ತು ಆ ಬಗ್ಗೆ ನನ್ನಲ್ಲಿ ಪ್ರಾಮಾಣಿಕವಾದ ನೋವಿದೆ. ಆ ಕಾಲದ ಇಂಗ್ಲೀಷ್ ‘ಎಮ್ಮೆ’ಯಾಗಿಯೂ ಪುಸ್ತಕ ಹೊತ್ತು ಮಾರುವ ಆದರ್ಶಕ್ಕೆ ಬಿದ್ದು (ಬಿದ್ದ ಬಗ್ಗೆ ಯಾವತ್ತೂ ವಿಷಾದವಾಗಿದ್ದಿಲ್ಲವೇ ಎಂದು ಅಚ್ಚರಿಯಿಂದ ನಿಮ್ಮನ್ನು ಕೇಳಿದವನು ನಾನು) ನೀವು ಸಾಗಿ ಬಂದ ಹಾದಿ ಎಷ್ಟು ಎಡರು ತೊಡರುಗಳನ್ನು ಕಂಡಿರಬಹುದೋ ಅದನ್ನೆಲ್ಲ ನೀವು ವೈಯಕ್ತಿಕವಾಗಿ ಎಂದೂ ಹೇಳಿಕೊಂಡವರಲ್ಲ ಕೂಡ. ನಿಮ್ಮ ಕೃತಿ ‘ಪುಸ್ತಕ ಮಾರಾಟ-ಹೋರಾಟ’ ಕೂಡ ವಸ್ತುನಿಷ್ಠವಾಗಿದೆಯೇ ಹೊರತು ಎಲ್ಲೂ ವ್ಯಕ್ತಿನಿಷ್ಠ ಪ್ರಚಾರ-ಹೆಗ್ಗಳಿಕೆಯ ಧಾಟಿಯನ್ನು ಪಡೆದಿದ್ದಿಲ್ಲ ಎನ್ನುವುದನ್ನು ಬಲ್ಲೆ.

    ಗ್ರಂಥಾಲಯಗಳ, ಶಾಲಾ ಕಾಲೇಜುಗಳ ಪುಸ್ತಕ ಖರೀದಿಯ ವಿದ್ಯಮಾನದ ಬಗ್ಗೆ ನನಗೇನೂ ಹೇಳುವುದಕ್ಕಿಲ್ಲ. ಗ್ರಂಥಾಧಿಕಾರಿಗಳು, ಶಿಕ್ಷಕರು, ಶಾಲೆಯ ಶಿಕ್ಷಕ-ಪೋಷಕ ಸಂಘಟನೆಗಳು ಕೂಡ ಈ ಬಗ್ಗೆ ಅಗತ್ಯ ಆಸಕ್ತಿವಹಿಸುವ ಮನಸ್ಥಿತಿಯಲ್ಲಿರುವಂತೆ ಕಾಣಿಸದ ಈ ದಿನಗಳಲ್ಲಿ ಪುಸ್ತಕಗಳು ಯಾರಿಗೂ ಬೇಡವಾದ ಸರಕಾಗಿಬಿಟ್ಟಂತಿದೆ. ಯಾವುದೇ ಶಾಲೆ-ಕಾಲೇಜುಗಳು ಪಠ್ಯೇತರ ಓದನ್ನು ಒಂದು ಶಿಸ್ತಾಗಿ ಉತ್ತೇಜಿಸಿದ, ಅನಿವಾರ್ಯವಾಗಿಸಿದ ಉದಾಹರಣೆ ನನಗೆ ಸಿಕ್ಕಿಲ್ಲ. ಇಂಥ ಕಾರ್ಯಕ್ರಮ ವಿದೇಶಗಳಲ್ಲಿ ಪ್ರಾಥಮಿಕ ಹಂತದಿಂದಲೇ ಇದೆ ಎಂಬುದನ್ನು ನಾನು ವಿವೇಕ ಶಾನಭಾಗರಿಂದಲೇ ತಿಳಿದಿದ್ದೆ. (ಅನೇಕ ವರ್ಷಗಳ ಹಿಂದೆ ಅವರು ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಕೆ.ವಿ.ತಿರುಮಲೇಶರ ‘ಎಲ್ಲಿದ್ದಾನೆ ಪ್ರಿಯ ಓದುಗ’ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಇದನ್ನೆಲ್ಲ ಪ್ರಸ್ತಾಪಿಸಿದ್ದರು.) ಇನ್ನು ವಿದ್ಯಾರ್ಥಿಗಳು ತಮಗೆ ಇಂಥ ಪುಸ್ತಕಗಳು ಬೇಕು ಎಂದಾಗಲೀ, ಗ್ರಂಥಾಲಯದ ಬಳಕೆದಾರರು ತಮಗೆ ಇಂಥ ಕೃತಿಗಳನ್ನು ತರಿಸಿಕೊಡಿ ಎಂದಾಗಲೀ ತಾವಾಗಿಯೇ ಕೇಳುವ ಸ್ಥಿತಿ ಇದೆಯೆ ನಮ್ಮಲ್ಲಿ? ಮಧ್ಯಾಹ್ನದ ಬಿಸಿಲಿಗೆ ಸ್ವಲ್ಪ ಸುಧಾರಿಸಿಕೊಳ್ಳುವುದಕ್ಕೆ ಬಳಕೆಯಾಗುತ್ತಿರುವ ನಮ್ಮ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲೇ ಅಲ್ಲಿರುವ ಕೃತಿಗಳ ಇಂಡೆಕ್ಸಿಂಗ್ ಇಲ್ಲ. ಅವುಗಳನ್ನು ಜೋಡಿಸಿಟ್ಟ ಕ್ರಮದಲ್ಲಿ ಯಾವುದೇ ಶಿಸ್ತಿಲ್ಲ. ಕಾದಂಬರಿ ಪ್ರಕಾರದಲ್ಲಿ ಅಡುಗೆ ಪುಸ್ತಕ, ಇತಿಹಾಸ ಪುಸ್ತಕಗಳ ನಡುವೆ ಕವನ ಸಂಕಲನ ಇರುವುದು ಸಾಮಾನ್ಯವಾಗಿ ಬಿಟ್ಟಿದೆ. ಸಿಬ್ಬಂದಿಗಳ ಬಳಿ ಕಾರಂತರ ಅಥವಾ ಕುವೆಂಪುರವರ ಒಂದಾದರೂ ಕಾದಂಬರಿ ಇಲ್ಲಿದೆಯೆ ತೋರಿಸಿ ಎಂದರೆ ಅಲ್ಲೇ ಎಲ್ಲೋ ಇರುತ್ತೆ ಸಾರ್ ಎನ್ನುವ ತಮಾಷೆಯ ಉತ್ತರ. ಕಾರಂತರು ನಲವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಬಗ್ಗೆ ಇಲ್ಲಿನ ಸಿಬ್ಬಂದಿಗೆ ಇನ್ನೂ ಸುತ್ತೋಲೆ ಬಂದಿಲ್ಲವಾದ್ದರಿಂದ ಆ ಬಗ್ಗೆ ಅವರಿಗೆ ತಿಳಿದಿಲ್ಲ. ಈ ಗ್ರಂಥಾಲಯಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಸಿಕ್ಕಿದೆ ಎಂದ ಮೇಲೆ ಇನ್ನುಳಿದವು ಹೇಗಿರಬಹುದು! ಈ ಇಲಾಖೆಯಲ್ಲಿ ಹುದ್ದೆಗಳ ಭರ್ತಿ, ಸಂದರ್ಶನ, ಆಯ್ಕೆ ಪ್ರಕ್ರಿಯೆ ಎಲ್ಲ ಹೇಗೆ ನಡೆಯುತ್ತಿರಬಹುದೆಂಬುದು ನನಗೆ ಜಾಗತಿಕ ವಿಸ್ಮಯಗಳಲ್ಲೊಂದಾಗಿ ಕಾಣಿಸುತ್ತದೆ. ಇವರಿಗಿಂತ ನಮ್ಮ ಶಾಲೆಗಳ ಸ್ಥಿತಿ ತುಂಬ ಭಿನ್ನವಾಗಿಲ್ಲ ಎನ್ನುವುದು ನಿಮಗೇ ಗೊತ್ತಿದೆ. ಇಲ್ಲಿ ಏನನ್ನು ನಿರೀಕ್ಷಿಸಬಹುದು!

    ವ್ಯಕ್ತಿಗತ ನೆಲೆಯ ಖರೀದಿಯಲ್ಲಿ ನಿಶ್ಚಯವಾಗಿಯೂ ಈ ಮಾಲ್‌ಗಳು ಒಡ್ಡುವ ಆಮಿಷ, ಆನ್‌ಲೈನ್ ಖರೀದಿಯ ಅನುಕೂಲತೆಗಳು ಮತ್ತು ಕ್ರೆಡಿಟ್ ಕಾರ್ಡ್ ತರದ ವ್ಯವಸ್ಥೆ ಸಣ್ಣ ಪುಟ್ಟ ಮಟ್ಟದ ಬೇಡಿಕೆಗಳಿರುವ ಪುಸ್ತಕವ್ಯಾಪಾರಿಗಳಿಗೆ ದೊಡ್ಡ ಹೊಡೆತವನ್ನೇ ನೀಡುತ್ತಿರುವುದು ನಿಜ. ಆದರೆ ಈ ಸಮಸ್ಯೆಯನ್ನು ಎದುರಿಸಬೇಕು ಹೇಗೆ?

    ಹೆಚ್ಚಾಗಿ ಕನ್ನಡೇತರ, ಇಂಗ್ಲೀಷ್ ಕೃತಿಗಳ ಸಂದರ್ಭದಲ್ಲಷ್ಟೇ ಇವರ ಮೇಲ್ಗೈ ಇದೆ ಎನ್ನುವುದು ನನ್ನ ನಂಬಿಕೆ. ಕನ್ನಡ ಪುಸ್ತಕಗಳನ್ನು ಮಾಲ್‌ಗಳಲ್ಲಿ (ಭೈರಪ್ಪ ಬಿಡಿ, ಎಲ್ಲಿಟ್ಟರೂ ಕೊಳ್ಳುಗರಿರುತ್ತಾರೆ) ಕನ್ನಡ ಪುಸ್ತಕಗಳು ಹೋಗುವುದು ಅಷ್ಟರಲ್ಲೇ ಇದೆ. ಮತ್ತೆ ಕನ್ನಡ ಪುಸ್ತಕಗಳನ್ನು ಕೊಳ್ಳುವ ಅಭಿರುಚಿಯುಳ್ಳವರು ಊರಿನ ಆಯ್ದ ಅಂಗಡಿಗಳ ಜೊತೆ ಒಂದು ಅನುಬಂಧವನ್ನು ಕೂಡ ಹೊಂದಿರುತ್ತಾರೆ ಎನ್ನುವುದು ನನ್ನ ನಂಬಿಕೆ. ಅವರು ಮಾಲ್‌ಗಳಲ್ಲಿ ವಿಶೇಷ ರಿಯಾಯಿತಿ ದಕ್ಕಿದರೆ ಕೊಂಡಾರೆಯೇ ವಿನಃ ಯಾವತ್ತಿನ ಹತ್ತು ಹದಿನೈದು ಶೇಕಡಾ ರಿಯಾಯಿತಿಗೆ ಅಲ್ಲಿಗೆ ಹೋಗಲಾರರು. ಅಂಥ ರಿಯಾಯಿತಿ ಅವರಿಗೆ ಯಾವತ್ತೂ ಕೊಳ್ಳುವಲ್ಲಿಯೇ ಸಿಗುತ್ತದೆ ಕೂಡ. ಆದರೆ ಇಂಗ್ಲೀಷ್ ಕೃತಿಗಳ ಬೆಲೆ ಮತ್ತು ಅವುಗಳಿಗಿರುವ ಮಾರುಕಟ್ಟೆಯನ್ನು ಗಮನಿಸಿ ಹೇಳುವುದಾದರೂ ಪೆಟ್ಟು ಸಣ್ಣದಲ್ಲ. ಉದಾಹರಣೆಗೆ ಈಗಿನ್ನೂ ವಿದೇಶೀ ಮಾರುಕಟ್ಟೆಯಲ್ಲಿ ಮಾತ್ರ ಸಿಗುತ್ತಿರುವ ಅಮಿತಾವ ಘೋಷ್‌ರ ಹೊಸ ಕೃತಿ “ರಿವರ್ ಆಫ್ ಸ್ಮೋಕ್” ಭಾರತದಲ್ಲೂ ಪ್ರಕಟವಾಗುತ್ತಿದೆ. ಇದರ ಪ್ರಕಟನಾಪೂರ್ವ ರಿಯಾಯಿತಿ 40% ಎಂದು ಕೇಳಿದೆ. ಈಚೆಗೆ ಬಂದ ಖುಷ್‌ವಂತ್ ಸಿಂಗರ ಕೃತಿಗೂ ಇದೇ ರೀತಿಯ ಸ್ವಾಗತ ಸಿಕ್ಕಿತ್ತು. ನೈಪಾಲರ ದಕ್ಷಿಣ ಆಫ್ರಿಕಾ ಕುರಿತ ಕೃತಿಗೆ ಈಗಲೂ 26% ರಿಯಾಯಿತಿ ಆನ್‌ಲೈನ್‌ನಲ್ಲಿ ಸಿಗುತ್ತಿದೆ. ಪಮುಖ್‌ನ ದ ಮ್ಯೂಸಿಯಮ್ ಆಫ್ ಇನ್ನೊಸೆನ್ಸ್ ಕೃತಿಗೂ ಈ ತರದ ರಿಯಾಯಿತಿ, ಪುಕ್ಕಟೆಯಾಗಿ ಮನೆಗೆ ತಲುಪಿಸುವ ಸವಲತ್ತು, ಕ್ರೆಡಿಟ್ ಕಾರ್ಡ್ ಮುಖೇನ ಪಾವತಿ (ಕನಿಷ್ಠ 50 ದಿನ ಹಣ ಪಾವತಿಸದೇ ಪುಸ್ತಕ ಕೊಳ್ಳುವ, ಓದುವ ಅನುಕೂಲ) ಎಲ್ಲ ಇತ್ತು. ಹೀಗಿರುತ್ತ ಅಂಗಡಿಗಳಲ್ಲಿ ಯಾರು ಕೊಳ್ಳುತ್ತಾರೆ ಎನ್ನುವುದು ಪ್ರಶ್ನೆ. ಕೆಲವೊಂದು ಆನ್‌ಲೈನ್ ಮಾರಾಟಗಾರರಂತೂ ವರ್ಷದ ಕೊನೆಯ ಕೆಲವೇ ದಿನ, ರಾತ್ರಿ ಹನ್ನೊಂದರಿಂದ ಎರಡು ಗಂಟೆಯ ಒಳಗೆ ಏನು ಖರೀದಿಸಿದರೂ ಶೇಕಡಾ ಐವತ್ತು ರಿಯಾಯಿತಿ ಘೋಷಿಸಿ ನನ್ನಂಥವರಿಗೆ ಈ ಮೇಲ್ ಕಳಿಸಿದ್ದೂ ಇದೆ! ಇಂಥ ಯಾವತ್ತೂ ಸವಲತ್ತುಗಳನ್ನು ನಾನು ಬಳಸಿಕೊಂಡಿದ್ದೇನೆ. ಒಬ್ಬ ಪುಸ್ತಕಪ್ರೇಮಿಯಾಗಿ ನಾನು ಅಥವಾ ಇನ್ಯಾರೇ ಆದರೂ ಹೀಗೆಯೇ ಮಾಡುತ್ತಾರೆ ಎಂದೂ ಭಾವಿಸುತ್ತೇನೆ. ಹಾಗೆಯೇ ಕೆಲವೊಮ್ಮೆ ಇಲ್ಲಿ ನಾನು ಮೂರ್ಖನಾಗಿದ್ದೂ ಇದೆ. ಒಂದೇ ಕೃತಿ ಹಲವು ಬೆಲೆಗಳಲ್ಲಿ ಲಭ್ಯವಿರುವುದನ್ನು ಕಂಡು ಬೆಪ್ಪನಂತೆ ‘ಚೀಪ್ ರೇಟ್ – ಹಾಫ್ ರೇಟ್’ ಅಂತ ಮುನ್ನುಗ್ಗಿ ನನ್ನ ಕಣ್ಣಲ್ಲಂತೂ (ದಪ್ಪ ಗಾಜಿನ ನನ್ನ ಇತ್ತೀಚಿನ ಕನ್ನಡಕ ಸಹಿತ ನೇತ್ರಗಳು ನನ್ನವು) ಓದಲಾಗದ ಪುಟ್ಟ ಫಾಂಟ್ನ್ ರೀಸೈಕಲ್ಡ್ ಹಾಳೆಯ ಕೆಟ್ಟ ಮುದ್ರಣದ ಪ್ರತಿ ಕಂಡು ಮೂರ್ಖನಾಗಿದ್ದು ಹಲವು ಬಾರಿ. ಹಾಗೆಂದು ಧಾರಾಳಿಯಾಗಿ ಹೆಚ್ಚು ಬೆಲೆಯ ಪ್ರತಿ ತರಿಸಿದರೂ ಯಾವುದು ಕೈ ಸೇರುತ್ತದೆ ಎನ್ನುವ ಬಗ್ಗೆ ಯಾವ ಗ್ಯಾರಂಟಿಯೂ ಇಲ್ಲ ಎನ್ನುವುದು ಅನುಭವಸಿದ್ಧ ವಾಸ್ತವ. ಹಾಗೆಯೇ ನಿಶ್ಚಯವಾಗಿಯೂ ಇವರು ಇನ್ನೆಲ್ಲೊ ಹಿಡಿದು ಇಲ್ಲೆಲ್ಲೊ ಬಿಟ್ಟು ವ್ಯಾಪಾರ ನಡೆಸುತ್ತಿರಬಹುದು. ಅಥವಾ ಪ್ರಕಾಶಕರ ಜೊತೆ ಈ ತರದ ಒಳಒಪ್ಪಂದ ಏನಾದರೂ ಮಾಡಿಕೊಂಡಿರಲೂ ಬಹುದು. ಆದರೆ ರಸ್ತೆ ಬದಿ ಮಾರುವ ಪೈರೇಟೆಡ್ ಕೃತಿಗಳನ್ನು ಕೊಳ್ಳುವುದಕ್ಕಿಂತ ಇದು ನೈತಿಕ ಎಂಬ ಭಾವನೆ ನನ್ನಲ್ಲಿತ್ತು. ಆದರೆ ಇದರೊಳಗಿನ ಮರ್ಮವೆಲ್ಲ ತಿಳಿಯುತ್ತಿರುವುದು ಈಗಲೇ, ನಿಮ್ಮ ಲೇಖನವನ್ನೋದಿದ ಮೇಲೆಯೆ.

    ಹಿಂದೆಲ್ಲ ನನಗೆ ನೀವೂ ಯಾಕೆ ಆನ್‌ಲೈನ್ ಆರ್ಡರ್ ಪಡೆಯುವ, ವಿತರಿಸುವ ವ್ಯವಸ್ಥೆಯನ್ನು, ಕ್ರೆಡಿಟ್ ಕಾರ್ಡ್ ವ್ಯವಸ್ಥೆಯನ್ನು, ಸ್ವತಃ ಹೆಚ್ಚಿನ ರಿಯಾಯಿತಿ ಗಿಟ್ಟಿಸುವ ಉಪಾಯಗಳನ್ನೆಲ್ಲ ಮಾಡಬಾರದು ಎಂದೇ ಅನಿಸಿತ್ತು. ನೀವು ಆಧುನಿಕತೆಗೆ, ಅದರ ಓಘಕ್ಕೆ ಸ್ವಲ್ಪ ನಿಧಾನವಾಗಿಯೇ ತೆರೆದುಕೊಳ್ಳುತ್ತಿದ್ದೀರಿ ಎಂತಲೂ ಅನಿಸಿತ್ತು. ಆದರೆ ಅದು ನಿಮ್ಮ ಅನುಭವ, ಕ್ಷಮತೆ ಮತ್ತು ಮುಖ್ಯವಾಗಿ ಒಗ್ಗುವಿಕೆಗೆ ಬಿಟ್ಟ ವಿಚಾರವಾಗಿದ್ದು ಅವು ನಿಮಗೆ – ನೀವು ಅವುಗಳಿಗೆ ಒಲಿದಂತೆ ಒಲಿಯಲಿ ಎಂದೇ ಸುಮ್ಮನಿದ್ದೆ, ನನ್ನ ಸ್ವಭಾವತಃ ಅಧಿಕಪ್ರಸಂಗಿತನವನ್ನು ಅದುಮಿಕೊಂಡು! ಮೊದಲಿಗೆ ನೀವು ಬ್ಲಾಗ್ ಆರಂಭಿಸಿದಾಗ, ಅದರಲ್ಲಿ ಪುಸ್ತಕ ಪಟ್ಟಿ ಪ್ರಕಟಿಸುತ್ತೇವೆ ಎಂದಾಗ ನಾನು ಇದನ್ನೇ ಮಾಡುತ್ತಿದ್ದೀರಿ ಎಂದೇ ಭಾವಿಸಿದ್ದೆ. ಆಮೇಲೆ ಅದು ಅತ್ರಿ ಪ್ರಕಾಶನದ ಕೃತಿಗಳ ಪಟ್ಟಿಗೇ ನಿಂತಾಗ ಮತ್ತು ಅಲ್ಲಿ ಯಾವುದೇ ಚಿತ್ರಮಯ ವಿವರ, ವ್ಯಾಪಾರೀ ಉದ್ದೇಶ ಕಾಣದಾದಾಗ ಸ್ವಲ್ಪ ನಿರಾಶನಾಗಿದ್ದೂ ಇದೆ. ನೀವೇನು, ಮನೋಹರ ಗ್ರಂಥಮಾಲಾದ ವೆಬ್‌ಸೈಟ್ ಕೂಡ ಆನ್‌ಲೈನ್ ಆರ್ಡರ್ ಎನ್ನುತ್ತ ಪಾವತಿಗೆ ಡಿಡಿ/ಚೆಕ್‌ಗಳನ್ನೇ ಅವಲಂಬಿಸಿದ್ದು ಈ ಬಗ್ಗೆ ರಮಾಕಾಂತ ಜೋಶಿಯವರಿಗೆ ಬರೆದರೂ ಅದನ್ನೆಲ್ಲ ಮುಂದೆ ಮಾಡುವ ಉದ್ದೇಶವಿದೆ ಎನ್ನುವ ಉತ್ತರವಷ್ಟೇ ಸಿಕ್ಕಿದ್ದು. ಮುಂದೆ ಕ್ರೆಡಿಟ್ ಕಾರ್ಡ್ ಸಂಬಂಧ ನಿಮಗಾದ ಕಹಿ ಅನುಭವವನ್ನೂ ಕೇಳಿದ ಮೇಲೆ ಅಂಥ ಸಲಹೆ ನೀಡುವ ನನ್ನ ಉತ್ಸಾಹ ಕೂಡ ಇಳಿಯಿತು.

    ಅಕ್ಷರ ಪ್ರಕಾಶನಕ್ಕೂ ವೆಬ್‌ಸೈಟ್ ಒಂದನ್ನು ಮಾಡುವ ಉದ್ದೇಶವಿತ್ತು ಎಂದು ಕೇಳಿದ್ದೆ. ಆದರೆ ಅದೇನೂ ಕಾರ್ಯಗತವಾಗಲಿಲ್ಲ.

    ನನಗನಿಸುವುದೇನೆಂದರೆ, ನೀವೆಲ್ಲ ಸಮಾನ ಮನಸ್ಕರು ಸೇರಿ ಕನ್ನಡ ಪುಸ್ತಕಗಳ ಖರೀದಿ -ಮಾರಾಟಕ್ಕೆ ಯಾಕೆ ಒಂದು ವೆಬ್‌ಸೈಟ್ ನಿಯೋಜಿಸಬಾರದು? ಪೇ ಪಾಲ್‌ನಂಥ ಪಾವತಿ ವ್ಯವಸ್ಥೆಯ ಸವಲತ್ತನ್ನು ಬಳಸಿಕೊಂಡು ಯಾವುದಾದರೂ ನಿಷ್ಠ-ಸಭ್ಯ-ಯೋಗ್ಯ ಕೊರಿಯರ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಇದನ್ನು ನಿರ್ವಹಿಸುವುದು ಅಷ್ಟೇನೂ ಕಷ್ಟವಾಗಲಾರದು. ಆಯಾ ಪ್ರಕಾಶಕರೇ ನೇರವಾಗಿ ವಿಳಾಸಕ್ಕೆ ಪುಸ್ತಕಗಳನ್ನು ಕಳಿಸಿಕೊಡುವ ಹೊಣೆ ಹೊತ್ತಲ್ಲಿ ಪುಸ್ತಕಗಳನ್ನು ಶೇಖರಿಸಿಡುವ ಗೋಳು ಕೂಡ ಒಬ್ಬರ ಮೇಲೇ ಬೀಳುವುದಿಲ್ಲ. ಪ್ರದರ್ಶನಗಳಿಗೆ ಪುಸ್ತಕಗಳನ್ನು ಹೊತ್ತೊಯ್ಯುವ, ಮಾರಾಟವಾಗದೆ ಅಂದಗೆಟ್ಟ ಪುಸ್ತಕಗಳನ್ನೇನು ಮಾಡಬೇಕೆನ್ನುವ ಸಮಸ್ಯೆಗೂ ಇದರಿಂದ ಪರಿಹಾರ ಸಾಧ್ಯ. ಹೇಗೂ ಅಲ್ಲಿ ಇದ್ದಕ್ಕಿದ್ದಂತೆ ಭಾರೀ ವ್ಯವಹಾರ ಸುರುವಾಗಲಿಕ್ಕಿಲ್ಲ. ಹಾಗಿರುತ್ತ ಕ್ರಮೇಣ ಬೆಳೆದು ಬರಬಹುದಾದ, ಸದ್ಯಕ್ಕೆ ಪ್ರಸ್ತುತ ವ್ಯಾಪಾರದೊಂದಿಗೇ ನಿರ್ವಹಿಸಬಹುದಾದ ಹೊಸ ವ್ಯವಸ್ಥೆಗೆ ಯಾಕೆ ತೆರೆದುಕೊಳ್ಳಬಾರದು?

    ಪುಸ್ತಕಗಳ ಮಾರಾಟದಲ್ಲಿಯೂ ಅದೂ ಒಂದು ವ್ಯಾಪಾರ ಎಂದುಕೊಳ್ಳದೆ ಒಂದು ಆದರ್ಶ, ಮೌಲ್ಯ ಇತ್ಯಾದಿಗಳನ್ನಿಟ್ಟುಕೊಂಡು ನೀವದನ್ನು ಕರ್ತವ್ಯವೆಂಬಂತೆ, ಸೇವೆ ಎಂಬಂತೆ ನಡೆಸಿದ್ದೀರಿ, ಒಪ್ಪುತ್ತೇನೆ. ಆದರೆ ಆಧುನಿಕತೆಯೇ ಒಂದು ಕೆಡುಕು (evil) ಅಲ್ಲ. ಮುಂದಿನ ತಲೆಮಾರು ಮೊನ್ನೆ ಮೊನ್ನೆ ತನಕ ನೌಕರಿಗಾಗಿ ಕಛೇರಿಗಳಿಗೆ ಧಾವಿಸುವ, ಶಿಕ್ಷಣಕ್ಕಾಗಿ ಶಾಲೆ-ಕಾಲೇಜು ಎಂಬ ಕಟ್ಟಡಗಳತ್ತ ಓಡುವ ಮಂದಿ ಇದ್ದರಂತೆ, ಹಾಜರಿ ತೆಗೆಯುತ್ತಿದ್ದರಂತೆ, ತಡವಾದರೆ ಮೆಮೊ ಕೊಡುತ್ತಿದ್ದರಂತೆ ಎಂದೆಲ್ಲ ಹೇಳಿಕೊಂಡು ನಗುವ ದಿನಗಳು ದೂರವಿಲ್ಲ. ಇವತ್ತು ಎಲ್ಲವನ್ನೂ ಕುಳಿತಲ್ಲಿಂದಲೇ ಮಾಡಲು, ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಅದರ ಸಾಧಕ-ಬಾಧಕಗಳೇನೇ ಇರಲಿ, ಜಗತ್ತು ಚಲಿಸುತ್ತಿರುವುದು ಅತ್ತಲೇ. ವ್ಯಾಪಾರ ಗ್ರಾಹಕನನ್ನು ಕೇಂದ್ರದಲ್ಲಿಟ್ಟುಕೊಂಡೇ ನಡೆಯಬೇಕಾಗಿರುವುದರಿಂದ ಕಾಲಕ್ಕೆ ತಕ್ಕಂತೆ ವ್ಯಾಪಾರದ ಶೈಲಿ ಕೂಡಾ ಅಷ್ಟಿಷ್ಟು ಬದಲಾವಣೆಗಳಿಗೆ ತೆರೆದುಕೊಂಡಿದ್ದರೆ ತಪ್ಪಿಲ್ಲ. ವಸುಧೇಂದ್ರರಂಥವರು ತಮ್ಮ ಛಂದ ಪ್ರಕಾಶನದ ಪುಸ್ತಕಗಳು ಫ್ಲಿಪ್ ಕಾರ್ಟ್ ನವರ ವೆಬ್‌ಸೈಟಿನಲ್ಲಿ ಸಿಗುವಂತೆ ಮಾಡಿರುವುದು ಇಂಥದೇ ಒಂದು ಹೆಜ್ಜೆ ಎಂದು ತಿಳಿಯುತ್ತೇನೆ. ಬಹುಷಃ ಕನ್ನಡ ಪುಸ್ತಕಗಳದ್ದೇ ಅಂಥ ಒಂದು ವೆಬ್‌ಸೈಟ್ ಇದ್ದಿದ್ದರೆ ಅವರು ಇನ್ನೂ ಹೆಚ್ಚಿನ ಉತ್ಸಾಹದಿಂದ ಇನ್ನಷ್ಟು ಆಕರ್ಷಣೆಯನ್ನು ಒದಗಿಸಲು ಮುಂದಾಗುತ್ತಿದ್ದರು ಮತ್ತು ನಮ್ಮ ಪ್ರಕಾಶಕರಿಗೆ ಇಲ್ಲೂ ಒಂದು ಮಾದರಿಯಾಗುತ್ತಿದ್ದರೆಂದೇ ನನ್ನ ವಿಶ್ವಾಸ.

    ನಾನು ಕಂಡಂತೆ ವ್ಯಾಪಾರೀ ಧೋರಣೆಯಿಟ್ಟುಕೊಂಡು ಮುಂದುವರಿದರೆ ಆನ್‌ಲೈನ್ ವ್ಯಾಪಾರಿಗಳು ನೀಡುವ ರಿಯಾಯಿತಿಯನ್ನು ಯಾವುದೇ ಊರಿನ ಸಣ್ಣಪುಟ್ಟ ವ್ಯಾಪಾರಿ ಕೂಡ ಉಪಯೋಗಿಸಿಕೊಳ್ಳುವುದು ಸಾಧ್ಯವಿದೆ. ಒಂದು ಪ್ರತಿಕೊಳ್ಳುವ ಗ್ರಾಹಕನಿಗೇ ಸಾಧ್ಯವಾಗುವುದು ವ್ಯಾಪಾರಿಗಳಿಗೇಕೆ ಸಾಧ್ಯವಾಗದು? ಒಂದು ಸಣ್ಣ ಉದಾಹರಣೆ ನೀಡುತ್ತೇನೆ. ಮೊನ್ನೆ ಮೊನ್ನೆ ನನ್ನ ಒಬ್ಬ ಸಹೋದ್ಯೋಗಿಗೆ ಸುಹಾನಿ ಶಾಹ ಬರೆದ “ಅನ್‌ಲೀಶ್ ಯುವರ್ ಹಿಡನ್ ಪವರ್ಸ್” ಕೃತಿ ತುರ್ತಾಗಿ ಬೇಕನಿಸಿತು. (ಪುಸ್ತಕಗಳು ತುರ್ತಾದ ಓದಿಗೆ ತುತ್ತಾಗದಿದ್ದರೂ ಬೇಕನಿಸುವುದೆಲ್ಲ ತುರ್ತಾಗಿಯೇ ಎನ್ನುವುದೊಂದು ವಿಶೇಷ!) ಈ ಕೃತಿಯ ಅಧಿಕೃತ ಬೆಲೆ ರೂ.150.00. ಒಂದು ವೆಬ್‌ಸೈಟ್ನುಲ್ಲಿ ಈ ಕೃತಿ ನೂರ ಮುವ್ವತ್ತೈದಕ್ಕೆ ಲಭ್ಯವಿತ್ತು, ಸಾಗಾಟ ಖರ್ಚು ಉಚಿತ. ಇನ್ನೊಂದರಲ್ಲಿ ತೊಂಬತ್ತೆಂಟು ರೂಪಾಯಿಗಳಿಗೆ ಇತ್ತು. ಮಂಗಳೂರಿನ ಯಾವ ಪುಸ್ತಕ ವ್ಯಾಪಾರಿಗಳಲ್ಲೂ ಈ ಕೃತಿಯ ಪ್ರತಿ ಲಭ್ಯವಿರಲಿಲ್ಲ. ಕೊನೆಗೆ ಆತ ಒಂದೆರಡು ದಿನ ತಡವಾದರೆ ಅಡ್ಡಿಯಿಲ್ಲ ಎನ್ನುತ್ತ ಆನ್‌ಲೈನ್ ಮೊರೆ ಹೋದ. ಹದಿನೆಂಟನೆಯ ತಾರೀಕಿಗೆ ಆರ್ಡರ್ ಮಾಡಿದರೆ ಇಪ್ಪತ್ತೊಂದರಂದು ಪೂರ್ವಾಹ್ನ ಹನ್ನೊಂದರ ಹೊತ್ತಿಗೆ ಪುಸ್ತಕ ಕೈ ತಲುಪಿತು. ಇನ್ನೂ ಹಣ ಪಾವತಿ ಮಾಡಿಲ್ಲ, ಅಂದರೆ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದ್ದು ಪಾವತಿ ಜೂನ್ ಇಪ್ಪತ್ತಕ್ಕೆ ಮಾಡಬೇಕಿದೆ. ಇದನ್ನು ಒಬ್ಬ ವ್ಯಾಪಾರಿ ಮಾಡುವುದು ಕಷ್ಟವಿತ್ತೆ ಎನ್ನುವುದು ನನ್ನ ಪ್ರಶ್ನೆ. ಗ್ರಾಹಕ ಬಯಸಿದ್ದು ಹೆಚ್ಚೆಂದರೆ ಶೇಕಡಾ ಹತ್ತು ರಿಯಾಯಿತಿ ಎನ್ನುವುದನ್ನು ಗಮನಿಸಿ ಇದನ್ನು ಹೇಳುತ್ತಿದ್ದೇನೆ.

    ಇದೇನೂ ನೀವು ನಿಮ್ಮ ಲೇಖನದಲ್ಲಿ ಎತ್ತಿದ ಸಮಸ್ಯೆಗೆ ಪರಿಹಾರ ಎಂದು ಹೇಳುತ್ತಿಲ್ಲ. ಅದಕ್ಕೆ ಅಗತ್ಯವಾದ ಅನುಭವ, ಅದರ ಗಂಭೀರತೆಯ ಅರಿವು ನನಗಿಲ್ಲ. ವ್ಯಾಪಾರ ಮಾಡಿ ಹೇಳುತ್ತಿರುವುದಲ್ಲ ನಾನು, ಹೊರಗೆ ನಿಂತು ದೂರದ ಬೆಟ್ಟ ನುಣ್ಣಗೆ ಎನ್ನುವವನು ಎಂಬ ಅರಿವಿದೆ. ನನಗಿರುವುದೆಲ್ಲ ಪ್ರಾಮಾಣಿಕವಾದ ಕಳಕಳಿ ಅಷ್ಟೇ. ನನಗೆ ಗೊತ್ತು, ಇದು ಯಾವ ರೀತಿಯಲ್ಲೂ ವ್ಯವಸ್ಥೆಯನ್ನು ಸರಿಪಡಿಸಲಾರದು ಮತ್ತು ನಿಮ್ಮ concern ಇದ್ದಿದ್ದು ಸಣ್ಣಪುಟ್ಟ ಊರುಗಳ ಪುಸ್ತಕ ಮಾರಾಟಗಾರರ ಮೇಲೆ ಹೆಚ್ಚುತ್ತಿರುವ ಒತ್ತಡಗಳ ಬಗ್ಗೆ ಎಂದು. ತಿಮಿಂಗಿಲಗಳ ಮುಂದೆ ಸಣ್ಣಪುಟ್ಟ ಮೀನುಗಳ ಗೋಳು ಕೇಳುವವರಿಲ್ಲ ಎನ್ನುವುದು ನಿಜ. ಹಾಗೇನೆ ನಮ್ಮ ಸರಕಾರೀ ವ್ಯವಸ್ಥೆ ಸದಾ ಕಾಲ ಉಳ್ಳವರ ಮತ್ತು ಅವಕಾಶವಾದಿಗಳ ಅನುಕೂಲಕ್ಕೆ ತಕ್ಕಂತೆಯೇ ಇರುತ್ತವೆ ಅಥವಾ ಇರುವಂತೆ ಇವರ ಗುಂಪು ನೋಡಿಕೊಳ್ಳುತ್ತದೆ ಎನ್ನುವುದು ಕೂಡ ನಿಜ. ಆದರೂ ಸಣ್ಣ ಪುಟ್ಟ ಕನ್ನಡ ಪುಸ್ತಕ ವ್ಯಾಪಾರಿಗಳು, ಮಾಧ್ಯಮಿಕ-ಪ್ರೌಢಶಾಲೆಗಳು ಎಲ್ಲ ಒಂದಾಗಿ ಒಂದು ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಸಾಧ್ಯವಾದರೆ ಅದರಿಂದ ಪುಸ್ತಕಪ್ರಿಯರಿಗೂ ಪುಸ್ತಕ ಮಾರಾಟವನ್ನೇ ನೆಚ್ಚಿಕೊಂಡವರಿಗೂ ಅನುಕೂಲವಾದೀತು. ಇಂಥ ಒಂದು ಹೆಜ್ಜೆ ಪ್ರಸ್ತುತ ಸಂದರ್ಭದಲ್ಲಿ ತೀರ ಅನಿವಾರ್ಯವೂ ಹೌದು ಅನಿಸುತ್ತದೆ ನನಗೆ.

  21. ಅಶೋಕವರ್ಧನ ಜಿ.ಎನ್

    ಪ್ರಿಯ ನರೇಂದ್ರ ಪೈ
    ಬ್ಲಾಗ್ ಇರುವುದು ಸಾರ್ವಜನಿಕದಲ್ಲಿ ವಿಚಾರ ಮಂಡನೆಗೆ ಮತ್ತು ಚರ್ಚೆಗೆ. `ನಿರೀಕ್ಷಣ ಜಾಮೀನಿನಂತೆ’ ಕ್ಷಮಾಯಾಚನೆ ಸಲ್ಲದು.

    ನನ್ನ ಬಹುತೇಕ ನಿಲುವುಗಳ ಕುರಿತಂತೆ ನಿಮ್ಮ ಅಭಿಪ್ರಾಯಗಳು ವಿಕಸಿಸಿದ ಮತ್ತು ನೆಲೆಗೊಂಡ ಬಗೆ ನಿಮ್ಮ ಸಹೃದಯತೆಗೆ ಸಾಕ್ಷಿ – ಕೃತಜ್ಞ.

    ಸಣ್ಣದು ಸುಂದರ, ವಿಕೇಂದ್ರೀಕರಣ, ವೃತ್ತಿಯಷ್ಟೇ ಪ್ರವೃತ್ತಿಪೋಷಣೆಗೆ ಬಿಡುವು ಇತ್ಯಾದಿಗಳನ್ನು ಬುದ್ಧಿಪೂರ್ವಕವಾಗಿ ನೆನಪಿಸಿಕೊಳ್ಳುತ್ತಾ ಆ ಕಾಲದಲ್ಲಿ, ಅಂದರೆ ಗಣಕ ಅಂತರ್ಜಾಲಗಳ ಬಳಕೆ ಇರದ ಕಾಲದಲ್ಲಿ, ನನಗೆ ವಿಪಿಪಿ ಮೂಲಕ ಅರ್ಥಾತ್ mail order business ಎಂದೇ ತೊಡಗಬಹುದಾಗಿದ್ದ ವ್ಯಾಪಾರ ವಿಸ್ತರಣೆಯನ್ನು ನಾಜೂಕಾಗಿ ನಿರಾಕರಿಸಿದವನು ನಾನು. ಬೆಂಗಳೂರಿನಿಂದ ನನ್ನ ಪ್ರಕಟಣೆಗೆ ಬೇಡಿಕೆ ಬಂದರೆ ನವಕರ್ನಾಟಕ, ಸಪ್ನಾ ನೋಡಿ ಎಂದೇ ತಳ್ಳುವಾಗ ನನಗೆ ಒಂದು ಪ್ರತಿಗಿಂತ ಒಂದು ಸಾರ್ವಕಾಲಿಕ ಪ್ರತಿನಿಧಿ ಮುಖ್ಯನಾಗಿ ಕಾಣುತ್ತಾನೆ. ಡಿವಿಕೆ ಮೂರ್ತಿಯವರಿಗೆ ಕನ್ನಡ ಪ್ರಪಂಚದಲ್ಲಿ ಇನ್ನೂರಕ್ಕೂ ಮಿಕ್ಕು ವಿತರಣಾ ಕೇಂದ್ರಗಳಿದ್ದರೆ ನನಗಿಂದು ಉಜಿರೆ, ಸುಳ್ಯ, ಪುತ್ತೂರು, ಉಡುಪಿ, ಕಾಸರಗೋಡು, ಮೂಡಬಿದ್ರೆ, ಉಪ್ಪಿನಂಗಡಿ, ಸುರತ್ಕಲ್, ಕುಂದಾಪುರ ಮಾತ್ರವೇಕೆ ಮಂಗಳೂರಿನಲ್ಲೂ (ಸರ್ವಾಧಿಪತ್ಯವನ್ನೇ ಬಯಸುವ ಭಾರೀ, ಹಿರಿಯ ಪುಸ್ತಕ ಮಳಿಗೆಗಳವರೂ ಸೇರಿದಂತೆ) ಎಲ್ಲ ಪುಸ್ತಕ ವ್ಯಾಪಾರಿಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲವನ್ನೇ ಕೊಡುತ್ತಿದ್ದಾರೆ. ಅವರು ನನ್ನನ್ನು ಒಪ್ಪಿಕೊಂಡದ್ದಕ್ಕಿಂಥ ಎಷ್ಟೆಷ್ಟೋ ಪಾಲು ದೊಡ್ಡದಾಗಿ ಸ್ವತಂತ್ರರೂ ಹೌದು ಎನ್ನುವುದೇ ಈ ವಿಶ್ವಾಸದ ಗುಟ್ಟು.

    ಅಂತರ್ಜಾಲದಲ್ಲಿ ಪಟ್ಟಿ, ಪ್ರಚಾರಸಾಹಿತ್ಯ, ಕಾರ್ಡುಗಳ ಮೂಲಕ ಪಾವತಿ, ಕೊರಿಯರ್ ಮೂಲಕ ಸಾಗಣೆ ವ್ಯವಸ್ಥೆಗಳೆಲ್ಲಾ ಅಷ್ಟಷ್ಟು ಜನವಿರೋಧೀ ಓದು ವಿರೋಧೀ (ವ್ಯಾಯಾಮ ವಿರೋಧೀ ಕೂಡಾ :-)) ವ್ಯವಸ್ಥೆಯೆಂದೇ ನನ್ನ ಅಭಿಪ್ರಾಯ. ಪುಸ್ತಕ ಪ್ರಕಾಶನದ ಶ್ರೀರಾಮ್ ಮೊನ್ನೆ ಭೇಟಿಯಾಗಿದ್ದಾಗ “ತೇಜಸ್ವಿ ಬೆಂಗಳೂರಿನಲ್ಲಿ ಚಿಕಿತ್ಸೆಪಡೆಯುತ್ತಿದ್ದ ಕಾಲದಲ್ಲಿ ಈ ಅಕ್ಷರ, ಅಶೋಕ್, (ನವಕರ್ನಾಟಕದ) ರಾಜಾರಾಮ್ ಇಂಥವರನ್ನೆಲ್ಲಾ ಸೇರಿಸಿ ನಾವೊಂದು ಜಾಲ ಮಾಡಬೇಕ್ರೀ” ಎನ್ನುತ್ತಿದ್ದರೆಂದು ನನಗೆ ತಿಳಿಸಿದರು. ಬಹುಶಃ ಅವರ ಕಲ್ಪನೆ ನನ್ನ ಯೋಚನೆಯ ಆಸುಪಾಸಿನಲ್ಲೇ ಇದ್ದಿರಬಹುದು. ಇಂದು ಕನ್ನಡದಲ್ಲಿ ಪುಸ್ತಕದ ಯೋಗ್ಯತೆ, ರಿಯಾಯ್ತಿ, ಸುಲಭ ಪರಿಚಯ ಮತ್ತು ಸಂಗ್ರಹ ವ್ಯವಸ್ಥೆಯ ಅಚ್ಚುಕಟ್ಟುತನ ಯಾವುದೂ ಮುಖ್ಯ ಅಲ್ಲ. ಕನ್ನಡ ಓದುವ ಮನಸ್ಸು ಮತ್ತದನ್ನು ಉತ್ತೇಜಿಸುವ ಪರಿಸರದ್ದೇ ನಿಜವಾದ ಕೊರತೆ.

    ಆಧುನಿಕತೆ ಇರುವುದನ್ನು ಬಲಪಡಿಸುವುದಾದರೆ ಸಂತೋಷ. (ಉದಾಹರಣೆಗೆ ಈ ಬ್ಲಾಗ್!) ಕುಟ್ಟಿ ಹೊಸತನ್ನೇ ಸ್ಥಾಪಿಸುವುದಾದರೆ ನಾನಿಲ್ಲ. ನೀವು ಕೊಟ್ಟ ಜೈಕೋ ಪ್ರಕಟಣೆಯ ಉದಾಹರಣೆ: ನಿಮ್ಮವರು ತರಿಸಿಕೊಂಡದ್ದು, ರಿಯಾಯ್ತಿ ಪಡೆದದ್ದು ಖಂಡಿತಾ ಸರಿ. ಆದರೆ ಬೆಂಗಳೂರಿನಲ್ಲೇ ಸ್ವಂತ ಶಾಖೆ ಇರುವ ಜೈಕೋದವರು ಕನಿಷ್ಠ ಇಂಥದ್ದರ ಮಾಹಿತಿಯಾದರೂ ನಮ್ಮಲ್ಲಿ ಸುಲಭ ಲಭ್ಯವಾಗುವಂತೆ ಮಾಡಬೇಡವಿತ್ತೇ? ತಿಂಗಳು ತಿಂಗಳು ಮಂಗಳೂರಿಗೆ ಪ್ರತಿನಿಧಿ ಅಟ್ಟಿ (ನಾನೇ ಆಗಬೇಕೆಂದಿಲ್ಲ. ಇನ್ಯಾರೇ ಮಂಗಳೂರ ಪುಸ್ತಕ ವ್ಯಾಪಾರಿಯಲ್ಲಿಗೆ), ಬೇಡಿಕೆ ಪಡೆದು, ವಹಿವಾಟು ಗಟ್ಟಿ ಮಾಡಿಕೊಂಡ ನೆನಪು ಸರಿಯಿದ್ದರೆ ಆ ಒಂದು ಪುಸ್ತಕವನ್ನು ಅವರ ಮೂಲಕ ದಾಟಿಸುವ ವ್ಯವಸ್ಥೆ ಮಾಡಬೇಕಿತ್ತು.

    ಸರಿಯಾಗಿ ಇರುವುದಕ್ಕೆ ಅಭಿನಂದನೆ ಯಾಕೆ? ಆದರೂ ನಿಮ್ಮ ಒಳ್ಳೆಯ ಭಾವನೆಗಳಿಗೆ ಕೃತಜ್ಞ.
    ಅಶೋಕವರ್ಧನ

  22. abdul latif

    ತುಂಬಾ ಚೆನ್ನಾಗಿ ಬಿಡಿಸಿ ಇಟ್ಟಿದ್ದೀರಿ ಪುಸ್ತಕ ಲೋಕದ ಕರ್ಮ ಕಾಂಡವನ್ನು.

Leave a comment